ತುಮಕೂರು ಮಹಾನಗರ ಪಾಲಿಕೆ: ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ

 ತುಮಕೂರು:

ಬಿಜೆಪಿಗೆ 12, ಜೆಡಿಎಸ್ ಕಾಂಗ್ರೆಸ್‍ಗೆ ತಲಾ 10, 3 ಪಕ್ಷೇತರರ ಪಾಲು

      ತೀವ್ರ ಕುತೂಹಲ ಕೆರಳಿಸಿದ್ದ ತುಮಕೂರು ಮಹಾ ನಗರ ಪಾಲಿಕೆಗೆ ಆಗಸ್ಟ್ 31ರಂದು ನಡೆದಿದ್ದ ಚುನಾವಣೆಯ ಫಲಿತಾಂಶವು ಸೋಮವಾರ ಪ್ರಕಟವಾಗಿದ್ದು, 12 ಭಾರತೀಯ ಜನತಾ ಪಕ್ಷದ, 10 ಜನತಾ ದಳ (ಜಾತ್ಯಾತೀತ), 10 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಮೂವರು ಪಕ್ಷೇತರ ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ತುಮಕೂರು ನಗರದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಮತ ಎಣಿಕೆ ನಡೆಯಿತು.

     ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯದಲ್ಲಿ ಆರಂಭದಲ್ಲಿ ಅಂಚೆ ಮತ ಪತ್ರಗಳನ್ನು ಎಣಿಕೆ ಮಾಡಲಾಯಿತು. ನಂತರ ಬೂತ್‍ವಾರು ಎಣಿಕೆ ನಡೆಯಿತು. ಕೆಲವೇ ಗಂಟೆಗಳಲ್ಲಿ ಅಧಿಕೃತ ಫಲಿತಾಂಶ ಹೊರಬಿದ್ದಿತು. 10.30ರ ವೇಳೆಗಾಗಲೇ ಬಹುತೇಕ ಎಲ್ಲ ವಾರ್ಡ್‍ಗಳ ಚಿತ್ರಣ ಬಹಿರಂಗವಾಯಿತು.

      ಸತತವಾಗಿ ಕೆಲವು ಸುತ್ತುಗಳಲ್ಲಿ ಕಡಿಮೆ ಮತ ಪಡೆದವರು ಮತ ಎಣಿಕೆ ಕೇಂದ್ರಗಳಿಂದ ಹೊರ ನಡೆಯುತ್ತಿದ್ದರು. ಜಯದ ಹಾದಿಯಲ್ಲಿದ್ದವರು ಖುಷಿಯಿಂದ ಅಲ್ಲೇ ಅಲ್ಲೇ ಇದ್ದರು. ಗೆಲುವು ತಮ್ಮದಾದ ನಂತರ ಮತ ಎಣಿಕೆ ಕೇಂದ್ರಗಳಿಂದ ಹೊರಬಂದು ಮಾಧ್ಯಮ ಕೇಂದ್ರದ ಮೂಲಕ ನಗೆ ಬೀರುತ್ತಾ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರು ಎದುರಾದಾಗ ಖುಷಿಯಿಂದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು.

ಪತಿ ಸಂಭ್ರಮ-ಪತ್ನಿ ಹಿಂದೇಟು:

      ಮತ ಎಣಿಕೆ ಕೇಂದ್ರದಿಂದ ಹೊರಬಂದ ವಿಜೇತ ಅಭ್ಯರ್ಥಿಗಳತ್ತ ಟಿ.ವಿ. ಕ್ಯಾಮರಾಗಳು ಮತ್ತು ಮಾಧ್ಯಮದವರು ಮುಖ ಮಾಡಿದಾಗ ಈಗ ತಾನೇ ಹೊಸದಾಗಿ ಆಯ್ಕೆಯಾಗಿರುವ ಮಹಿಳಾ ಅಭ್ಯರ್ಥಿಗಳು ಪತ್ರಕರ್ತರ ಜೊತೆ ಮಾತನಾಡಲು ಹಿಂದೇಟು ಹಾಕುತ್ತಿದ್ದರು. ಅವರಿಗೆ ಧೈರ್ಯ ತುಂಬಿ ಮಾತನಾಡುವಂತೆ ಪಕ್ಕದಲ್ಲೇ ಇದ್ದ ಪತಿಯಂದಿರು ಪ್ರೋತ್ಸಾಹಿಸುತ್ತಿದ್ದರು. ಕೆಲವರು ಮುಂಚಿತವಾಗಿಯೇ ತರಬೇತಿ ಕೊಟ್ಟಂತೆ ಕಾಣುತ್ತಿತ್ತು.

      ವಿಜೇತರಾದ ಅಭ್ಯರ್ಥಿಗಳು ತಮ್ಮ ಜೊತೆಯಲ್ಲಿದ್ದವರೊಂದಿಗೆ ಖುಷಿಯಿಂದ ಹೊರಗೆ ತೆರಳುತ್ತಿದ್ದರು. ಈ ವೇಳೆಗಾಗಲೇ ಹೊರಗಡೆ ಇದ್ದ ಕಾರ್ಯಕರ್ತರಿಗೆ ಮಾಹಿತಿ ತಿಳಿದಿದ್ದರಿಂದ ಹಾರ ತುರಾಯಿಗಳೊಂದಿಗೆ ಅಭ್ಯರ್ಥಿಗಳನ್ನು ಬರಮಾಡಿಕೊಳ್ಳಲು ಕಾದಿದ್ದರು. ಸರ್ಕಾರಿ ಪಾಲಿಟೆಕ್ನಿಕ್‍ನಿಂದ ಹೊರ ಬರುತ್ತಿದ್ದಂತೆಯೇ ವಿಜಯದ ಘೋಷಣೆಯೊಂದಿಗೆ ಹಾರ ಹಾಕಿ ಬರ ಮಾಡಿಕೊಳ್ಳುತ್ತಿದ್ದರು. ಆನಂತರ ಮೆರವಣಿಗೆಯಲ್ಲಿ ಕರೆದೊಯ್ದ ದೃಶ್ಯಗಳು ಕಂಡುಬಂದವು.

      ನಗರದ 35 ವಾರ್ಡ್‍ಗಳಿಗೆ ನಡೆದ ಈ ಚುನಾವಣೆಯಲ್ಲಿ ಸುಮಾರು ಐದಾರು ವಾರ್ಡ್‍ಗಳು ತೀವ್ರ ಕುತೂಹಲ ಕೆರಳಿಸಿದ್ದವು. ಮಾಜಿ ಮೇಯರ್‍ಗಳ ಸ್ಪರ್ಧೆ, ಸತತವಾಗಿ ಹ್ಯಾಟ್ರಿಕ್ ಸಾಧಿಸಿರುವವರ ಸ್ಪರ್ಧೆ, ವಲಸೆ ಬಂದವರ ಆರ್ಭಟ, ಅಭಿವೃದ್ಧಿ ಮತ್ತು ಕಾಂಚಾಣದ ನಡುವೆ ಪೈಪೋಟಿ ಇತ್ಯಾದಿ ವಿಷಯಗಳಿಂದಾಗಿ ಕೆಲವು ವಾರ್ಡ್‍ಗಳು ಭರ್ಜರಿ ಪ್ರಚಾರದಲ್ಲಿ ಸಿಲುಕಿದ್ದವು. ಈ ವಾರ್ಡ್‍ಗಳ ಫಲಿತಾಂಶ ಏನಾಗಬಹುದೆಂಬ ಕುತೂಹಲ ಅಲ್ಲಿನ ನಾಗರಿಕರಲ್ಲಿ, ಮತದಾರರಲ್ಲಿ ಮನೆಮಾಡಿತ್ತು. ಕೆಲವರು ಗೆದ್ದೇ ಬಿಟ್ಟೆನೆಂಬ ಸಂಭ್ರಮದಲ್ಲಿದ್ದವರಿಗೆ ಈ ಚುನಾವಣೆ ದೊಡ್ಡ ಶಾಖ್ ನೀಡಿದೆ.

      ಮತ್ತೆ ಕೆಲವರು ಗೆಲ್ಲಬಹುದಾಗಿದ್ದರೂ ಒಳೊಂದೊಳಗಿನ ರಾಜಕೀಯ ಪ್ರಹಸನಗಳು ಸೋಲುವಂತೆ ಮಾಡಿರುವುದು ಹಲವು ವಾರ್ಡ್‍ಗಳಲ್ಲಿ ಕಂಡುಬರುತ್ತದೆ. ಇಂತಹವರ ಪರವಾಗಿ ಆ ವಾರ್ಡ್‍ಗಳ ನಾಗರಿಕರೆ ಮರುಕಪಡುತ್ತಾರೆ. ಕೆಲವರು ವಿಪರೀತ ಹಣ ಖರ್ಚು ಮಾಡಿ ಗೆದ್ದಿದ್ದಾರೆ ಎಂಬ ಮಾತುಗಳು ಕೆಲವು ಕಡೆ ಇವೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿಯೇ?

      ಈ ಬಾರಿಯೂ ತುಮಕೂರು ಮಹಾನಗರ ಪಾಲಿಕೆಗೆ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಕಾರಣ ಮೈತ್ರಿ ಆಡಳಿತ ಅನಿವಾರ್ಯವಾಗಿದೆ. ಫಲಿತಾಂಶವನ್ನು ಗಮನಿಸಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಆಡಳಿತ ನಡೆಸುವ ಸಾಧ್ಯತೆಗಳು ಹೆಚ್ಚಿವೆ.

      ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಇದೆ. ಲೋಕಸಭಾ ಚುನಾವಣೆಗಳತ್ತ ಈ ಎರಡೂ ಪಕ್ಷಗಳು ಗಮನ ಹರಿಸಿವೆ. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆಯಲ್ಲಿಯೂ ಇಂತಹ ಮೈತ್ರಿಯ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆದಿವೆ. ಮ್ಯಾಜಿಕ್ ನಂಬರ್ 18ಕ್ಕೆ ಯಾವ ಪಕ್ಷವೂ ತಲುಪಿಲ್ಲದ ಕಾರಣ ಹಾಗೂ ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸದ ಕಾರಣ ಕಾಂಗ್ರೆಸ್-ಜೆಡಿಎಸ್ ಮೈತ್ರಿಯತ್ತಲೇ ಹೆಚ್ಚಿನ ಚರ್ಚೆಗಳು ಆರಂಭವಾಗಿವೆ.

ಪಕ್ಷಗಳಿಗೆ ಇದು ಎಚ್ಚರಿಕೆಯ ಸಂದೇಶ:

       ಅದು ಯಾವುದೇ ಪಕ್ಷವಾಗಿರಲಿ ಪಕ್ಷಕ್ಕಾಗಿ ದುಡಿದವರಿಗೆ ಪ್ರಾಮಾಣಿಕವಾಗಿ ಟಿಕೆಟ್ ನೀಡಬೇಕು. ಇಲ್ಲದೆ ಹೋದರೆ ಜನತೆ ಸರಿಯಾದ ಪಾಠವನ್ನೇ ಕಲಿಸುತ್ತಾರೆಂದು ಹೇಳಿದವರು 30ನೇ ವಾರ್ಡಿನ ಬಿಜೆಪಿ ಬಂಡಾಯ ಅಭ್ಯರ್ಥಿ ವಿಷ್ಣುವರ್ಧನ (ಗ್ಯಾಸ್ ವಿಷ್ಣು).
ನಾನು 20 ವರ್ಷಗಳಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೂ ನನಗೆ ಟಿಕೆಟ್ ನೀಡಲಿಲ್ಲ. ಬದಲಾಗಿ ಕಾರ್ಯಕರ್ತರ ಪ್ರೋತ್ಸಾಹದಿಂದಾಗಿ ನಾನು ಸ್ಪರ್ಧೆಗೆ ಇಳಿದೆ. ವಾರ್ಡ್‍ನ ಮತದಾರರು ನನ್ನ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಬೆಂಬಲಿಸಿದರು. ಹಣ ಖರ್ಚು ಮಾಡದೆ ನಾನು ಗೆಲ್ಲಲು ಸಾಧ್ಯವಾಯಿತು. ಜನ ನನ್ನಿಂದ ಹಣ ನಿರೀಕ್ಷಿಸಲಿಲ್ಲ. ನಾನು ಮಾಡಿದ ಸೇವೆಗೆ ಪ್ರತ್ಯುತ್ತರವಾಗಿ ನನ್ನನ್ನು ಗೆಲ್ಲಿಸಿದರು. ಯಾವುದೇ ಪಕ್ಷವಿರಲಿ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದವರಿಗೆ ಟಿಕೆಟ್ ನೀಡಬೇಕು. ಇಲ್ಲವಾದರೆ ನನ್ನ ವಾರ್ಡ್‍ನಲ್ಲಿ ಆಗಿರುವ ಪರಿಸ್ಥಿತಿಯೇ ಆಗಬಹುದು. ಆದಕಾರಣ ಪಕ್ಷಗಳು ಎಚ್ಚೆತ್ತುಕೊಳ್ಳಬೇಕು ಎಂದರು.

      ನನ್ನ ಬಳಿ ಹಣವಿಲ್ಲ ಎಂದು ನನ್ನನ್ನು ಟಿಕೆಟ್ ಕೊಡದೆ ಕೈಬಿಟ್ಟರು, ನಿರ್ಲಕ್ಷಿಸಿದರು. ಆದರೆ ಇತಿಹಾಸ ಸೃಷ್ಟಿಯಾಗಿದೆ. ಕಾರ್ಯಕರ್ತರೇ ಒಗ್ಗೂಡಿ ನನ್ನನ್ನು ಗೆಲ್ಲಿಸಿದರು ಎಂದು ಅವರು ತಮ್ಮ ಅನಿಸಿಕೆಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು.

ಒಳ್ಳೆಯ ಕೆಲಸಕ್ಕೆ ಬೆಲೆ ಇರುತ್ತದೆ:

       ನಾವು ಸಮಾಜಕ್ಕೆ ಉತ್ತಮ ಕೆಲಸಗಳನ್ನು ಮಾಡುತ್ತಾ ಹೋದಾಗ ಯಾವತ್ತೂ ಬೆಲೆ ಇರುತ್ತದೆ. ಜನತೆ ನನ್ನನ್ನು ಗೆಲ್ಲಿಸಿದ್ದಾರೆ. ನಾನು ಯಾವತ್ತೂ ಅವರಿಗೆ ಋಣಿಯಾಗಿರುತ್ತೇನೆ. ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುತ್ತೇನೆ ಎನ್ನುತ್ತಾರೆ 8ನೇ ವಾರ್ಡ್‍ನಿಂದ ವಿಜಯಿಯಾಗಿರುವ ಕಾಂಗ್ರೆಸ್‍ನ ಸೈಯದ್ ನಯಾಜ್.

      ನನ್ನನ್ನು ಮತದಾರರು 1800 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಮುಂದೆ ವಾರ್ಡ್‍ನಲ್ಲಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುತ್ತೇನೆ. ಜನರ ಋಣ ತೀರಿಸುತ್ತೇನೆ ಎಂದರು.

ಅಭಿವೃದ್ಧಿಯತ್ತ ಗಮನ:

       ಅತ್ಯಂತ ಪ್ರತಿಷ್ಠಿತ ವಾರ್ಡ್‍ಗಳಲ್ಲಿ ಒಂದಾಗಿದ್ದ ಮೂರನೇ ವಾರ್ಡ್‍ನಲ್ಲಿ ಜೆಡಿಎಸ್‍ನ ಲಕ್ಷ್ಮೀನರಸಿಂಹರಾಜು ಜಯ ಗಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಗರಸಭೆಯಲ್ಲಿ ಅನುಭವ ಪಡೆದಿದ್ದೇನೆ. ಮೂಲಭೂತ ಸೌಲಭ್ಯ ಕಲ್ಪಿಸಲು ಹೆಚ್ಚು ಶ್ರಮಿಸುತ್ತೇನೆ. ನನ್ನ ವಾರ್ಡ್‍ನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಮತದಾರರು ಅವಕಾಶ ನೀಡಿಲ್ಲ. ಹಣಕ್ಕೆ ಮಣೆಯಾಕಿಲ್ಲ. ಮುಂದೆ ವಾರ್ಡ್ ಅಭಿವೃದ್ಧಿಗೆ ಗಮನ ಹರಿಸುವೆ ಎಂದರು.

ಮೂಲಭೂತ ಸೌಕರ್ಯಗಳಿಗೆ ಒತ್ತು:

       26ನೇ ವಾರ್ಡಿನಿಂದ ಜಯ ಸಾಧಿಸಿರುವ ಬಿಜೆಪಿಯ ಎಚ್.ಮಲ್ಲಿಕಾರ್ಜುನಯ್ಯ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪ್ರಸನ್ನಕುಮಾರ್ ಅವರಿಗಿಂತ 1111 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ವಾರ್ಡಿನಲ್ಲಿ ಮತದಾರರು ನನ್ನನ್ನು ಕೈಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಅವರಿಗೆಲ್ಲರಿಗೆ ನಾನು ಚಿರಋಣಿ ಎಂದರು.

Recent Articles

spot_img

Related Stories

Share via
Copy link