ತುಮಕೂರು ವಿವಿ ಗೌರವ ಡಾಕ್ಟರೇಟ್‌ ಪಟ್ಟಿ ಪ್ರಕಟ…!

ತುಮಕೂರು

     ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಸಮಾಜ ಸೇವಕ ಆರ್.ಎಲ್. ರಮೇಶ್‌ಬಾಬು ಹಾಗೂ ಚಿತ್ರ ನಿರ್ದೇಶಕ ರಂಗಕರ್ಮಿ ಟಿ.ಎಸ್.ನಾಗಾಭರಣ ಭಾಜನರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು, ವಿವಿಯಿಂದ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.

    ಗೌರವ ಡಾಕ್ಟರೇಟ್ ಸಂಬಂಧ ರಚಿಸಲಾಗಿದ್ದ ಕುವೆಂಪು ವಿವಿ ನಿವೃತ್ತ ಕುಲಪತಿ ಪ್ರೊ.ವೆಂಕಟರಾಮಯ್ಯ ಅವರ ನೇತೃತ್ವದ ಮೂವರು ತಜ್ಞರ ಆಯ್ಕೆ ಸಮಿತಿ ಶಿಫಾರಸ್ಸು ಮಾಡಿದ್ದ ಹೆಸರುಗಳ ಪೈಕಿ ಈ ಇಬ್ಬರ ಹೆಸರನ್ನು ಕುಲಾಧಿಪತಿಗಳಾದ ರಾಜ್ಯಪಾಲರು ಅಂತಿಮಗೊಳಿಸಿ ವಿವಿಗೆ ಅನುಮೋದನೆ ಪತ್ರ ರವಾನಿಸಿದ್ದು, ಆ.5ರಂದು ಸೋಮವಾರ ತುಮಕೂರು ವಿವಿಯ ಡಾ.ಶ್ರೀ ಶಿವಕುಮಾರ ಮಹಾಸಾಮೀಜಿ ಸಭಾಂಗಣದಲ್ಲಿ ನಡೆಯುವ ವಿವಿ 16 ನೇ ಘಟಿಕೋತ್ಸವದಲ್ಲಿ ಇಬ್ಬರು ಸಾಧಕರಿಗೂ ಗೌರವ ಡಾಕ್ಟರೇಟ್ ಅನ್ನು ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಲಿದ್ದಾರೆ ಎಂಬ ಮಾಹಿತಿ ಪತ್ರಿಕೆಗೆಲಭ್ಯವಾಗಿದೆ.
ಗೌಡಾ ಪುರಸ್ಕೃತರ ಪರಿಚಯ

 ಟಿ.ಎಸ್.ನಾಗಾಭರಣ :

    ಹಿರಿಯ ರಂಗಕರ್ಮಿ, ಚಿತ್ರನಿರ್ದೇಶಕ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು ಈ ಬಾರಿಯ ತುಮಕೂರು ವಿವಿ ಗೌರವ ಡಾಕ್ಟರೇಟ್ ಪುರಸ್ಕೃತರಲ್ಲಿ ಒಬ್ಬರಾಗಿದ್ದು, ಕಲಾ ಕ್ಷೇತ್ರದಲ್ಲಿ ಇವರ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಟಿ.ಎಸ್.ನಾಗಭರಣ ಅವರು ಕನ್ನಡ ಸಿನಿಮಾರಂಗದಲ್ಲಿ ಹಲವು ಸೃಜನಾತ್ಮಕ ಪ್ರಯೋಗಗಳ ಮೂಲಕ ರಾಷ್ಟ ಅಂತರಾಷ್ಟಿಯ ಮಟ್ಟದಲ್ಲಿ ಹೆಸರುಗಳಿಸಿದವರು. ಇವರ ನಿರ್ದೇಶನದ ಬ್ಯಾಂಕರ್ ಮಾರ್ಗಯ್ಯ, ಗ್ರಹಣ, ಸಂತಶಿಶುನಾಳ ಷರೀಪ, ಚಿನ್ನಾರಿಮುತ್ತ, ಕಲ್ಲರಳಿ ಹೂವ್ವಾಗಿ ಚಿತ್ರಕ್ಕೆ ರಾಷ್ಟಪ್ರಶಸ್ತಿಗಳ ಸಂದಿದ್ದು, ನಾಗಮಂಡಲ, ಜನುಮದ ಜೋಡಿ ಚಿತ್ರಗಳು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿವೆ.

     ಆರ್.ಎಲ್.ರಮೇಶ್‌ಬಾಬು:

    ತುಮಕೂರಿನ ಸಮಾಜಸೇವಕ, ಧಾರ್ಮಿಕ ಮುಖಂಡ ಆರ್.ಎಲ್. ರಮೇಶ್‌ಬಾಬು ಅವರು ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ತ್ಯಾಮಗೊಂಡ್ಲು ಮೂಲದವರಾದ ರಮೇಶ್‌ಬಾಬು ಅವರು ಕಳೆದ ನಾಲ್ಕುವರೆ ದಶಕಗಳಿಂದ ತುಮಕೂರಲ್ಲಿ ನೆಲೆಸಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ಬಡತನದಲ್ಲಿ ಹುಟ್ಟಿ ವರ್ತಕರಾಗಿ ಬೆಳೆದು ರೈಸ್ ಮಿಲ್ ಮಾಲೀಕರಾಗಿ ತಮಗೆ ಬರುವ ಆದಾಯದಲ್ಲಿ ಒಂದಷ್ಟು ಭಾಗವನ್ನು, ಧಾರ್ಮಿಕ, ಸಮಾಜ ಸೇವೆಗೆ ಮುಡಿಪಾಗಿಟ್ಟು ಜನಸೇವೆ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ವಾಸವಿ ದೇವಸ್ಥಾನ ಕನ್ಯಕಾ ಪರಮೇಶ್ವರಿ ದೇವಸ್ಥಾನ ಮಂಡಳಿಯ ಅಧ್ಯಕ್ಷರಾಗಿ, ಜ್ಞಾನಬುತ್ತಿ ಸತ್ಸಂಗ, ರೈಸ್ ಮಿಲ್ ಅಸೋಸಿಯೇಷನ್, ಕಾಮಧೇನು ಛಾರಿಟಬಲ್ ಟ್ರಸ್ಟ್, ಸಾಧನಾ ಶಿಕ್ಷಣ ಸಂಸ್ಥೆ ಹೀಗೆ ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು, ವಿಶ್ವವಿದ್ಯಾಲಯದ ಕಲಾ ವಿಜ್ಞಾನ ಕಾಲೇಜಿನಲ್ಲಿ ಸ್ವಾಮಿ ಜಪಾನಂದಜೀ ನೇತೃತ್ವದಲ್ಲಿ ಅನುಷ್ಠಾನಗೊಳಿಸುತ್ತಿರುವ ಗ್ರಾಮೀಣ ಬಡ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಆಹಾರ ವಿತರಿಸುವ ಯೋಜನೆಗೆ ನಿರಂತರ ಸಹಕಾರ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap