ದಾವಣಗೆರೆ:
ಅಂಚಿನಲ್ಲಿರುವ ಆದಿವಾಸಿಗಳ ನೋವಿನ, ದುರಂತದ ಕಥನಗಳು ಜ್ಞಾನದ ಪರಿಧಿಯೊಳಗೆ ಬರಲಿ ಎಂದು ಭಾಷಾತಜ್ಞ ಗಣೇಶ್ ಎನ್. ದೇವಿ ಆಶಯ ವ್ಯಕ್ತಪಡಿಸಿದರು.
ಹರಿಹರದ ಹೊರ ಭಾಗದಲ್ಲಿರುವ ಮೈತ್ರಿವನದ ಪ್ರೊ.ಬಿ.ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ನಾವು ನಮ್ಮಲ್ಲಿ ಬಳಗದಿಂದ ಏರ್ಪಡಿಸಿರುವ ಜನ ಕಥನಗಳು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಬ್ರಿಟೀಷ್ ವಸಹತುಶಾಹಿ ಸರ್ಕಾರ ಬಂದಾದ ಮೇಲೆ, ಆಸ್ತಿ ಇರುವವರಿಗೆ ನಾಗರೀಕ ಗುರುತು ಕೊಡಲು ಆರಂಭಿಸಲಾಯಿತು. ಆದರೆ, ಆಸ್ತಿ ಮತ್ತು ಜಮೀನು ಹೊಂದಿರದ ಆದಿವಾಸಿಗಳನ್ನು, ಅಲೆಮಾರಿಗಳನ್ನು ನಾಗರೀಕರೇ ಅಲ್ಲ. ಇವರೆಲ್ಲರೂ ಕಳ್ಳರು ಎಂಬ ಹಣೆಪಟ್ಟಿಕಟ್ಟಿ ಆ ಸಮುದಾಯಗಳ ಪಟ್ಟಿ ಮಾಡಿ ಟ್ರೈಬಲ್, ಕ್ರಿಮಿನಲ್ ಟ್ರೈಬ್ ಎಂಬುದಾಗಿ ಕರೆಯಲಾರಂಭಿಸಿ, ಅಂಚಿಗೆ ತಳ್ಳಲಾರಂಭಿಸಿದರು ಇದು ಇಂಡಿಯಾದ ಚರಿತ್ರೆಯ ಬಹುದೊಡ್ಡ ಕಳಂಕವಾಗಿದೆ ಎಂದು ವಿಶ್ಲೇಷಿಸಿದರು.
ಹೀಗೆ ಗುರುತಿಸಲ್ಪಟ್ಟ ಆದಿವಾಸಿಗಳನ್ನು ಹಿಟ್ಲರ್ ಯಹೂದಿಗಳಿಗೆ ನೀಡಿದಕ್ಕಿಂತ ಹೆಚ್ಚಿನ ರೀತಿಯಲ್ಲಿ ಹಿಂಸಿಸಿದ್ದರು. ಇಂಥಹ ದುರಂತದ ಕಥನಗಳು ಏಕೆ ಜ್ಞಾನದ ಭಾಗವಾಗಿಲ್ಲ ಎಂಬುದರ ಬಗ್ಗೆ ಬರಹಗಾರರು ಪ್ರಶ್ನೆ ಹಾಕಿಕೊಳ್ಳುವ ಮೂಲಕ ಬರೀ ಪ್ರೇಮ, ವಿರಹದ ಬಗ್ಗೆ ಮಾತ್ರ ಸಾಹಿತ್ಯ ರಚಿಸದೇ, ಅಂಚಿಗೆ ಸರೆಯಲ್ಪಟ್ಟಿರುವ ಆದಿವಾಸಿಗಳ, ಅಲೆಮಾರಿಗಳ ನೋವಿನ ಕಥನಗಳನ್ನು ಜ್ಞಾನದ ಭಾಗವನ್ನಾಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಮಾಜದಲ್ಲಿರುವ ಜಾತಿ ಮತ್ತು ಶ್ರೇಣೀಕೃತ ವ್ಯವಸ್ಥೆಯಿಂದಾಗಿ ಹಲವು ಅಲಕ್ಷಿತ ಸಮುದಾಯಗಳನ್ನು ಜ್ಞಾನದ ಪರಿಧಿಯಿಂದ ಹೊರಗಿಡಲಾಗಿದೆ. ಆ ಸಮುದಾಯಗಳ ಜನರಿಂದ ಉತ್ಪಾದನೆಯಾಗುವ ಜ್ಞಾನ ಭಂಡಾರವನ್ನು ಜ್ಞಾನದ ವ್ಯಾಪ್ತಿಗೆ ತರಲಾಗಿಲ್ಲ. ಹೀಗಾಗಿ ಜನರ ಜ್ಞಾನವನ್ನು ಜ್ಞಾನದ ವ್ಯಾಪ್ತಿಗೆ ತರಬೇಕಾಗಿದೆ ಎಂದ ಅವರು, ಆಯಾ ಸಮುದಾಯಗಳ ಜನರ ಕಥನಗಳು, ಆಯಾ ಜನಾಂಗೀಯ ಭಾಷೆಯಲ್ಲಿಯೇ ಇರುತ್ತವೆ. ಹೀಗಾಗಿ ಪ್ರತಿ ಭಾಷೆಯಲ್ಲೂ ಒಂದು ಲೋಕದೃಷ್ಟಿ ಇರುತ್ತದೆ. ಬ್ರಿಟೀಷರ ಆಗಮನಕ್ಕೂ ಮುಂಚೆ ಇಂಡಿಯಾದಲ್ಲಿ ಇದ್ದ ಸಾವಿರಾರು ಭಾಷೆಗಳ ಪೈಕಿ, ಆಧುನಿಕ ಭಾಷಾ ರಾಜಕಾರಣ ಆದ ಮೇಲೆ ಹಲವು ಭಾಷೆಗಳು ಅಂಚಿಗೆ ತಳ್ಳಲ್ಪಟ್ಟವು. ಕೆಲವು ಒಪ್ಪಿತ ಭಾಷೆಗಳನ್ನು ಮಾತ್ರ ಸಂವಿಧಾನದಲ್ಲಿ ಸೇರಿಸಿ, ಇನ್ನೂ ಅಸಂಖ್ಯಾತ ಭಾಷೆಗಳನ್ನು ಕೈಬಿಡಲಾಗಿದೆ ಎಂದು ಹೇಳಿದರು.
ದೇಶದಲ್ಲಿರುವ 400ಕ್ಕೂ ಹೆಚ್ಚು ಬುಡಕಟ್ಟು ಹಾಗೂ 100ಕ್ಕೂ ಹೆಚ್ಚು ಅಲೆಮಾರಿ ಸಮುದಾಯಗಳ ಜನಾಂಗೀಯ ಭಾಷೆಗಳು ಅಂಚಿಗೆ ತಳ್ಳಲ್ಪಟ್ಟು, ನಿಧಾನವಾಗಿ ಸಾಯುವುದಕ್ಕೆ ನಾವೇ ಅವಕಾಶ ಮಾಡಿಕೊಟ್ಟಿದ್ದೇವೆ. ಹೀಗಾಗಿ ನಾವೆಲ್ಲರೂ ಜನಾಂಗೀಯ ಹತ್ಯೆಗಿಂತ ಘೋರ ಅಪರಾಧಕ್ಕೆ ಒಳಗಾಗಬೇಕಿದೆ. ವಿಶ್ವ ಸಂಸ್ಥೆಯ ಯುನೆಸ್ಕೋ ಯಾವುದೇ ಒಂದು ಜನಾಂಗೀಯ ಭಾಷೆಯನ್ನು ಅಸಡ್ಡೆ ಮಾಡಿದರೆ, ಅದು ಜನಾಂಗೀಯ ಹತ್ಯೆಗೆ ಸಮನಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಆದ್ದರಿಂದ ಜನಾಂಗೀಯ ಭಾಷೆಗಳನ್ನು, ಕಥನಗಳನ್ನು ಒಪ್ಪಿಕೊಂಡು ಪೋಷಿಸದಿದ್ದರೆ, ನಾವು ಜನಾಂಗೀಯ ಹತ್ಯೆಯ ಅಪರಾಧಿಗಳಾಗಬೇಕಾದಿತು ಎಂದು ಸೂಚ್ಯವಾಗಿ ಎಚ್ಚರಿಸಿದರು.
ಹಕ್ಕಿಪಿಕ್ಕಿ ಸಮುದಾಯದ ಹೂರಾಜ ಮಾತನಾಡಿ, ಹಕ್ಕಿಪಿಕ್ಕಿ ಸಮುದಾಯಜ ಭಾಷೆ ಬಹುತೇಕ ಹಕ್ಕಿ, ಪಕ್ಷಿ, ಪ್ರಾಣಿಗಳ ಕೂಗು, ಧ್ವನಿಯನ್ನೊಳಗೊಂಡಿದೆ. ಪ್ರಾಣಿ-ಪಕ್ಷಿಗಳ ಬೇಟೆ, ಗಿಡ-ಮೂಲಿಕೆ ಸಂಗ್ರಹ ನಮ್ಮ ಕುಲ ಕಸುಬಾಗಿದೆ. ನಮ್ಮ ಸಮುದಾಯ ಗುಜರಾತೋ, ಮೇವಾಡೋ, ಪಮಾರ್, ಕಾಳಿವಾಡೋ ಎಂಬ ನಾಲ್ಕು ಪಂಗಡಗಳನ್ನು ಹೊಂದಿದ್ದು, ಸುಮಾರು 46 ಉಪ ಪಂಗಡಗಳನ್ನು ಹೊಂದಿದೆ. ನಮ್ಮಲೂ ಆಹಾರ ಪದ್ಧತಿ, ಆಚಾರ-ವಿಚಾರಗಳಲ್ಲಿ ಸಾಕಷ್ಟು ಕಟ್ಟುಪಾಡುಗಳಿದ್ದು, ನಾವು ಪ್ರಕೃತಿ ಆರಾಧಕರಾಗಿದ್ದೇವೆ ಎಂದು ಹೇಳಿದರು.
ಕಾಡಿನಲ್ಲಿದ್ದು ಪ್ರಕೃತಿಯ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದ ನಾವು ಈಗ ಸರ್ಕಾರದ ವಿವಿಧ ಕಾನೂನು, ಕಟ್ಟಳೆಗಳಿಂದ ಕಾಡು ಬಿಟ್ಟು, ಬೀದಿಪಾಲಾಗಬೇಕಾಗಿದೆ. ಅಲ್ಲದೆ, ನಮ್ಮ ಸಂಸ್ಕøತಿಯೂ ವಿನಾಶದತ್ತ ಸಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕøತಿ ಚಿಂತಕ ರಹಮತ್ ತರೀಕೆರೆ ವಹಿಸಿದ್ದರು. ಚಿಂತಕ ಡಾ.ರಾಜೇಂದ್ರ ಚೆನ್ನಿ, ನಾವು ನಮ್ಮಲ್ಲಿ ಬಳಗದ ಡಾ.ಸತೀಶ್ ಪಾಟೀಲ್ ಉಪಸ್ಥಿತರಿದ್ದರು. ಬಳಗದ ಅಕ್ಷತಾ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬಳಗದ ಅರುಣ್ ಜೋಳದಕೂಡ್ಲಿಗಿ ನಿರೂಪಿಸಿದರು.
ವರದಕ್ಷಿಣೆ ಇಲ್ಲ:
ಹಕ್ಕಿಪಿಕ್ಕಿ ಸಮುದಾಯದಲ್ಲಿ ವರದಕ್ಷಿಣೆಯಂಥಹ ಅನಿಷ್ಠ ಪದ್ಧತಿ ಇಲ್ಲ. ಬದಲಿಗೆ ಹುಡುಗನ ಕಡೆಯವರೇ, ಹುಡುಗಿಯ ತಂದೆತಾಯಿಗೆ 25 ಸಾವಿರ ರೂ. ತೆರಾ ಕೊಟ್ಟು ಮದುವೆಯಾಗಬೇಕಾಗಿದೆ. ಅಲ್ಲದೆ, ನಾವು ಮದುವೆಗೆ ಶುಭ ಗಳಿಗೆ, ಅಮವಾಸ್ಯೆ, ಆಷಾಢ ಎಂಬುದುನ್ನು ನೋಡುವುದಿಲ್ಲ. ಆದರೆ, ರಾತ್ರಿ 8ರಿಂದ 9 ಗಂಟೆಯೊಳಗೆ ಕರಿಮಣಿ ಕಟ್ಟಿದರೆ ಮದುವೆ ಆದಂತೆಯೇ.
-ಹೂರಾಜ, ಹಕ್ಕಿಪಿಕ್ಕಿ ಸಮುದಾಯದವರು