ನಕಲಿ ಕ್ಲಿನಿಕ್‍ಗಳನ್ನು ಮುಚ್ಚಲು ಮುಂದಾದ ಡಿಎಚ್‍ಓಗೆ ಗ್ರಾಮಸ್ಥರಿಂದ ಅಡಚಣೆ..!

ಮಧುಗಿರಿ

       ತಾಲ್ಲೂಕಿನ ಹೋಬಳಿಗಳಿಗೆ ಡಿಎಚ್‍ಓ ರವರ ತಂಡ ಭೇಟಿ ನೀಡಿದ್ದು, ನಕಲಿ ಕ್ಲಿನಿಕ್ ವೊಂದನ್ನು ಮುಚ್ಚಿಸಲು ಹೋದಾಗ ಕೆಲ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಮುಜುಗರ ಉಂಟು ಮಾಡಿರುವ ಘಟನೆ ಮಂಗಳವಾರ ನಡೆದಿದೆ.ಕೋಡಿಗೇನಹಳ್ಳಿ, ಪುರವರ, ಐಡಿಹಳ್ಳಿ ಹೋಬಳಿಗೆ ಡಿಹೆಚ್‍ಓ ಬಿ.ಆರ್.ಚಂದ್ರಿಕಾ ಭೇಟಿ ನೀಡಿ, ಆರೋಗ್ಯ ಇಲಾಖೆಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಗ್ರಾಮದಲ್ಲಿ ಕೆಲವರು ನಕಲಿ ಕ್ಲಿನಿಕ್‍ಗಳನ್ನು ನಡೆಸುತ್ತಿದ್ದು ಅವುಗಳನ್ನು ಮುಚ್ಚಿಸ ಬೇಕಾಗಿದ್ದು, ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ನಕಲಿ ಕ್ಲಿನಿಕ್‍ಗಳ ಗೋಡೆಗೆ ನೋಟಿಸ್ ಅಂಟಿಸಲಾಗಿದೆ. ಕ್ಲಿನಿಕ್‍ಗೆ ಸಂಬಂಧಪಟ್ಟವರು 15 ದಿನಗಳ ಒಳಗೆ ಮಾಹಿತಿ ಒದಗಿಸುವಂತೆ ಸೂಚಿಸಿದರು.

        ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ.ಸಂಜೀವಮೂರ್ತಿ ಮಾತನಾಡಿ, ಮೊದಲು ಕೊಡಿಗೇನಹಳ್ಳಿ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನೇಮಕ ಮಾಡಿ, ಅಲ್ಲಿನ ವ್ಯವಸ್ಥೆಯನ್ನು ಮೊದಲು ಸರಿಪಡಿಸಿ. ಸಣ್ಣ ಪುಟ್ಟ ಕಾಯಿಲೆಗಳ ಚಿಕಿತ್ಸೆಗಾಗಿ ಬೇರೆ ಕಡೆ ತೆರಳಲು ನಮಗೆ ಕಷ್ಟಕರವಾಗಿದೆ. ನಾವು ಖಾಸಗಿ ಕ್ಲಿನಿಕ್‍ಗಳನ್ನು ಅವಲಂಬಿಸಿದ್ದೇವೆ ಎಂದು ಅಧಿಕಾರಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

          ಕೊಡಿಗೇನಹಳ್ಳಿಯ ಗಂಗರಾಜು ಹಾಗೂ ಸುಭಾಷ್‍ರವರ ಕ್ಲಿನಿಕ್‍ಗಳಿಗೆ ನೋಟಿಸ್‍ಗಳನ್ನು ಜಾರಿ ಮಾಡಿ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್ಸಾದರು. ಟಿಹೆಚ್‍ಓ ರಮೇಶ್ ಬಾಬು ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 14 ಕ್ಲಿನಿಕ್‍ಗಳಿವೆ. ಇಲ್ಲಿ ಕಾರ್ಯ ನಿರ್ವಹಿಸುವವರು ಸಂಬಂಧಪಟ್ಟ ವಿದ್ಯಾರ್ಹತೆ, ಕೆಪಿಎಂ ಕಾಯಿದೆ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಇಚ್ಚೆವುಳ್ಳವರು ಡಿಸಿ ಆಫೀಸ್‍ನಲ್ಲಿ ಅಥವಾ ಆನ್ ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ಇಲ್ಲವಾದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಇಲಾಖೆಯ ಸಂಜೀವಮೂರ್ತಿ, ಎಂ ಅಂಡ್ ಇ ವಿಭಾಗದ ಶಿವಕುಮಾರ್, ನಿರೀಕ್ಷಕ ನವೀನ್, ಎಎಸ್‍ಐ ನಾಗರಾಜು ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap