ದಾವಣಗೆರೆ :
ನಮ್ಮ ದೇಶದಲ್ಲಿ ಶಿಕ್ಷಣ ಕಲಿತು, ವಿದೇಶಗಳಿಗೆ ಹೋಗಿ ಹಣದ ಹಿಂದೇ ಬೀಳದೇ, ಇಲ್ಲಿಯೇ ಉದ್ಯೋಗ ಪಡೆದು ಸೇವೆ ಸಲ್ಲಿಸಿ ಈ ಮಣ್ಣಿನ ಋಣ ತೀರಿಸಬೇಕೆಂದು ಕಿಂಗಸ್ಟನ್ ಜಮೈಕಾ ತಾಂತ್ರಿಕ ವಿ.ವಿಯ ವಿಶ್ರಾಂತ ಉಪಾಧ್ಯಕ್ಷ ಎ.ಬಿ.ಕುಲಕರ್ಣಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮೀಪದ ತೊಳಹುಣಸೆ ಬಳಿಯ ದಾವಣಗೆರೆ ವಿವಿಯ ಶಿವಗಂಗೋತ್ರಿ ಆವರಣದಲ್ಲಿ ಗುರುವಾರ ನಡೆದ ವಿವಿಯ ಹತ್ತನೇ ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣ ಕಲಿತು ದೊಡ್ಡ ಹುದ್ದೆಗಳಿಗೆ ಹೋಗವುವುದಷ್ಟೇ ಮುಖ್ಯವಲ್ಲ. ನಿಮಗೆ ಕಲಿಸಿದ ಈ ವಿವಿಗೆ, ದೇಶಕ್ಕೆ ಹಾಗೂ ವಿದ್ಯಾದಾನ ಮಾಡಿದ ಕೇಂದ್ರದ ಋಣ ತೀರಿಸುವುದು ಮುಖ್ಯವಾಗಿದೆ. ಆದರೆ, ಹಲವರು ವಿದೇಶಗಳಿಗೆ ಹೋಗಿ ಕೇವಲ ಹಣಕ್ಕೆ ಬೆನ್ನುಬಿದ್ದಿರುವುದು ಸರಿಯಲ್ಲ. ಬದಲಿಗೆ ಇಲ್ಲಿಯೇ ಕೆಲಸ ಪಡೆದು ನಮ್ಮ ಮಣ್ಣಿನ ಋಣ ತೀರಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಅರಿಯಬೇಕೆಂದು ಹೇಳಿದರು.
ಕೇವಲ ಒಂದೇ ವಿಷಯದ ಬಗ್ಗೆ ಅಧ್ಯಯನ ಮಾಡುವುದು ಒಳ್ಳೆಯದು. ಡ್ಯೂಯಲ್ ಪದವಿ ಕೋರ್ಸಗಳಿದ್ದು, ಮತ್ತೊಂದು ವಿಷಯ ಅಥವಾ ಕೌಶಾಲ್ಯಭಿವೃದ್ದಿಯಲ್ಲಿ ತರಬೇತಿ ಪಡೆಯುವುದರಿಂದ ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿಯಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಈಗಾಗಲೇ ವಿವಿಯಿಂದ ನಗರದಲ್ಲಿ ಐ.ಎ.ಎಸ್ ಸೇರಿದಂತೆ ಇತರೆ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲುದ್ದೇಶಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಲವರ ಶ್ರಮ, ಪ್ರಾಮಾಣಿಕ ಸೇವೆ ಹಾಗೂ ಸಂಘಟನಾ ಶಕ್ತಿಯಿಂದ ಇಂದು ದಾವಣಗೆರೆ ವಿಶ್ವ ವಿದ್ಯಾನಿಲಯ ಪ್ರತಿಷ್ಠಿತ ವಿವಿಗಳಲ್ಲಿ ಸ್ಥಾನ ಪಡೆದಿದ್ದು, ದೇಶದ ಟಾಪ್ 10ರ ಪಟ್ಟಿಯಲ್ಲಿ ಹೆಸರು ಬರುವಂತಾಗಲಿ ಎಂದು ಆಶಿಸಿದ ಅವರು, ನಾವು ಮಾಡುವ ಕಾರ್ಯದಲ್ಲಿ ನಮ್ಮ ಬದ್ಧತೆ ಪ್ರದರ್ಶಿಸಬೇಕಾಗಿದೆ. ನಮ್ಮ ಕಾರ್ಯ ಬೇರೆಯವರು ಒಪ್ಪಲಿ, ಬಿಡಲಿ ನಮಗೆ ಸರಿ ಅನಿಸಿದರೆ ಆ ಕಾರ್ಯವನ್ನು ಮಾಡಿಯೇ ತೀರಬೇಕು. ಹಾಗೂ ಅದು ಪ್ರಾಮಾಣಿಕ ಪ್ರಯತ್ನವಾಗಿರಬೇಕು ಎಂದರು.
ವಿಶ್ವವಿದ್ಯಾಲಯ ಈ ಒಂಬತ್ತು ವರ್ಷಗಳಲ್ಲಿ ಹಲವು ಹೊಸತನಗಳಿಗೆ ತನ್ನನ್ನು ಅರ್ಪಿಸಿಕೊಂಡು ಹತ್ತನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ನನ್ನ ವಿದ್ಯಾರ್ಥಿ ಶರಣಪ್ಪ ಹಲಸೆ ಈ ವಿವಿಯ ಉಪ ಕುಲಪತಿಯಾಗಿದ್ದು, ಅವರ ಅವಧಿಯಲ್ಲಿ ಮತ್ತಷ್ಟು ಉತ್ತಮ ಸಾಧನೆಗಳಿಗೆ ಸಾಕ್ಷಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ. ಆರ್ ಜಯಶೀಲ ಮಾತನಾಡಿ, ಶಿಕ್ಷಣಕ್ಕೆ ಅತೀ ಹೆಚ್ಚು ಒತ್ತು ನೀಡಿರುವ ಜ್ಞಾನಕಾಶಿ ಎಂದೇ ಹೆಸರಾದ ದಾವಣಗೆರೆ ಜಿಲ್ಲೆಯ ವಿ.ವಿ ಹತ್ತನೇ ವರ್ಷದತ್ತ ಸಾಗುತ್ತಿರುವುದು ಸ್ವಾಗತಾರ್ಹವಾಗಿದೆ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಹಳ್ಳಿಗಾಡಿನಿಂದ ಬಂದವರು ಹಲವಾರು ಕಷ್ಟಗಳ ನಡುವೆ ಪದವಿ ಸ್ನಾತಕೋತ್ತರ ಪದವಿ ಕಲಿಯುವವರೆಗೆ ಬಂದಿದ್ದಾರೆ ಎಂದರೆ, ನಿಮ್ಮ ಶ್ರಮ ಅಪಾರವಿದೆ. ಇಲ್ಲಿ ಉತ್ತಮವಾಗಿ ಕಲಿತು ತಮ್ಮ ಜೀವನವನ್ನು ರೂಪಿಸಿಕೊಳ್ಳಿ ಹಾಗೂ ಇತ್ತೀಚೆಗೆ ವಿದ್ಯಾರ್ಥಿಗಳು ಮಾದಕವಸ್ತು ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಇಲ್ಲಿರುವ ಯಾವ ವಿದ್ಯಾರ್ಥಿಯೂ ಆಸ್ಪದ ನೀಡಬಾರದು ಎಂದು ಕಿವಿಮಾತು ಹೇಳಿದರು.
ದಾವಣಗೆರೆ ವಿ.ವಿಯ ಕುಲಪತಿ ಎಸ್.ವಿ ಹಲಸೆ ಮಾತನಾಡಿ, ನಮಗೊಂದು ವಿಷನ್ ಇರಬೇಕು. ಯಾವುದನ್ನು ಓದಬೇಕು, ಹೇಗೆ ಓದಬೇಕೆಂಬುದನ್ನು ವಿದ್ಯಾರ್ಥಿಗಳು ಮೊದಲು ಅರಿತುಕೊಳ್ಳಬೇಕು. ಕಠಿಣ ಹಾಗೂ ಸತತ ಅಭ್ಯಾಸದಿಂದ ಮಾತ್ರ ಯಶಸ್ಸು ಸಾಧ್ಯ. ಯಶಸ್ಸಿಗೆ ಯಾವುದೇ ಒಳಮಾರ್ಗಗಳಿಲ್ಲ ಪರಿಶ್ರಮವೊಂದೇ ರಹದ್ದಾರಿ ಎಂದರು.
ಕಾರ್ಯಕ್ರಮದಲ್ಲಿ ವಿವಿಯ ಕುಲಸಚಿವ ಕಣ್ಣನ್, ಪರೀಕ್ಷಾಂಗ ಕುಲಸಚಿವ ಗಂಗಾನಾಯ್ಕ, ವಿವಿಯ ಸಿಂಡಿಕೇಟ್ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.