ತುರುವೇಕೆರೆ
ತಾಲ್ಲೂಕಿನ ಮುಸ್ಲಿಂ ಬಾಂಧವರು ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಬೆಳಗಿನಿಂದಲೇ ಮುಸ್ಲಿಂ ಬಾಂಧವರು ಮತ್ತು ಮಕ್ಕಳು ವಿಶೇಷ ಪೋಷಾಕು ಧರಿಸಿ ಪಟ್ಟಣದ ಬಡಾವಣೆ, ಬಾವಿಕೆರೆ, ಹೊರಪೇಟೆ ಮತ್ತು ಗುರುಭವನದ ಹಿಂಭಾಗದ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ದೇವರು ಅಲ್ಲಾನ ಶ್ಲೋಕಗಳನ್ನು ಪಟಿಸುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಇದಾದ ನಂತರ ಪಟ್ಟಣದ ಸಾವಿರಾರು ಮುಸ್ಲಿಂ ಬಾಂಧವರು ಮತ್ತು ಮಕ್ಕಳು ಕೆರೆಕೋಡಿಯಲ್ಲಿರುವ ಈದ್ಗಾಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅನಂತರ ಜಾಮೀಯ ಮಸೀದಿಯ ಗುರು ಮೌಲಾನಾ ಅವರು ಬಕ್ರೀದ್ ಹಬ್ಬದ ಮಹತ್ವ ಮತ್ತು ಮುಸ್ಲಿಂ ಬಾಂಧವರ ಕಾರ್ಯ ವೈಖರಿಯ ಬಗ್ಗೆ ಸುದೀರ್ಘವಾಗಿ ತಿಳಿಸಿದರು.
ತಾಲ್ಲೂಕು ಜಾಮಿಯಾ ಮಸೀದಿಯ ಅಧ್ಯಕ್ಷ ಅಸ್ಲಾಂಪಾಷಾ ಮಾತನಾಡಿ, ಕೊಡಗಿನಲ್ಲಿ ಅತಿವೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಆಡಂಬರವಿಲ್ಲದೆ ಸರಳವಾಗಿ ಆಚರಿಸುತ್ತಿದ್ದೇವೆ. ತಾಲ್ಲೂಕಿನಲ್ಲಿ ಹಿಂದಿನಿಂದಲೂ ಮುಸ್ಲಿಂಮರು ಮತ್ತು ಹಿಂದುಗಳು ಶಾಂತಿ ಮತ್ತು ಸೌಹಾರ್ದತೆಗಾಗಿ ಇಂದು ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದೇವೆ. ಸಮಾಜದಲ್ಲಿ ಹಿಂದೂ, ಮಸ್ಲಿಂ, ಕ್ರೈಸ್ತ ಧರ್ಮ ಸೇರಿದಂತೆ ದೇಶದ ಎಲ್ಲಾ ಸಮಾಜದವರಿಗೆ ಶಾಂತಿ, ಸಹೋದರತೆ ಉಂಟು ಮಾಡಲಿ ಎಂದು ಅಲ್ಲಾನಲ್ಲಿ ಬೇಡಿಕೊಳ್ಳುತ್ತೇವೆ ಎಂದರು.
ಪ್ರಾರ್ಥನಾ ನಂತರ ಮುಸ್ಲಿಂಮರು ಮತ್ತು ಮಕ್ಕಳು ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡಿದರು. ಇದೇ ವೇಳೆ ರಾಜ್ಯದ ನೆರೆಪೀಡಿತ ಕೊಡಗು ಜಿಲ್ಲೆಯ ಸಂತ್ರಸ್ತರ ನೆರವಿಗಾಗಿ ಹಣವನ್ನು ಸಂಗ್ರಹಿಸಿ ತಹಸೀಲ್ದಾರ್ ಮೂಲಕ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಮುಸ್ಲಿಂ ಮುಖಂಡರೊಬ್ಬರು ತಿಳಿಸಿದರು. ಹಬ್ಬದ ಪ್ರಯುಕ್ತ ಮುನ್ನಚ್ಚರಿಕಾ ಕ್ರಮವಾಗಿ ಸಿಪಿಐ ಜಗದೀಶ್ ಹಾಗೂ ಪಟ್ಟಣದ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಸೂಕ್ತ ಬಿಗಿ ಬಂದೋಬಸ್ತ್ ಮಾಡಿದ್ದರು. ಮುಸ್ಲಿಂ ಬಾಂಧವರು ತಾಲ್ಲೂಕಿನಾದ್ಯಂತ ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸಿದರು.








