ತಿಪಟೂರು :
ತಂದೆಯೇ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ನೊಣವಿನಕರೆ ಹೋಬಳಿ, ಗೋಪಾಲಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ರಾತ್ರಿ ನಡೆದಿದೆ.
ಅಮೃತಾ ಮತ್ತು ತಂದೆ ಭೈರಪ್ಪ ನಡುವೆ ಆಸ್ತಿ ವಿಷಯದಲ್ಲಿ ಗಲಾಟೆ ಆರಂಭವಾಗಿ ಸೋಮವಾರ ರಾತ್ರಿ ನೊಣವಿನಕೆರೆ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿರುತ್ತಾರೆ. ಪೊಲೀಸ್ ಠಾಣೆಯಿಂದ ಪುನಃ ಗ್ರಾಮಕ್ಕೆ ಹಿಂದಿರುಗಿದಾಗ ಏಕಾ ಏಕಿ ಮೇಲೆರಗಿದ ತಂದೆ ಭೈರಪ್ಪ, ಅವರ ಸಹೋದರರಾದ ರಾಜಣ್ಣ, ರಾಮಣ್ಣ ಮತ್ತು ಅವರ ಹಿಂಬಾಲಕರು ಹಲ್ಲೆ ಮಾಡಿದ್ದಾರೆಂದು ಹಲ್ಲೆಗೊಳಗಾದ ಅಮೃತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ. ಅಮೃತಾಳು ಆರು ವರ್ಷಗಳ ಹಿಂದೆ ಸುನಿಲ್‍ನೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದು, ಇವರಿಗೆ ಆರು ವರ್ಷದ ಮಗಳಿದ್ದಾಳೆ. ಕಳೆದ ಮಾರ್ಚ್‍ಲ್ಲಿ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಇವರು ಗ್ರಾಮದಲ್ಲಿ ಉಳಿದುಕೊಂಡಿದ್ದರು.
ಜಮೀನಿನಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಯ ಫಲವತ್ತಾದ ಮಣ್ಣನ್ನು ಮಾರಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ಠಾಣೆಯಿಂದ ಮನೆಗೆ ಬಂದ ಅಮೃತ ಹಾಗೂ ತಂದೆ ಭೈರಪ್ಪ ನಡುವೆ ಮತ್ತೆ ಜಗಳ ಶುರುವಾಗಿ, ವಿಕೋಪಕ್ಕೆ ತಿರುಗಿ ಭೈರಪ್ಪ ಹಾಗೂ ಅಣ್ಣ ತಮ್ಮಂದಿರು ಸೇರಿ ಮಾರಕಾಸ್ತ್ರಗಳಿಂದ ಅಮೃತ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಪತಿ ಸುನಿಲ್ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಅಮೃತ ಆರೋಪಿಸಿದ್ದಾರೆ.
ಅಮೃತಾ ತಲೆಗೆ ಗಂಭೀರ ಗಾಯಗಳಾಗಿದ್ದು, ಸುನಿಲ್‍ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರೂ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಂದೆ ಭೈರಪ್ಪ ಅಕ್ರಮ ಸಂಬಂಧಗಳನ್ನು ಹೊಂದಿದ್ದು, ಕುಟುಂಬದ ಬಗ್ಗೆ ಬೇಜವಾಬ್ದಾರಿ ಹೊಂದಿದ್ದರು. ಎರಡು ಹೆಣ್ಣು ಮಕ್ಕಳನ್ನು ಸರಿಯಾಗಿ ಸಾಕದೆ, ಹಿರಿಯ ಮಗಳನ್ನು ಹೋಟೆಲಿನಲ್ಲಿ ಜೀತಕ್ಕೆ ಮಾರಿಕೊಂಡಿದ್ದರು. ಅಮೃತಾಳನ್ನು ಅನಾಥಾಶ್ರಮದಲ್ಲಿ ಬಿಟ್ಟಿದ್ದರಂತೆ, ಪತ್ನಿ ನಾಗಮ್ಮನ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
