ಚಳ್ಳಕೆರೆ
ರಾಷ್ಟ್ರದೆಲ್ಲೆಡೆ ಇಂದು ಅತ್ಯಂತ ಸಂಭ್ರಮ ಸಡಗರಗಳಿಂದ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಪಡೆಯುವ ದಿನ ಈ ದೇಶದ ಲಕ್ಷಾಂತರ ಹಿಂದೂ ಬಂಧುಗಳು ಅನಿವಾರ್ಯವಾಗಿ ನೆಲೆ ಕಳೆದುಕೊಳ್ಳಬೇಕಾಯಿತು, ಇನ್ನೂ ಕೆಲವರು ಪ್ರಾಣ ಕಳೆದುಕೊಳ್ಳಬೇಕಾಯಿತು. ದೇಶ ವಿಭಜನೆಯಿಂದ, ಭಯೋತ್ಪಾದನೆ, ಮತಾಂತರ ಹಾಗೂ ದೇಶದ್ರೋಹಿ ಕೃತ್ಯಗಳಿಗೆ ಅವಕಾಶ ನೀಡಿದಂತಾಗಿದ್ದು, ಇವುಗಳನ್ನು ನಿಯಂತ್ರಿಸಲು ಯುವ ಜನಾಂಗ ಮುಂದಾಗಬೇಕು. ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯೂ ಭಯೋತ್ಪಾದನೆ ಉಗ್ರಗಾಮಿ ಚಟುವಟಿಕೆ ರಹಿತ ವ್ಯಕ್ತಿಯಾಗಿ ಉತ್ತಮ ಬಾಳು ನಡೆಸಬೇಕು. ಜನಿಸಿದ ಪ್ರತಿಯೊಬ್ಬರಲ್ಲೂ ರಾಷ್ಟ್ರ ಪ್ರೇಮ ಹುಟ್ಟಬೇಕು ಎಂದು ಭಜರಂಗ ದಳದ ರಾಜ್ಯ ಮುಖಂಡ ರಂಗನಾಥ ತಿಳಿಸಿದರು.
ಅವರು, ಬುಧವಾರ ಸಂಜೆ ಇಲ್ಲಿನ ರೋಟರಿ ಬಾಲಭವನದಲ್ಲಿ ತಾಲ್ಲೂಕು ವಿಶ್ವಹಿಂದೂ ಪರಿಷತ್ ಭಜರಂಗದಳ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಅಖಂಡ ಭಾರತ ಸಂಕಲ್ಪ ದಿನ ಮತ್ತು ರಾಷ್ಟ್ರೀಯ ಸುರಕ್ಷಾ ದಿನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿ ಭಜರಂಗದಳದ ಜಿಲ್ಲಾ ಸಹ ಸಂಚಾಲಕ ಸಂದೀಪ್, ಇತ್ತೀಚಿನ ದಿನಗಳಲ್ಲಿ ದೇಶದ ಒಳಗಡೆ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ನುಸುಳಿ ತಮ್ಮ ಚಟುವಟಿಕೆಯನ್ನು ತೀರ್ವಗೊಳಿಸುತ್ತಿದ್ಧಾರೆ. ಭಾರತ ಸರ್ಕಾರದ ಕಟ್ಟೆಚ್ಚರಿಕೆ ನಡುವೆಯೂ ಸಹ ಮತಾಂತದ ಶಕ್ತಿಗಳು ದೇಶವನ್ನು ಪ್ರವೇಶಿಸಿ ಅಜಾಗರೂಕತೆಯನ್ನುಂಟು ಮಾಡುತ್ತಿವೆ. ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕೃತ್ಯಗಳು ಸಹ ನಡೆಯುತ್ತಿವೆ. ಇವುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಈ ರಾಷ್ಟ್ರದ ಯುವ ಶಕ್ತಿಯಿಂದ ಮಾತ್ರ ಸಾಧ್ಯ. ಯುವ ಶಕ್ತಿ ಮಾತ್ರ ಈ ಸಮಾಜಕ್ಕೆ ರಕ್ಷಣೆ ನೀಡಬಲ್ಲದು. ಅದ್ದರಿಂದ ನಮ್ಮ ಯುವಕರು ಜಾಗೃತರಾಗಿ ಸಂಘಟಿತರಾಗಬೇಕಿದೆ. ಯುವ ಜನಾಂಗ ಸಂಘಟಿತವಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ರಾಷ್ಟ್ರದ ಸುರಕ್ಷತೆ ಹಾಗೂ ಅಖಂಡ ಭಾರತ ಸಂಕಲ್ಪದ ಕನಸು ನನಸಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲ ಜಿ.ಆರ್.ಅಶ್ವತ್ಥನಾಯಕ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಗಳಲ್ಲಿ ನಡೆಯುವ ಹಲವಾರು ವಿಚಾರಗಳ ಬಗ್ಗೆ ಚಿಂತನೆ ನಡೆಸುವ ಜವಾಬ್ದಾರಿ ಎಲ್ಲಾ ದೇಶ ಭಕ್ತರ ಮೇಲಿದೆ. ವಿಶೇಷವಾಗಿ ನಮ್ಮ ಯುವ ಜನಾಂಗ ಈ ರಾಷ್ಟ್ರವನ್ನು ಸರ್ವಶಕ್ತಿಯಾಗಿ ಕಟ್ಟಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಯೋಜನೆಗಳಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಕೀಲರಾದ ಎಂ.ಎಸ್.ವಿಶ್ವನಾಥ, ವೆಂಕಟೇಶ್‍ರೆಡ್ಡಿ, ಪ್ರಾಣೇಶ್, ಬಾಳೆಮಂಡಿರಾಮದಾಸ್, ಮಾತೃಶ್ರೀ ಎನ್.ಮಂಜುನಾಥ, ಹನುಮಂತರಾಯ ಮುಂತಾದವರು ಉಪಸ್ಥಿತರಿದ್ದರು.