ದುಶ್ಚಟ ತೊರೆದು ಆರೋಗ್ಯಯುತರಾಗಿ ಬಾಳಿ

 ದಾವಣಗೆರೆ:

      ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ದೇಹವೂ ಹಲವು ರೋಗಗಳ ಗೂಡಾಗಲಿದೆ. ಆದ್ದರಿಂದ ದುಶ್ಚಟಗಳಿಂದ ಹೊರ ಬಂದು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ದೊಡ್ಡಬಾತಿಯ ತಪೋವನಾ ಪ್ರಕೃತಿ ಚಿಕಿತ್ಸಾಲಯದ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಆರ್.ಗಂಗಾಧರವರ್ಮ ಕರೆ ನೀಡಿದರು.

      ಸಮೀಪದ ತೊಳಹುಣಸೆ ಬಳಿಯ ದಾವಣಗೆರೆ ವಿಶ್ವ ವಿದ್ಯಾನಿಲಯದ ಶಿವಗಂಗೋತ್ರಿ ಕ್ಯಾಂಪಸ್‍ನಲ್ಲಿ ಮಂಗಳವಾರ ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಹಾಗೂ ದಾವಣಗೆರೆ ವಿ.ವಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಾದಕ ವಸ್ತುವಿನ ನಿಯಂತ್ರಣ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

      ಅತಿಯಾದ ಆಲ್ಕೋಹಾಲ್ ಅಂಶವು ಮೆದುಳಿನ ನ್ಯೂರಾನ್ ಕೋಶಗಳನ್ನು ನಾಶಮಾಡುತ್ತಾ ರಕ್ತಸಂಚಾರವನ್ನು ಕ್ರಮೇಣ ನಿಲ್ಲಿಸುತ್ತದೆ. ದೇಹದ ಬಿಳಿರಕ್ತಕಣಗಳು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡು ನಮ್ಮ ದೇಹ ಹಲವು ರೋಗಗಳ ಗೂಡಾಗುತ್ತದೆ ಎಂದರು.

      ಮಾದಕ ವಸ್ತುಗಳು ಸಮಾಜಕ್ಕೆ ಅತ್ಯಂತ ಹಾನಿಕಾರಕ ಆಗಿವೆ. ಈ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾದವರು ಸ್ವತಃ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುವುದಲ್ಲದೇ, ಸಮಾಜದ ಸ್ವಾಸ್ಥ್ಯವನ್ನು ಸಹ ಹಾಳು ಮಾಡುತ್ತಾರೆ. ಆರಂಭದಲ್ಲಿ ಕುತೂಹಲಕ್ಕಾಗಿ ಮಾದಕ ದ್ರವ್ಯ ಸೇವನೆ ಮಾಡುವ ಜನ ನಂತರ ಅದರಿಂದ ಹೊರಬರಲಾಗದ ಪರಿಸ್ಥಿತಿಗೆ ತಲುಪುತ್ತಾರೆ ಎಂದು ಹೇಳಿದರು.

      ಆರ್.ಆರ್.ಟಿ.ಸಿ. ಸಂಯೋಜಕಿ ಶೈಲಶ್ರೀ ಮಾತನಾಡಿ, ನಮ್ಮ ಸಂಸ್ಥೆಯು 35 ಪುನಶ್ಚೇತನ ಕೇಂದ್ರಗಳನ್ನು ಹೊಂದಿದ್ದು, ವ್ಯಸನ ಮುಕ್ತ ಸಮಾಜ ನಮ್ಮ ಉದ್ಧೇಶವಾಗಿದೆ. ಯುವಕರು ಚಟಗಳಿಗೆ ದಾಸರಾಗದೇ ಆರೋಗ್ಯವಂತರಾಗಬೇಕೆಂದು ಕಿವಿಮಾತು ಹೇಳಿದರು.

      ದಾವಣಗೆರೆ ವಿ.ವಿ. ಪರೀಕ್ಷಾಂಗ ವಿಶೇಷಾಧಿಕಾರಿ ಬಿ.ಎಸ್. ಪ್ರದೀಪ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವಜನತೆ ಆತ್ಮಾವಲೋಕನ ಮಾಡಿಕೊಂಡು ಮುಂದೆ ಸಾಗಬೇಕಾಗಿದೆ. ಧೂಮಪಾನ ಒಂದು ಹಿರಿಮೆಯ ವಿಷಯ ಎಂಬ ತಪ್ಪು ತಿಳುವಳಿಕೆ ನಮ್ಮಲ್ಲಿದೆ. ಅಂಥಹ ಕಾಲ್ಪನಿಕ ಪ್ರಪಂಚದಿಂದ ಹೊರಬಂದು ವಾಸ್ತವದಲ್ಲಿ ಆರೋಗ್ಯಕರವಾಗಿ ಬದುಕಬೇಕೆಂದು ಕರೆ ನೀಡಿದರು.

     ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿ.ವಿ. ಕಲಾ ನಿಕಾಯದ ಡೀನ್ ಬಿ.ಪಿ.ವೀರಭದ್ರಪ್ಪ ಮಾತಾನಾಡಿ, ಹದಿಹರೆಯದಲ್ಲಿ ಮನಸ್ಸು ಎಲ್ಲಾ ವಿಷಯಗಳನ್ನು ತಿಳಿಯಲು ಬಯಸಿದರೂ ಕೆಟ್ಟ ಗುಣಗಳನ್ನು ಹಿಮ್ಮೆಟ್ಟಿ ಒಳ್ಳೆತನವನ್ನು ಮೆರೆದಾಗ ಮಾತ್ರ ಸ್ವಾಸ್ಥ ಸಮಾಜ ನಿರ್ಮಿಸಲು ಸಾಧ್ಯವಾಗಲಿದೆ. ಮಹಾತ್ಮ ಗಾಂಧಿಯವರು ಸಹ ತಪ್ಪು ತಿದ್ದಿಕೊಂಡೇ ಬೆಳೆದವರು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿವರ್ಗದವರು ಭಾಗವಹಿಸಿದ್ದರು. ರಾಜಶೇಖರ್ ಜೆ.ನಾಯ್ಕ್ ನಿರೂಪಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link