ದಾವಣಗೆರೆ:
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನಿರ್ವಹಣೆ ಪಾಲಿಕೆಗೆ ಸವಾಲಾಗಿ ಪರಿಣಮಿಸಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಅಸಹಾಯಕತೆ ವ್ಯಕ್ತಪಡಿಸಿದರು.
ನಗರದ ಅಥಣಿ ಕಾಲೇಜಿನಲ್ಲಿ ಎಸ್‍ಎಸ್ ಬಡಾವಣೆ ನಾಗರೀಕರು ಆಯೋಜಿಸಿದ್ದ ಸ್ವಚ್ಛ, ಸುಂದರ ಬಡಾವಣೆ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯಲ್ಲಿ ನಿತ್ಯವೂ ಸುಮಾರು 160 ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದೇ ದೊಡ್ಡ ಸವಾಲಾಗಿ ಕಾಡುತ್ತಿದೆ ಎಂದು ಹೇಳಿದರು.
ಪಾಶ್ಚಿಮಾತ್ಯ ದೇಶಗಳ ಜನತೆ ಅಲ್ಲಿ ಶೇ.80 ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಿದರೂ ಸಹ ಅಲ್ಲಿ ಅದರ ನಿರ್ವಹಣೆ ಅಲ್ಲಿಯ ಆಡಳಿತಕ್ಕೆ ಸಮಸ್ಯೆಯಾಗಿ ಕಂಡು ಬಂದಿಲ್ಲ. ಏಕೆಂದರೆ, ಉತ್ಪತ್ತಿಯಾದ ಪ್ಲಾಸ್ಟಿಕ್ ಕಸವನ್ನು ಮರುಬಳಕೆ ಮಾಡುವ ತಂತ್ರಜ್ಞಾನವನ್ನು ಅಲ್ಲಿ ಅನುಷ್ಟಾನಗೊಳಿಸಲಾಗಿದೆ. ಆದರೆ, ದಾವಣಗೆರೆಯಲ್ಲಿ ಶೇ.20 ರಷ್ಟು ಪ್ಲಾಸ್ಟಿಕ್ ಕಸ ಉತ್ಪತ್ತಿಯಾಗುತ್ತಿದ್ದರೂ ತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇತ್ತೀಚೆಗೆ ಪಾಲಿಕೆಯಲ್ಲಿ ವ್ಯವಸ್ಥಿತ ಕಸ ಸಂಗ್ರಹಣೆ, ಯುಜಿಡಿ ವ್ಯವಸ್ಥೆ, ಹಸಿ ಮತ್ತು ಒಣ ಕಸ ಬೇರ್ಪಡಿಸುವ ಕೆಲಸಗಳಾಗುತ್ತಿವೆ. ಇದಕ್ಕೆ ಜನರು ಸಹಕಾರ ನೀಡಿದರೆ, ಸ್ವಚ್ಛತೆ ಕಾಪಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ದಾವಣಗೆರೆಗೆಯಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಎಸ್.ಎಸ್.ಬಡಾವಣೆ ಮಾದರಿಯಾಗಬೇಕು ಎಂದರು.
ಮಹಾನಗರ ಪಾಲಿಕೆಯ ಹಿರಿಯ ಸದಸ್ಯ ಶಿವನಳ್ಳಿ ರಮೇಶ್ ಮಾತನಾಡಿ, ವಿದೇಶಗಳಲ್ಲಿ ಅಲ್ಲಿಯ ನಾಗರೀಕರು ಆ ನೆಲದ ಕಾನೂನುಗಳನ್ನು ಪಾಲಿಸುತ್ತಾರೆ. ಆದರೆ, ನಮ್ಮಲ್ಲಿ ಕಾನೂನುಗಳನ್ನು ಪಾಲಿಸಲು ಮುಂದಾಗುತ್ತಿಲ್ಲ. ಹೀಗಾಗಿ ಕೆಲ ಸಮಸ್ಯೆಗಳಿಗೆ ನಾವು ತುತ್ತಾಗುತ್ತಿದ್ದೇವೆ. ವಿದೇಶಗಳಲ್ಲಿರುವಂತೆಯೇ ರೀತಿ, ನೀತಿಗಳು ನಮ್ಮಲಿ ಬರಬೇಕು. ಆಗ ಮಾತ್ರ ಸ್ವಚ್ಛ, ಸುಂದರ ನಗರ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಡಾ.ಸುರೇಂದ್ರ ಪ್ರಾಸ್ತಾವಿಕ ಮಾತನಾಡಿರು. ಕಾರ್ಯಕ್ರಮದಲ್ಲಿ ಕಸ ರಸ ಸಂಸ್ಥೆಯ ಡಾ.ಶಾಂತಭಟ್, ಪಾಲಿಕೆ ಸದಸ್ಯ ಎನ್.ತಿಪ್ಪಣ್ಣ, ಉಪ ಆಯುಕ್ತ ರವೀಂದ್ರ ಮಲ್ಲಾಪುರ, ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಸುಂಕದ್ ಮತ್ತಿತರರು ಉಪಸ್ಥಿತರಿದ್ದರು.
