ತುಮಕೂರು ವಿವಿಯಲ್ಲಿ ಕೇಂದ್ರ ಸರಕಾರದ ವಿವಿಧ ಸೇವೆಗಳಿಗೆ ಪರೀಕ್ಷಾಪೂರ್ವ ತರಬೇತಿ

ತುಮಕೂರು

             ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಆಡಳಿತಾತ್ಮಕ ಸೇವಾ ಪರೀಕ್ಷೆಗಳಲ್ಲಿ ಕರ್ನಾಟಕದ ಫಲಿತಾಂಶ ತೀರಾ ನಿರಾಶಾದಾಯಕವಾಗಿದ್ದರೂ ಕರ್ನಾಟಕದ ಮಟ್ಟಿಗೆ ತುಮಕೂರು ಜಿಲ್ಲೆಯ ನಿರ್ವಹಣೆ ಅತ್ಯುತ್ತಮವಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ವಿಶ್ರಾಂತ ಅಧ್ಯಕ್ಷರಾದ ಡಾ. ವೈ ಕೆ ಪುಟ್ಟಸೋಮೇಗೌಡ ಅವರು ಅಭಿಪ್ರಾಯಪಟ್ಟರು.

             ಅವರು ದೇವರಾಜ ಅರಸು ಅಧ್ಯಯನ ಪೀಠ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಮತ್ತು ಕೃಷಿಕ್ ಸರ್ವೋದಯ ಫೌಂಡೇಶನ್ (ರಿ.) ತುಮಕೂರು ಶಾಖೆ ಇವರ ಜಂಟಿ ಸಹಭಾಗಿತ್ವದಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ನಾಗರಿಕ ಸೇವಾ ಪರೀಕ್ಷಾ ಪ್ರವೇಶ – 2018, ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ವಿವಿಧ ಆಡಳಿತಾತ್ಮಕ ಸೇವೆಗಳಿಗೆ ಪರೀಕ್ಷಾಪೂರ್ವ ತರಬೇತಿ ಕಾರ್ಯಕ್ರಮದ ಆರಂಭೋತ್ಸವವನ್ನು ಉದ್ಘಾಟಿಸಿ ಮಾತಾಡಿದರು.

           ವಿಶ್ವವಿದ್ಯಾನಿಲಯದ ವ್ಯಾಪ್ತಿಯ 70 ಕಾಲೇಜುಗಳನ್ನೂ ಪ್ರತಿನಿಧಿಸಿದ್ದ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗಗಳ ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿದ ಸಭಾಂಗಣವನ್ನು ಗಮನಿಸಿದ ಉದ್ಘಾಟಕರು ವೇದಿಕೆಯಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಇಂತಹ ಒಂದು ಕಾರ್ಯಾಗಾರ ನನ್ನ ಸೇವಾವಧಿಯಲ್ಲೇ ನಡೆದಿಲ್ಲ ಎಂದು ಪ್ರಶಂಸಿಸಿದರು.

           ಬಿಹಾರ ರಾಜ್ಯವನ್ನು ಜಂಗಲ್‍ರಾಜ್ ಎಂದು ಹೇಳುತ್ತಿದ್ದ ಕಾಲ ಈಗ ಇತಿಹಾಸವಾಗಿದೆ. ಐಐಟಿ ಮತ್ತು ಐಎಎಸ್ ಹಾಗೂ ಐಪಿಎಸ್ ಗಳಲ್ಲೂ ಕೂಡ ಬಿಹಾರದ ಮಕ್ಕಳು ಇಂದು ದೇಶದಲ್ಲೇ ಮುಂದಿದ್ದಾರೆ. ನಿಮ್ಮನ್ನು ಬಿಹಾರದ ಅಧಿಕಾರಿಗಳು ಆಳುವ ದಿನ ದೂರವಿಲ್ಲ. ಕರ್ನಾಟಕದ ವಿದ್ಯಾರ್ಥಿಗಳೂ ಕೂಡ ಸಾಧನೆ ಮಾಡಿ ಮುಂದಕ್ಕೆ ಬರಬೇಕು. ನಾಡಿಗೆ ಕೀರ್ತಿ ತರಬೇಕು ಎಂದು ಹಾರೈಸಿದರು.

            ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಪತಿ ನಾರಾಯಣ ಗೌಡ ಅವರು ಮಾತಾಡಿ ಕರಾವಳಿ ಜಿಲ್ಲೆ ಬ್ಯಾಂಕಿಂಗ್‍ಗೆ ಹೇಗೆ ಹೆಸರುವಾಸಿಯೋ ಹಾಗೇ ತುಮಕೂರು ಜಿಲ್ಲೆ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಸಿದ್ಧಿಯಾಗಬೇಕಿದೆ. ಆ ಸವಾಲನ್ನು ನೀವು ಸ್ವೀಕರಿಸಬೇಕಿದೆ. ಕೇವಲ ಐದು ವರ್ಷದ ಬಾಲಕನಾಗಿರುವಾಗ ಎರಡೂ ಕಣ್ಣು ಕಳೆದುಕೊಂಡ ಕುಣಿಗಲ್‍ನ ಮಲ್ಲಿಕಾರ್ಜುನ ಎಂಬವರು ಐಎಎಸ್ ಪಾಸು ಮಾಡಿ ದೆಹಲಿಯಲ್ಲಿ ಅಧಿಕಾರಿಯಾಗುವುದು ಸಾಧ್ಯವಿದ್ದರೆ ನಿಮಗೆ ಯಾಕೆ ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

           ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ವೈ ಎಸ್ ಸಿದ್ದೇಗೌಡ ಅವರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ವಿವಿ ವ್ಯಾಪ್ತಿಯ 400 ಮಂದಿ ವಿದ್ಯಾರ್ಥಿಗಳು ಒಂದು ಕಾರ್ಯಕ್ರಮಕ್ಕೆ ಹಾಜರಾಗಿರುವುದು ಇದೇ ಮೊದಲು ಎಂದು ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿಶ್ವವಿದ್ಯಾನಿಲಯ ಎಲ್ಲ ಗ್ರಾಮಾಂತರ ಹಿನ್ನೆಲೆಯ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧವಾಗಿದೆ ಎಂದರು.

ನಂತರದ ಗೋಷ್ಠಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಅಮರ್ ನಾರಾಯಣ ಮತ್ತು ಡಾ. ಜೀವನ್ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ದೇವರಾಜ ಅರಸು ಅಧ್ಯಯನ ಪೀಠದ ನಿರ್ದೇಶಕ  ನಿತ್ಯಾನಂದ ಬಿ ಶೆಟ್ಟಿ, ತುಮಕೂರು ಕೃಷಿಕ್ ಸರ್ವೋದಯ ಪೌಂಡೇಶನ್‍ನ ಅಧ್ಯಕ್ಷರಾದ ಶ್ರೀ ಚಿಕ್ಕಣ್ಣ, ಮತ್ತು  ಚಂದ್ರಣ್ಣ ಮೊದಲಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link