ಖರ್ಗೆ, ವೇಣುಗೋಪಾಲ್ ಗೈರು : ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಪ್ರಾಥಮಿಕ ಚರ್ಚೆ

ನವದೆಹಲಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟು ಬಿಡಿಸಲು ಹೈಕಮಾಂಡ್ ಅಂಗಳಕ್ಕೆ ದೌಡಾಯಿಸಿದ್ದ ರಾಜ್ಯ ಕಾಂಗ್ರೆಸ್ ನಾಯಕರ ಕಸರತ್ತಿಗೆ ಸದ್ಯಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ನಿವಾಸದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸುದೀರ್ಘ ಸಮಾಲೋಚನೆ ನಡೆಸಿದರಾದರೂ, ಸಭೆಯು ಅಪೂರ್ಣಗೊಂಡಿದೆ.
ಮಗನ ಆರೋಗ್ಯದ ಏರುಪೇರಿನ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತುರ್ತಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಅನಾರೋಗ್ಯದ ಕಾರಣದಿಂದ ಗೈರಾಗಿದ್ದರಿಂದಾಗಿ ದಿಢೀರ್ ಹೈವೋಲ್ಟೇಜ್ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. ರಾಹುಲ್ ಗಾಂಧಿ ಅವರೊಂದಿಗೆ ರಾಜ್ಯ ನಾಯಕರು ಕೇವಲ ಪ್ರಾಥಮಿಕ ಹಂತದ ಚರ್ಚೆಯನ್ನಷ್ಟೇ ನಡೆಸಿದ್ದಾರೆ.
ಸಭೆಯ ಬಳಿಕ ಜಂಟಿಯಾಗಿ ಹೊರಬಂದ ನಾಯಕರು, ಸಂಪುಟ ವಿಸ್ತರಣೆಯ ಪ್ರಕ್ರಿಯೆಯನ್ನು ಒಂದೆರಡು ದಿನಗಳ ಕಾಲ ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯ ಕುರಿತು ಬಿ.ಕೆ. ಹರಿಪ್ರಸಾದ್ ಅಭಿಪ್ರಾಯ :
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾತನಾಡಿ ಸಚಿವ ಸಂಪುಟ ವಿಸ್ತರಣೆ ಮೇಲಿನ ಚರ್ಚೆ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಸಂಪುಟ ವಿಸ್ತರಣೆ ಸಂಬAಧ ದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಅವರು ಸಂಸದ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಸಂಪುಟ ವಿಸ್ತರಣೆ, ಪಕ್ಷ ಸಂಘಟನೆ ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಬಳಿಕ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಸಂಪುಟ ವಿಸ್ತರಣೆ ತೀರ್ಮಾನ ಒಂದೆರಡು ದಿನಗಳ ಕಾಲ ಮುಂದೂಡಿಕೆಯಾಗಿದೆ ಎಂದು ಹೇಳಿದ್ದಾರೆ.
ಪಕ್ಷದ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ ಜತೆ ಚರ್ಚೆ ನಡೆಸಿದ್ದೇವೆ. ಮತ್ತೆ ಅವರು ದಿನಾಂಕ ನಿಗದಿ ಮಾಡಲಿದ್ದಾರೆ. ಬಳಿಕ ಮತ್ತೊಮ್ಮೆ ಚರ್ಚೆ ನಡೆಸಲಾಗುವುದು. ಎಐಸಿಸಿ ಅಧ್ಯಕ್ಷರು ಬೆಂಗಳೂರಿಗೆ ತೆರಳುತ್ತಿದ್ದಾರೆ. ಬಳಿಕ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಡೆಹ್ರಾಡೂನ್‌ನಲ್ಲಿಂದು ರಾಹುಲ್ ಗಾಂಧಿ ಈ ಬಾರಿ ನೀಟ್ ಪರೀಕ್ಷೆಯಲ್ಲಾದ ಯಡವಟ್ಟುಗಳನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಾಪಸಾಗಿದ್ದಾರೆ. ಚರ್ಚೆ ಅಪೂರ್ಣ ಹಿನ್ನೆಲೆ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿದೆ. ಜುಲೈ 19ರ ಬಳಿಕ ಮತ್ತೆ ಸಂಪುಟ ವಿಸ್ತರಣೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಸಚಿವ ಸಂಪುಟ ವಿಸ್ತರಣೆಗೆ ಬ್ರೇಕ್ ಬಿದ್ದಿದೆ ಎಂದರು.
ಬಾಕ್ಸ್
ಆಕಾಂಕ್ಷಿಗಳ ಆಸೆಗೆ ತಣ್ಣೀರು:
ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ದೆಹಲಿ ವಲಯದಲ್ಲಿ ಲಾಬಿ ನಡೆಸಲು ರಾಜ್ಯದಿಂದ ಸುಮಾರು 40ಕ್ಕೂ ಹೆಚ್ಚು ಶಾಸಕರು ಹಾಗೂ ಸಚಿವ ಆಕಾಂಕ್ಷಿಗಳು ದೆಹಲಿಗೆ ಲಗ್ಗೆ ಇಟ್ಟಿದ್ದರು. ಹೈಕಮಾಂಡ್ ನಾಯಕರ ಭೇಟಿಗೆ ಕಾಯುತ್ತಿದ್ದ ಇವರೆಲ್ಲರಿಗೂ ಸಭೆ ಮುಂದೂಡಿಕೆಯಾಗಿರುವ ಸುದ್ದಿ ಭಾರೀ ನಿರಾಸೆ ಮೂಡಿಸಿದೆ.
ಪೋಟೋ : ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ನವದೆಹಲಿಯ 10ನೇ ಜನಪಥ್ ರಸ್ತೆಯ ನಿವಾಸದಲ್ಲಿ ಗುರುವಾರ ಸಮಾಲೋಚನೆ ನಡೆಸಿದ ನಂತರ ಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮಾಜಿ ಸಿಎಂ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಅವರು ಇರುವ ಕ್ಷಣ.








