ಚಿತ್ರದುರ್ಗ:
ತಾಲೂಕಿನಲ್ಲಿ ಕೆಲವು ಕಡೆ ಕೊಠಡಿಗಳ ಕೊರತೆಯಿರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅದಕ್ಕಾಗಿ ಕನಿಷ್ಟ 40 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಒತ್ತಾಯಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಸಾಂಸ್ಕøತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೊಠಡಿಗಳ ಸಮಸ್ಯೆ ಇರುವುದರಿಂದ ಕಾಲೇಜು ಆವರಣದಲ್ಲಿರುವ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ಒಂದು ಕೋಟಿ ಎಂಬತ್ತು ಲಕ್ಷ ರೂ.ಬಿಡುಗಡೆ ಮಾಡಲಾಗಿದೆ. ನನ್ನ ಅನುದಾನದಲ್ಲಿ ಕಟ್ಟಡಗಳ ರಿಪೇರಿಗೆ 25 ಲಕ್ಷ ರೂ. ನೀಡಿದ್ದೇನೆ. ಇನ್ನು ಕಟ್ಟಡಗಳ ರಿಪೇರಿಯಾಗಿಲ್ಲ ಎಂದು ಅಸಮಾಧಾನಗೊಂಡ ಶಾಸಕರು ಪ್ರಾಥಮಿಕ ಶಾಲೆಯಿಂದ ಹಿಡಿದು ಪ್ರೌಢಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತ ವಾತಾವರಣ ನಿರ್ಮಾಣವಾಗಬೇಕು. ಅನೇಕ ಶಾಲೆಗಳಲ್ಲಿ ಶಿಕ್ಷಕರುಗಳ ಕೊರತೆಯಿದೆ. ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಕರೆ ಇಲ್ಲದಿರುವುದು ದೊಡ್ಡ ದುರಂತ.ಹೀಗಾದರೆ ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಇದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ಏಷಿಯನ್ ಕ್ರೀಡಾಕೂಟದಲ್ಲಿ ಮಹಿಳಾ ಅಥ್ಲೆಟಿಕ್ಸ್‍ಗಳು ಹೆಚ್ಚಿನ ಗೋಲ್ಡ್ ಮೆಡಲ್ ಗಳಿಸಿ ಭಾರತಕ್ಕೆ ಹಿರಿಮೆ ತಂದಿದ್ದಾರೆ. ಓಟದಲ್ಲಿ ಬಂಗಾರದ ಪದಕ ತಂದಿರುವ ಪೂವಮ್ಮನಂತೆ ನೀವುಗಳು ತಯಾರಾಗಬೇಕು. ಅದಕ್ಕೆ ತಂದೆ-ತಾಯಿ, ಶಿಕ್ಷಕರುಗಳ ಪ್ರೋತ್ಸಾಹ ಬೇಕು. ಸಾಂಸ್ಕøತಿಕ, ಕ್ರೀಡಾ ಚಟುವಟಿಕೆ, ಎನ್.ಎಸ್.ಎಸ್., ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು ಮೂಡುತ್ತದೆ. ಏಷಿಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಗೆದ್ದವರು ಖರ್ಚಿಗೆ ದುಡ್ಡಿಲ್ಲ ಎಂದು ಅಣ್ಣ-ತಮ್ಮಂದಿರನ್ನು ಬೇಡುವಂತಾಗಿದೆ. ಕ್ರೀಡಾಪಟುಗಳಿಗೆ ಉತ್ತೇಜನ ಇಲ್ಲದ ಕಾರಣ ಭಾರತ ಕ್ರೀಡೆಯಲ್ಲಿ ಹಿಂದೆ ಬಿದ್ದಿದೆ ಎಂದು ವಿಷಾಧಿಸಿದ ಶಾಸಕರು ತಾಲೂಕಿನ ಕೆಲವು ಕಡೆ ಶಾಲೆಗಳಿಗೆ ಸುಣ್ಣಬಣ್ಣ ಬಳಿಯಲು ಸಾಧ್ಯವಾಗಿಲ್ಲ. ಶೇ.ನೂರಕ್ಕೆ ನೂರರಷ್ಟು ವಿದ್ಯಾವಂತರಾದಾಗ ಮಾತ್ರ ಭಾರತ ಬಲಿಷ್ಟ ರಾಷ್ಟ್ರವಾಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ವಿಭಾಗದ ಇಂಗ್ಲಿಷ್ ಪ್ರಾಧ್ಯಾಪಕಿ ಡಾ.ದಿವ್ಯದಾಸ್ ಫರ್ನಾಂಡಿಸ್ ಮಾತನಾಡಿ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ದ್ವಿತೀಯ ಪಿ.ಯು.ಸಿ.ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯ ತಿರುವು. ಇಲ್ಲಿ ನಿಮ್ಮ ಭವಿಷ್ಯವನ್ನು ಹೇಗೆ ನಿರ್ಧರಿಸಿಕೊಳ್ಳುತ್ತೀರ ಎಂಬುದು ಬಹಳ ಮುಖ್ಯ. ಅದಕ್ಕಾಗಿ ಆಕರ್ಷಣೆ, ಬಣ್ಣದ ಜಗತ್ತಿಗೆ ಮಾರು ಹೋಗದೆ ಶಿಕ್ಷಣದ ಕಡೆ ಹೆಚ್ಚಿನ ಗಮನ ಕೊಡಿ ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ನೀವು ಶಿಕ್ಷಣವಂತರಾದಾಗ ಮನೆ ಚೆನ್ನಾಗಿರುತ್ತದೆ. ಮನೆ ಚೆನ್ನಾಗಿದ್ದರೆ ಸಮಾಜ ಉತ್ತಮವಾಗಿರುತ್ತದೆ. ಆರೋಗ್ಯಪೂರ್ಣ ಸಮಾಜದಿಂದ ಸದೃಢ ದೇಶವನ್ನು ಕಟ್ಟಬಹುದು. ಕಠಿಣ ಪರಿಶ್ರಮ, ತಾಳ್ಮೆ, ಎಚ್ಚರಿಕೆಯಿಂದ ಶಿಕ್ಷಣಕ್ಕೆ ಒತ್ತು ಕೊಟ್ಟು ನಿಮ್ಮ ಗುರಿಯನ್ನು ತಲುಪಿ. ಭಯ, ನಿರಾಸೆ ವಿದ್ಯಾರ್ಥಿಗಳಲ್ಲಿ ಇದ್ದೇ ಇರುತ್ತದೆ. ಚಿಕ್ಕ ಚಿಕ್ಕ ಯೋಚನೆಗಳನ್ನು ಮಾಡದೆ ದೊಡ್ಡ ಗುರಿಯಿಟ್ಟುಕೊಂಡು ಜೀವನದಲ್ಲಿ ಯಶಸ್ಸು ಕಂಡುಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಎನ್.ಗಣೇಶ, ಹಿರಿಯ ಉಪನ್ಯಾಸಕಿ ಜೆ.ವಿಜಯ, ಸಾಂಸ್ಕøತಿಕ ಕಾರ್ಯದರ್ಶಿ ಹೆಚ್.ಶ್ರೀನಿವಾಸ್, ವಿದ್ಯಾರ್ಥಿ ಕಾರ್ಯದರ್ಶಿ ಸೌಮ್ಯ, ಸಹ ಕಾರ್ಯದರ್ಶಿ ನಿಸರ್ಗ ವೇದಿಕೆಯಲ್ಲಿದ್ದರು.