ದಾವಣಗೆರೆ :
ವಿಶ್ವವಿದ್ಯಾಲಯದ ಸ್ಥಾಪನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದಿಟ್ಟ ನಿರ್ಧಾರ, ಶ್ರಮ ಮರೆಯುವಂತಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಅಭಿವೃದ್ಧಿ ಕ್ರಿಯಾಶೀಲ ಸಮಿತಿಯ ಅಧ್ಯಕ್ಷ ಎಂ.ಎಸ್.ಕೆ.ಶಾಸ್ತ್ರಿ ಅಭಿಪ್ರಾಯಪಟ್ಟರು.
ನಗರದ ರೋಟರಿ ಭವನದಲ್ಲಿ ಸೋಮವಾರ ದಾವಣಗೆರೆ ವಿವಿ ಸ್ಥಾಪನೆಯಾಗಿ 10 ವರ್ಷದ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಣಗೆರೆ ವಿವಿ ಸ್ಥಾಪನೆಗೆ ಯಡಿಯೂರಪ್ಪ ಅವರ ದಿಟ್ಟ ನಿರ್ಧಾರವೇ ಕಾರಣವಾಗಿದೆ. ಅವರಿಗೆ ನಮ್ಮ ಕೋಟಿ ಕೋಟಿ ನಮನಗಳು ಎಂದರು.
ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ನಾಗಲೋಟದಲ್ಲಿ ವಿದ್ಯೆ ಕಲಿಯುತ್ತಾ, ರಾಷ್ಟ್ರಕ್ಕೆ ತಮ್ಮದೆ ಆದ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಮುಂದೆಯೂ ಉತ್ತಮ ಶಿಕ್ಷಣದೊಂದಿಗೆ ಅಭಿವೃದ್ಧಿ ಹೊಂದುತ್ತಾ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪಡೆಯಲಿ ಎಂದರು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದಾವಣಗೆರೆ ವಿಶ್ವವಿದ್ಯಾಲಯವನ್ನು ಡಿಮ್ಡ್ ವಿಶ್ವವಿದ್ಯಾಲಯ, ಅಟಾನಮಸ್ ವಿಶ್ವವಿದ್ಯಾಲಯವನ್ನಾಗಿ ಮಾಡಿಸಿಕೊಳ್ಳುವ ಹುನ್ನಾರ ನಡೆಸಿದ್ದವು. ಇದರ ವಿರುದ್ಧ ಕೇಂದ್ರ ಸಂಪನ್ಮೂಲ ಸಚಿವರಿಗೆ ಭೇಟಿ ಮಾಡಿ, ತಡೆಯಲಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕೆ.ಜಿ.ಶರಣಪ್ಪ, ಮಹದೇವಪ್ಪ ಬಿ.ತಳವಾರ್, ಎಂ.ಪ್ರೇಮಲತಾ, ಎಲ್.ಎಸ್.ಹೇಮಾವತಿ, ಹೆಚ್.ಜೆ. ಶಾಂತಕುಮಾರ್, ಎಸ್.ಎಂ.ಪ್ರಶಾಂತಕುಮಾರ್, ಪ್ರಕಾಶ್ ಚವ್ಹಾಣ್, ಗೌಡ್ರ ಬಸವರಾಜಪ್ಪ, ಡಿ.ಎಚ್.ಬಸವನಗೌಡ ಭಾನುವಳ್ಳಿ, ಬಿ.ರಾಜು ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
