‘ದಾಹ’ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ :

                     ಗುರುಗಳು ರಾಷ್ಟ್ರ ನಿರ್ಮಾಣದ ಪ್ರಮುಖರು ಹಾಗಾಗಿ ದೇಶದಲ್ಲಿ ಜೈ-ಜವಾನ್, ಜೈ-ಕಿಸಾನ್ ಎನ್ನುವಂತೆ ಜೈ-ಶಿಕ್ಷಕ್ ಎನ್ನುವ ಮಂತ್ರ ಮೂಡಬೇಕು ಎಂದು ಬರಹಗಾರ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಹೇಳಿದರು.
                   ಪಟ್ಟಣದ ರೋಟರಿ ಕನ್ವೆಷನ್‍ಹಾಲ್‍ನಲ್ಲಿ ರೋಟರಿ ಕ್ಲಬ್ ಏರ್ಪಡಿಸಿದ್ದ ಗುರುನಮನ, ನೇಷನ್ ಬಿಲ್ಡರ್ ಅವಾರ್ಡ್ ಪ್ರದಾನ ಹಾಗೂ ಸಾಹಿತಿ ಎಂ.ವಿ.ನಾಗರಾಜ್‍ರಾವ್‍ರವರ ‘ದಾಹ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವಾಲಯಗಳು ಮಾನವನ ಧಾರ್ಮಿಕ ಶಕ್ತಿ ಕೇಂದ್ರ ಹಾಗೆಯೇ ಶಾಲೆಗಳು ಮನುಷ್ಯನಿಗೆ ಸಂಸ್ಕಾರ ನೀಡುವ ಕೇಂದ್ರಗಳು ಎಂದರು.
                    ದೇಶದಲ್ಲಿ ಉತ್ತಮ ರಾಷ್ಟ್ರನಿರ್ಮಾಣಕ್ಕೆ ಪ್ರಮುಖ ಪಾತ್ರ ವಹಿಸುವವರೇ ಶಿಕ್ಷಕರು, ಶಿಕ್ಷಕರು ನಾಲ್ಕು ಗೋಡೆಗಳ ಮಧ್ಯೆ ಪಾಠ ಹೇಳಿಕೊಡುವ ಜೊತೆಗೆ ಹೊರಗಿನ ಪ್ರಪಂಚವನ್ನು ಮಕ್ಕಳಿಗೆ ತಿಳಿಸಬೇಕು, ಅಬ್ದುಲ್‍ಕಲಾಂನಂತಹ ಮಹಾನ್ ವಿಜ್ಞಾನಿ ಶಾಲೆಯೊಳಗೆ ಕಲಿತದ್ದಕ್ಕಿಂತ ಹೊರಗಿನ ಪ್ರಪಂಚದ ಎಲ್ಲಾ ಹಾಗುಹೋಗುಗಳನ್ನು ತಿಳಿದು ವಿಜ್ಞಾನಿಯಾಗಿ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದರು ನಂತರ ರಾಷ್ಟ್ರಪತಿಯಾಗಿ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದವರು, ಇಂತಹ ಸಾಧನೆಗಳಿಗೆ ಶಿಕ್ಷಣ ಹಾಗೂ ಶಿಕ್ಷಕರು ನೀಡಿದ ಬೋಧನೆಯ ಸಹಕಾರವೇ ಕಾರಣ ಎಂದರು.
                   ಸಾಹಿತಿ ಎಂ.ವಿ.ನಾಗರಾಜ್‍ರಾವ್‍ರವರು 250ಪುಸ್ತಕಗಳನ್ನು ಬರೆದು ಉತ್ತಮ ಸಾಧನೆ ಮಾಡಿದ್ದಾರೆ, ಹಿಂದಿ ಭಾಷೆಯಿಂದ ಕನ್ನಡಕ್ಕೆ  ಸುಲಲಿತವಾಗಿ ತರ್ಜುಮೆ ಮಾಡುವ ಅವರ ಪ್ರೌಢಿಮೆ ಬಗ್ಗೆ ನಮಗೆ ಸಂತೋಷವಾಗುತ್ತದೆ ಎಂದರು.
ಸಾಹಿತಿ ಎಂ.ವಿ.ನಾಗರಾಜ್‍ರಾವ್ ಮಾತನಾಡಿ, ಬಿ.ಎಂ.ಶ್ರೀಕಂಠಯ್ಯ, ತೀ.ನಂ.ಶ್ರೀಕಂಠಯ್ಯ, ಕೆ.ವಿ.ಪುಟ್ಟಪ್ಪ, ಕೃಷ್ಣಶಾಸ್ತ್ರಿ ಇವರೆಲ್ಲರೂ ಆದರ್ಶ ಗುರುಗಳು, ಇವರ ಗುರುಪರಂಪರೆ ಮರೆಯುವಂತಹದ್ದಲ್ಲ, ಮಕ್ಕಳಿಗೆ ಗುರುವಿನ ಹಾಗೂ ಅವರ ಪರಂಪರೆ ಬಗ್ಗೆ ತಿಳಿಸುವ ಅಗತ್ಯತೆ ಇದೆ ಎಂದ ಅವರು, ನನ್ನ ಜೀವನದಲ್ಲಿ 37ವರ್ಷ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ, ನಿವೃತ್ತಿಯಾಗಿ 19ವರ್ಷ ಸಂದಿವೆ ಇಂದಿಗೂ ನನ್ನ ಶಿಷ್ಯಂದಿರು ನನ್ನನ್ನು ನೆನಪಿಸಿಕೊಳ್ಳುತ್ತಾರೆ ಅದನ್ನು ಮರೆಯಲಾರೆ ಎಂದರು.
                 ಉಪನ್ಯಾಸಕ ಆರ್.ಶ್ರೀನಿವಾಸಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಜನರು ಶಿಕ್ಷಣದಿಂದ ದೂರವಿರುತ್ತಾರೆ ಅವರಿಗೆ ಶಿಕ್ಷಣ ನೀಡುವುದು ಒಂದು ಉತ್ತಮವಾದ ಕೆಲಸ ಇಂದು ಎಲ್ಲಾ ಸಾಧಕರನ್ನು ಸೃಷ್ಠಿ ಮಾಡಿರುವವರೇ ಗುರುಗಳು, ಅವರನ್ನು ಗುರುತಿಸುವ ಕೆಲಸವಾದಾಗ ಗುರುಗಳ ಜವಬ್ದಾರಿ ಇನ್ನಷ್ಟು ಹೆಚ್ಚುತ್ತದೆ ಎಂದರು.
                 ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಸ್.ರಮೇಶ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣವು ಗುರುಗಳಿಂದಲೇ ರೂಪುಗೊಳ್ಳುವುದು, ತಮ್ಮ ಶಿಷ್ಯಂದಿರಿಗೆ ಯಾವುದರ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಮಾಡಿ ಕಲಿಸುತ್ತಾರೆ ಅದನ್ನೇ ಮಕ್ಕಳು ಕಲಿಯುವುದು ಎಂದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಉಪನ್ಯಾಸಕರುಗಳಾದ ಎಚ್.ಎಸ್.ಶಿವಯೋಗಿ, ಡಾ.ಆರ್.ಶ್ರೀನಿವಾಸಯ್ಯ, ಸ್ವಾಮಿಗೌಡ, ತಿಮ್ಮನಹಳ್ಳಿ ಉಪನ್ಯಾಸಕ ರೇಣುಕುಮಾರ್(ಆರ್.ಕೆ), ಸಾಸಲು ಸಂತೋಷ, ಶಬಾನಖಾನಂ, ರವೀಶ್,ಹನುಂತರಾಯಪ್ಪನವರುಗಳನ್ನು ಸನ್ಮಾನಿಸಲಾಯಿತು. ಬಿಇಓ ಕಾತ್ಯಾಯಿನಿ, ರೋಟರಿ ಕ್ಲಬ್ ಕಾರ್ಯದರ್ಶಿ ಎಂ.ದೇವರಾಜು, ಸದಸ್ಯರಾದ ಎಂ.ಎಲ್.ಮಲ್ಲಿಕಾರ್ಜುನಯ್ಯ, ಸಿ.ಡಿ.ಸುರೇಶ್, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link