ದಾವಣಗೆರೆ:
ಚಿತ್ರ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್, ಪ್ರಥಮ ಬಾರಿಗೆ ತೆರೆಯ ಮೇಲೆ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಪಡ್ಡೆಹುಲಿ ಚಿತ್ರದ ಚಿತ್ರೀಕರಣವು ನಗರದ ಹೊರ ವಲಯದ ಜಿ.ಎಂ.ಐ.ಟಿ. ಕಾಲೇಜು ಕ್ಯಾಂಪಸ್‍ನಲ್ಲಿ ಗುರುವಾರ ನಡೆಯಿತು.
ಜಿಎಂಐಟಿ ಕ್ಯಾಂಪಸ್‍ನಲ್ಲಿ ಚಿತ್ರದ ನಾಯಕನಟ ಶ್ರೇಯಸ್, ನಾಯಕಿ ನಿಶ್ವಿಕಾ ನಾಯ್ದು ಅಭಿನಯದಲ್ಲಿ ಕಾಲೇಜಿನ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಯಿತು. ಪಡ್ಡೆಹುಲಿ ಚಿತ್ರದ ಶೇ.45ರಷ್ಟಿರುವ ಕಾಲೇಜು ಭಾಗವನ್ನು ಪೂರ್ತಿಯಾಗಿ ಜಿಎಂಐಟಿ ಕಾಲೇಜಿನಲ್ಲೇ ಚಿತ್ರೀಕರಿಸಿದ್ದು, ಎರಡು ಹಂತದಲ್ಲಿ ಒಟ್ಟು 20 ದಿನ ಚಿತ್ರೀಕರಣ ಇಲ್ಲಿ ನಡೆದಿದೆ.
ಚಿತ್ರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ಕೆ.ಮಂಜು, ನನ್ನ ಮಗನ ಚೊಚ್ಚಲ ಚಿತ್ರ ಹೋಮ್ ಬ್ಯಾನರ್‍ನಲ್ಲೇ ಮೂಡಿಬರಬೇಕೆಂಬ ಆಸೆ ಇತ್ತು. ಅದಕ್ಕಾಗಿ ಶ್ರೇಯಸ್ ಎರಡು ವರ್ಷಗಳಿಂದ ಹೈದರಾಬಾದ್, ಬೆಂಗಳೂರು ಹೀಗೆ ಅನೇಕ ಕಡೆ ತರಬೇತಿ ಪಡೆದಿದ್ದರು. ಆದರೆ ನನ್ನ ಸ್ನೇಹಿತ ರಮೇಶ ರೆಡ್ಡಿ ಒತ್ತಾಯದ ಮೇರೆಗೆ ಅವರ ನಿರ್ಮಾಣದ ಚಿತ್ರದಲ್ಲೇ ಶ್ರೇಯಸ್ ಬೆಳ್ಳಿತೆರೆಯನ್ನು ಪ್ರವೇಶಿಸಿದ್ದಾರೆಂದು ಹೇಳಿದರು.
ಹೊಸ ಮುಖಗಳನ್ನು ನಂಬಿಕೊಂಡು ಬಂಡವಾಳ ಹೂಡುವುದು ಕಷ್ಟ. ಆದರೆ, ನಿರ್ಮಾಪಕ ರಮೇಶ್ ರೆಡ್ಡಿ ತುಂಬಾ ವಿಶ್ವಾಸವಿಟ್ಟು ನನ್ನ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಯಾವುದಕ್ಕೂ ಕೊರತೆಯಾಗದಂತೆ ಏಳೆಂಟು ಕೋಟಿ ರೂ. ಬಜೆಟ್‍ನಲ್ಲಿ ಸ್ಟಾರ್ ನಟರ ಮಟ್ಟಕ್ಕೆ ಚಿತ್ರವು ಅದ್ಧೂರಿಯಾಗಿ ಮೂಡಿಬರಲು ಸಹಕರಿಸುತ್ತಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿರುವ ನನಗೆ ವಿಷ್ಣು ಸರ್ ತುಂಬಾ ಆತ್ಮೀಯರಾಗಿದ್ದರು. ಅವರು ಹೇಳಿದ್ದ ತಮ್ಮ ಕಾಲೇಜು ದಿನಗಳಲ್ಲಿನ ಘಟನೆಯೇ ಈ ಚಿತ್ರಕ್ಕೆ ಸ್ಫೂರ್ತಿಯಾಗಿದೆ ಎಂದು ವಿವರಿಸಿದರು.
ಪಡ್ಡೆಹುಲಿ ಚಿತ್ರ ಕಥೆಯು ಮೂರು ಹಂತದಲ್ಲಿ ಸಾಗಲಿದ್ದು, ಚಿತ್ರದುರ್ಗದಲ್ಲಿ ಕಥೆ ಆರಂಭವಾಗಲಿದ್ದು, ನಾಯಕನಟ ಇಂಜಿನಿಯರಿಂಗ್ ಓದಲು ದಾವಣಗೆರೆ ಜಿಎಂಐಟಿ ಕಾಲೇಜಿಗೆ ಬರುತ್ತಾನೆ. ಕಾಲೇಜಿನ ಸಂಪೂರ್ಣ ಭಾಗವನ್ನು ಇದೇ ಕಾಲೇಜಿನಲ್ಲಿ ಚಿತ್ರೀಕರಿಸಿದ್ದು, ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ ಎಂದರು.
ನಿರ್ದೇಶಕ ಗುರು ದೇಶಪಾಂಡೆ ಮಾತನಾಡಿ, ನಿರ್ಮಾಪಕ ಕೆ.ಮಂಜು ನಿರ್ಮಾಣದ ರಾಜಾಹುಲಿ ನಂತರ ಅವರ ಮಗನ ಚಿತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ನನ್ನ ಸುದೈವವಾಗಿದೆ. ಶ್ರೇಯಸ್ ನಿಜಕ್ಕೂ ಬದ್ಧತೆ ಇರುವ ನಟನಾಗಿದ್ದು, ಸಾಹಸ ದೃಶ್ಯಗಳಲ್ಲಿ ಡ್ಯೂಪ್ ಬಳಸದೆ ಲವಲವಿಕೆಯಿಂದ ನಟಿಸಿದ್ದಾನೆ. ಹೀಗಾಗಿ ಒಂದೆರೆಡು ಆಘಾತಗಳೂ ಆಗಿವೆ. ಅದ್ಯಾವುದನ್ನೂ ಲೆಕ್ಕಿಸದೆ ಸಿನಿಮಾ ಚೆನ್ನಾಗಿ ಬರಬೇಕೆಂಬ ಉದ್ದೇಶದಿಂದ ಚಿತ್ರೀಕರಣಕ್ಕೆ ಸಹಕರಿಸಿದ್ದಾನೆ. ಈತನಿಗೆ ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದರು.
ಕೆ.ಮಂಜು ಅವರು ಹೇಳಿದ ಕಥೆಯ ಎಳೆಯನ್ನಿಟ್ಟುಕೊಂಡೇ ಪಡ್ಡೆಹುಲಿ ಚಿತ್ರದ ಕಥೆ ಬರೆದಿದ್ದೇನೆ. ಚಿತ್ರದುರ್ಗದಲ್ಲಿ ಶುರುವಾಗುವ ಕಥೆಯು ದಾವಣಗೆರೆಯಲ್ಲಿ ಸಾಗಿ, ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳುತ್ತದೆ. ಯುವಕನೊಬ್ಬರ ಜೀವನಗಾಥೆಯನ್ನು ಇಂದಿನ ಯುವಪೀಳಿಗೆಗೆ ಇಷ್ಟವಾಗುವಂತೆ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದೇನೆ ಎಂದರು.
ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪ್ರೇಮಲೋಕ ನಂತರ ಸಂಗೀತಕ್ಕೆ ಆದ್ಯತೆ ಇರುವ ಯುವ ಟ್ರೆಂಡ್ ಕಥೆಯುಳ್ಳ ಸಿನಿಮಾ ಪಡ್ಡೆಹುಲಿ ಎಂದರೆ ತಪ್ಪಿಲ್ಲ. ನಾಯಕನಟನ ತಂದೆಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ತಾಯಿಯಾಗಿ ಸುಧಾರಾಣಿ ನಟಿಸುತ್ತಿದ್ದಾರೆ. ನಾಯಕಿಯರಾಗಿ ನಿಶ್ವಿಕಾ ನಾಯ್ಡು, ಐಶ್ವರ್ಯಾ, ನೆಗೆಟಿವ್ ಶೇಡ್ ಪಾತ್ರದಲ್ಲಿ ಅನಿಲ್ ಸಿದ್ದು, ಪ್ರಮುಖ ಪಾತ್ರಗಳಲ್ಲಿ ವಿನಾಯಕ ಜೋಷಿ, ಧರ್ಮಣ್ಣ ಸೇರಿದಂತೆ ಹಿರಿಯ ನಟರು ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದ ನಾಯಕನಟ ಶ್ರೇಯಸ್, ನಟಿಯರಾದ ನಿಶ್ವಿಕಾ ನಾಯ್ಡು, ಐಶ್ವರ್ಯಾ, ಕಲಾವಿದರಾದ ವಿನಾಯಕ್ ಜೋಷಿ, ಅನಿಲ್ ಸಿದ್ದು, ಧರ್ಮ, ಕ್ಯಾಮರಾಮ್ಯಾನ್ ಚಂದ್ರಶೇಖರ ಹಾಜರಿದ್ದರು.
