ತುರುವೇಕೆರೆ : ಸರ್ಕಾರಿ ಪಾಲಿಟೆಕ್ನಿಕ್‍ ಅವ್ಯವಸ್ಥೆ ವಿರುದ್ಧ ಶಾಸಕ ಗರಂ!!

ತುರುವೇಕೆರೆ :

     ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಶಾಸಕ ಮಸಾಲ ಜಯರಾಮ್ ಅನಿರೀಕ್ಷಿತ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆಯನ್ನು ಕಂಡು ಶಾಲಾ ಪ್ರಾಂಶುಪಾಲ ಕೃಷ್ಣಪ್ಪನವರನ್ನು ತರಾಟೆಗೆ ತೆಗೆದುಕೊಂಡರು.

     ತುರುವೇಕೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ಗುಡೇನಹಳ್ಳಿಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮೇಲೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾಲೇಜಿಗೆ ಅನಿರೀಕ್ಷಿತವಾಗಿ ಶಾಸಕ ಮಸಾಲಜಯರಾಮ್ ಭೇಟಿನೀಡಿ ಕಾಲೇಜು ಪ್ರಾಂಶುಪಾಲರು ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿ ಅಸಮಾಧಾನ ವ್ಯಕ್ತಪಡಿಸಿದರು.

      ಸಿಬ್ಬಂದಿ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ನೋಡಲಾಗಿ ಕಾಲೇಜು ಸಿಬ್ಬಂದಿ ಒಂದು ಗಂಟೆ ಮುಂಚಿತವಾಗಿಯೇ ಕಾಲೇಜಿನಿಂದ ಹೊರಟು ಹೋಗಿರುವುದನ್ನು ಗಮನಿಸಿ ಪ್ರಾಶಂಪಾಲರ ವಿರುದ್ದ ಗರಂ ಆದರು, ನಂತರ ಕಾಲೇಜಿನ ಸುತ್ತಲೂ ಪರಿಶೀಲನೆ ನಡೆಸಿ ಕಾಲೇಜಿನ ಪರಿಸರದಲ್ಲಿ ಅಲ್ಲಲ್ಲಿ ಮದ್ಯದ ಬಾಟಲಿಗಳು ಕಂಡು ಬಂದು ಅನೈರ್ಮಲ್ಯ ಸೃಷ್ಟಿಯಾಗಿದ್ದದ್ದನ್ನು ಕಂಡು ಪ್ರಾಂಶುಪಾಲರ ಮೇಲೆ ಕೆಂಡಾಮಂಡಲವಾದರು. ಅಲ್ಲದೆ ನಾಲ್ಕೈದು ವರ್ಷಗಳಿಂದ ಸುಸ್ಥಿತಿಯಲ್ಲಿರುವ ಬಾಲಕಿಯರ ವಸತಿ ನಿಲಯ ಉಪಯೋಗಿಸದೆ ಸಣ್ಣ-ಪುಟ್ಟ ತಾಂತ್ರಿಕ ಕಾರಣಗಳನ್ನು ಒಡ್ಡಿ ಪಾಳು ಬೀಳುವಂತೆ ಮಾಡಲಾಗಿದೆ. ಅಲ್ಲದೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಆಡಳಿತ ಕಚೇರಿ ಸಮುಚ್ಚಯ ಉಪಯೋಗಿಸದೆ ಪಾಳುಬಿಟ್ಟಿರುವುದು ದುರಂತದ ಸಂಗತಿ ಎಂದು ಶಾಸಕರು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಅಲ್ಲಿಯೇ ರೈಟ್ಸ್ ಎಂಬ ಗುತ್ತಿಗೆ ಕಂಪನಿಯಿಂದ ನಿರ್ಮಾಣವಾಗುತ್ತಿರುವ ಆಡಿಟೋರಿಯಂ ಕಟ್ಟಡ ಕಳಪೆ ಗುಣಮಟ್ಟದಿಂದ ಕೂಡಿದ್ದು, ಶಾಸಕರು ಪರಿಶೀಲಿಸಿ ಕೆಲಸ ಮುಂದುವರೆಸದಂತೆ ಪ್ರಾಂಶುಪಾಲರಿಗೆ ಆಗ್ರಹಿಸಿದರು.

     ಇದೇ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಪ್ರಾಂಶುಪಾಲರ ವರ್ತನೆ ಖಂಡಿಸಿ ದೂರುಗಳ ಸುರಿಮಳೆಯನ್ನೆ ಶಾಸಕರ ಮುಂದಿಟ್ಟರು, ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮೇಲೆ ಕೋಟ್ಯಾಂತರ ರೂಪಾಯಿ ಅವ್ಯವಹಾರ ಮಾಡಿರುವ ದೂರುಗಳು ಬಂದಿದ್ದು ಇದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತನಿಖೆ ನಡೆಸುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಸಾರ್ವಜನಿಕ ದೂರುಗಳು ಬಂದರೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರಾಂಶುಪಾಲರಿಗೆ ಖಡಕ್ ಎಚ್ಚರಿಕೆ ನೀಡಿದರು.

     ಈ ಸಂದರ್ಭದಲ್ಲಿ ಶಾಸಕರ ಜೊತೆ ಸೋಮಣ್ಣ, ಮಂಜುನಾಥ್, ವಿ.ಟಿ.ವೆಂಕಟರಾಮಯ್ಯ, ಚಿದಾನಂದ್, ಹಾವಾಳರವಿ, ಸೇರಿದಂತೆ ಸ್ಥಳೀಯ ಮುಖಂಡರು ಸಾರ್ವಜನಿಕರು ಇದ್ದರು.

 

Recent Articles

spot_img

Related Stories

Share via
Copy link
Powered by Social Snap