ದೇಶ ಬಚಾವೋ, ಮೋದಿ ಹಠಾವೋ

ತುಮಕೂರು:

               ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ, ಎಐಟಿಯುಸಿ ವತಿಯಿಂದ ಮಜ್ದೂರ್ ಬಚಾವೋ, ದೇಶ ಬಚಾವೋ, ಮೋದಿ ಹಠಾವೋ ಎಂಬ ಘೋಷ ವಾಕ್ಯದಡಿಯಲ್ಲಿ ನಗರದ ಟೌನ್‍ಹಾಲ್ ವೃತ್ತದಿಂದ ಕೇಂದ್ರ ಸರಕಾರ ಬಿ.ಎಸ್.ಎನ್.ಎಲ್. ಕಚೇರಿವರೆಗೆ ಪ್ರತಿಭಟನೆ ನಡೆಸಲಾಯಿತು.

                ನಗರದ ಟೌನ್‍ಹಾಲ್ ನಲ್ಲಿ ಸಮಾವೇಶಗೊಂಡ ಕಾರ್ಮಿಕರನ್ನು ಕುರಿತು ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಗಿರೀಶ್,ಕೇಂದ್ರಸರಕಾರ ಕಾರ್ಮಿಕರ ಪರವಾಗಿದ್ದ ಸುಮಾರು 44 ಕಾನೂನುಗಳನ್ನು ಕೇವಲ ನಾಲ್ಕು ಲೇಬರ್ ಕೋಡ್ ಗಳಾಗಿ ವಿಂಗಡಿಸಿ,ಕಾರ್ಮಿಕ ವಿರೋಧಿ,ಮಾಲೀಕರ ಪರ ಧೋರಣೆಯನ್ನು ಅನುಸರಿಸುತ್ತಿದೆ.ಇದುವರೆಗೂ ಇದ್ದ ಕಾನೂನಿನಲ್ಲಿ ಒಂದು ಕಾರ್ಖಾನೆ,ಕಂಪನಿಯಲ್ಲಿ 20ಜನ ಕಾರ್ಮಿಕರಿದ್ದರೆ ಅವರಿಗೆ ಕಾರ್ಮಿಕ ಕಾಯ್ದೆಯ ಎಲ್ಲಾ ನಿಯಮಗಳು ಒಳಪಡುತ್ತಿದ್ದವೂ, ಆದರೆ ಕೇಂದ್ರದ ಹೊಸ ಕಾನೂನಿನಿಂದ ಇದರ ಸಂಖ್ಯೆ 40ಕ್ಕೆ ಹೆಚ್ಚಳವಾಗಿದೆ. ಇದರಿಂದ ಸುಮಾರು 47 ಕೋಟಿಯಷ್ಟಿರುವ ಅಸಂಘಟಿತ ಕಾರ್ಮಿಕರು ಕಾರ್ಮಿಕ ಕಾಯ್ದೆಯಿಂದ ಹೊರಗೆ ಉಳಿಯಲಿದ್ದು, ಮಾಲಿಕರು,ಕಾರ್ಮಿಕರಿಗೆ ಯಾವುದೇ ಸಂಬಂಧವಿಲ್ಲದಂತಾಗುತ್ತದೆ.ಇದು ರದ್ದಾಗಬೇಕು ಎಂಬುದು ನಮ್ಮ ಹೋರಾಟ ವಾಗಿದೆ ಎಂದರು.

              ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿ.ಎಸ್.ಟಿ ಯಿಂದಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ ಪಡೆಯುತ್ತಿದ್ದ ಸೆಸ್‍ಗಳು ಕಟ್ಟಡ ಕಾರ್ಮಿಕರು,ಬೀಡಿ ಕಾರ್ಮಿಕರು ಇನ್ನಿತರ ಸೇಸ್‍ಗಳು ರಾಜ್ಯಕ್ಕೆ ಇಲ್ಲದಂತಾಗಿ,ಪ್ರತಿಯೊಂದಕ್ಕೂ ಕೇಂದ್ರದ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ.ಇದು ಲಕ್ಷಾಂತರ ಸಂಖ್ಯೆಯಲ್ಲಿರುವ ಕಟ್ಟಡ, ಬೀಡಿ ಇನ್ನಿತರ ಕಾರ್ಮಿಕರಿಗೆ ಅನ್ಯಾಯ ಮಾಡಿದಂತೆಯೇ ಸರಿ.ಅಲ್ಲದೆ ಕಾರ್ಮಿಕರಿಗೆ ಕನಿಷ್ಠ ವೇತನ ಬೋರ್ಡ್ ತೀರ್ಮಾನದಂತೆ ಮಾಲೀಕರು ಕಾರ್ಮಿಕರಿಗೆ ಮಾಸಿಕ 14 ಸಾವಿರ ರೂ ವೇತನ ನೀಡುವ ಬದಲು,ಬೋರ್ಡ್ ತೀರ್ಮಾನದ ವಿರುದ್ದ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು,ಇದಕ್ಕೆ ಕೇಂದ್ರ ಸರಕಾರ ಪರೋಕ್ಷವಾಗಿ ಬೆಂಬಲ ನೀಡಿದೆ ಎಂದು ಗಿರೀಶ ಆರೋಪಿಸಿದರು.

             ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕಾಂತರಾಜು ಮಾತನಾಡಿ,ಕೇಂದ್ರ ಸರಕಾರದ ಇಂಧನ ಬೆಲೆ ಹೆಚ್ಚಳದಿಂದ ಜನಸಾಮಾನ್ಯರ ಅರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತಿದ್ದು,ಪರೋಕ್ಷವಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.ಇಂದಿನ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಕೇಂದ್ರ ಸರಕಾರ ಕನಿಷ್ಠ ವೇತನವನ್ನು 14 ಸಾವಿರ ರೂಗಳಿಗೆ ಬದಲಾಗಿ, ಮಾಸಿಕ 18 ಸಾವಿರ ರೂಗಳಿಗೆ ನಿಗಧಿ ಪಡಿಸಬೇಕೆಂದು ಒತ್ತಾಯಿಸಿದರು.

              ಪ್ರತಿಭಟನೆಯಲ್ಲಿ ಎಐಟಿಯುಸಿಯ ಆಶ್ವಥನಾರಾಯಣ, ಸತ್ಯನಾರಾಯಣ, ರಮೇಶ್ ಶಿರಾ, ಮಧುಗಿರಿ ರಾಮಣ್ಣ, ತುರುವೇಕೆರೆ ಶಿವಾನಂದ್,ಗುಬ್ಬಿ ದೊಡ್ಡತಿಮ್ಮಯ್ಯ, ಇಂಡೋಸಿಸ್‍ನ ರವಿಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
  
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link