ತುಮಕೂರು : ಬಾಲಕಿ ಮೇಲೆ ಅತ್ಯಾಚಾರ : ಆರೋಪಿಗೆ 5 ವರ್ಷ ಜೈಲು

ತುಮಕೂರು: 

        ಚಾಕ್ಲೆಟ್ ಕೊಡುತ್ತೇನೆಂದು ನಂಬಿಸಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಪೋಕ್ಸೋ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ರೂ 75 ಸಾವಿರ ರೂಪಾಯಿ ದಂಡ ವಿಧಿಸಿದೆ.

     ಕುಣಿಗಲ್ ತಾಲ್ಲೂಕು ಹತ್ರಿದುರ್ಗ ಹೋಬಳಿಯ ಗುಳ್ಳಳ್ಳಿಪುರ ಗ್ರಾಮದ ವ್ಯಾಪ್ತಿಗೆ ಸೇರಿದ ಠಾಣೆಯಲ್ಲಿ ನೊಂದ ಬಾಲಕಿಯ ಅಜ್ಜಿ ದೂರು ನೀಡಿದ್ದು, ದಿನಾಂಕ 28/07/2022ರಂದು ರಾತ್ರಿ ನೊಂದ ಬಾಲಕಿ ರಾತ್ರಿ ಮಲಗಿದ್ದಾಗ ಬೆಚ್ಚಿಬಿದ್ದು ಕೂಗಿದ್ದು, ಈ ವೇಳೆ ಬಾಲಕಿಯನ್ನು ಅಜ್ಜಿ ಸಂತೈಸಿಸಿ ಏನಾಯ್ತು ಎಂದು ವಿಚಾರಿಸಿದ್ದಾರೆ.

      9ನೇ ವರ್ಷ ವಯಸ್ಸಿನ ಬಾಲಕಿ 4ನೇ ತರಗತಿಯಲ್ಲಿ ಓದುತ್ತಿದ್ದು, ಆಕೆ ಊರಿನ ತಾತನ ಜೊತೆಗೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡು ಬರಲು ಶಾಲೆಯಿಂದ ಹೋಗಿದ್ದಳು. ವಾಪಸ್ ಬರಬೇಕಾದ್ರೆ ತಾತ ತನ್ನ ಮನೆಯ ಬಳಿ ಆಟೋದಿಂದ ಇಳಿದಿದ್ದಾರೆ. ಬಳಿಕ ನೊಂದ ಬಾಲಕಿ ಶಾಲೆಗೆ ತೆರಳಲು ಮುಂದಾದಾಗ ಅದೇ ಊರಿನ 30 ವರ್ಷದ ಅಪ್ಪಿ ಅಲಿಯಾಸ್ ರಾಮಚಂದ್ರ ಎಂಬಾತ ಬಾಲಕಿಗೆ ಚಾಕ್ಲೇಟ್ ಕೊಡುವುದಾಗಿ ನಂಬಿಸಿ, 1 ಗಂಟೆಯ ವೇಳೆ ತನ್ನ ಮನೆಗೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

     ಈ ಬಗ್ಗೆ ದಾಖಲಾದ ದೂರಿನ ತನಿಖೆಯ ಬಳಿಕ ಕುಣಿಗಲ್ ಪೊಲೀಸ್ ಅಧಿಕಾರಿ ಜಮಾಲ್ ಅಹಮದ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯಲ್ಲಿ ಆರೋಪ ಸಾಬೀತಾದ ಕಾರಣ, ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 75 ಸಾವಿರ ರೂ. ದಂಡವನ್ನು ನ್ಯಾಯಾಲಯ ವಿಧಿಸಿದೆ.

    ನೊಂದ ಬಾಲಕಿಗೆ ದಂಡದ ಮೊತ್ತದಲ್ಲಿ 70 ಸಾವಿರ ರೂ. ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 20 ಸಾವಿರ ರೂಪಾಯಿ ಸೇರಿ, ಒಟ್ಟು 90 ಸಾವಿರ ರೂಪಾಯಿಗಳನ್ನು ನೀಡುವಂತೆ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ(ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾರಾವ್ ಪಿ. ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ವಾದ ಮಂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap