ಚಿತ್ರದುರ್ಗ:
ರೈತರ ಸಂಪೂರ್ಣ ಸಾಲ ಮನ್ನ ಮತ್ತು ಫಸಲ್ ಭೀಮ ಯೋಜನೆಯ ಬೆಳೆ ವಿಮೆ ಬಿಡುಗಡೆಗೆ ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರುಸೇನೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಎ.ಪಿ.ಎಂ.ಸಿ.ರೈತ ಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾನಿರತ ರೈತರು ಮಳೆಯಿಂದ ನೆಲ ಒದ್ದೆಯಾಗಿರುವುದನ್ನು ಲೆಕ್ಕಿಸದೆ ಸತತ ಎರಡು ಗಂಟೆಗಳ ಕಾಲ ಕುಳಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ಚಿತ್ರದುರ್ಗ ಜಿಲ್ಲೆಯನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ಘೋಷಿಸಿ ಮೆಕ್ಕೆಜೋಳ ಕ್ವಿಂಟಾಲ್‍ಗೆ ಮೂರು ಸಾವಿರ, ಶೇಂಗಾಕ್ಕೆ ನಾಲ್ಕು ಸಾವಿರ, ಈರುಳ್ಳಿಗೆ ಎಂಟು ಸಾವಿರ ರೂ.ಬೆಂಬಲ ಬೆಲೆ ಘೋಷಿಸಿದರೆ ನಮಗೆ ಯಾವ ಸಾಲವೂ ಬೇಡ. ಸರ್ಕಾರಕ್ಕೆ ನಾವೇ ಸಾಲ ಕೊಡುತ್ತೇವೆ ಎಂದು ಗುಡುಗಿದರು.
ಕಳೆದ ಇಪ್ಪತ್ತು ವರ್ಷಗಳಿಂದಲೂ ಭದ್ರಾಮೇಲ್ದಂಡೆ ಯೋಜನೆ ಜಾರಿಗಾಗಿ ಹೋರಾಟ ಮಾಡಿದ್ದರಿಂದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಹೋರಾಟಕ್ಕೆ ವಿವಿದ ಸಂಘ ಸಂಸ್ಥೆಗಳು, ಸಾರ್ವಜನಿಕರು ಮಠಾಧೀಶರುಗಳು ನೀಡಿದ ಬೆಂಬಲವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಲು ರಾಜಕಾರಣಿಗಳಿಗೆ ಇಚ್ಚಾಶಕ್ತಿಯಿಲ್ಲ. ಅವರನ್ನು ತಡೆದು ಕೇಳುವ ವ್ಯವಧಾನ ನಮಗೂ ಇಲ್ಲದಂತಾಗಿದೆ. ಅದಕ್ಕಾಗಿ ರೈತರು ನಿರಂತರ ಹೋರಾಟದಿಂದ ಮಾತ್ರ ಬದುಕನ್ನು ಹಸನು ಮಾಡಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ರೈತರ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಟಿ.ನುಲೇನೂರು ಶಂಕರಪ್ಪ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತ ಚಿತ್ರದುರ್ಗ ಜಿಲ್ಲೆ ಸತತವಾಗಿ ಏಳು ವರ್ಷಗಳಿಂದಲೂ ಬರಗಾಲಕ್ಕೆ ತುತ್ತಾಗಿದ್ದು, ಈಗ ಎಂಟನೆ ವರ್ಷವೂ ಬರವನ್ನು ಎದುರಿಸುವಂತಾಗಿದೆ. ಕೂಡಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಬೆಳೆವಿಮೆ ಬಿಡುಗಡೆಗೊಳಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ರೈತರ ಬೆಳೆ ವಿಮೆಯನ್ನು ನಿಗಧಿಗೊಳಿಸುವ ಮಾನದಂಡ ಅವೈಜ್ಞಾನಿಕವಾಗಿದೆ. ಈಗಿರುವ ಏಳು ವರ್ಷ ಸರಾಸರಿ ಪದ್ದತಿಯನ್ನು ಕೈಬಿಟ್ಟು ಆಯಾ ವರ್ಷದ ಬೆಳೆನಷ್ಟವನ್ನೇ ಪರಿಗಣಿಸಿ ಬೆಳೆವಿಮೆ ನೀಡಬೇಕು. ಗಣಿಭಾದಿತ ಪ್ರದೇಶಗಳ ಅಭಿವೃದ್ದಿ ನಿಧಿಯ ಹಣವನ್ನು ಜಿಲ್ಲೆಯ ಎಲ್ಲಾ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಬಳಸಬೇಕು. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಹಗಲುವೇಳೆಯಲ್ಲಿ ಹತ್ತು ಗಂಟೆಗಳ ಕಾಲ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ 2017-18-2018-19 ನೇ ಸಾಲಿನ ಹಿಂಗಾರು ಮುಂಗಾರು ಬೆಳೆ ವಿಮೆ ಇನ್ನು ರೈತರ ಕೈಸೇರಿಲ್ಲ.ಕಂದಾಯ ಇಲಾಖೆ ಗ್ರಾ.ಪಂ.ಮೂಲಕ ಬೆಳೆ ನಷ್ಟದ ವೀಡಿಯೋ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಬೆಳೆ ವಿಮೆ ಕಂಪನಿಗಳು ವಿಮೆ ನೀಡಲು ಇನ್ನು ಮೀನಾಮೇಷ ಎಣಿಸುತ್ತಿವೆ. ನಾಳೆಯಿಂದ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರ ಮನೆಗಳ ಎದುರು ಧರಣಿ ನಡೆಸಲು ರೈತರು ಸಿದ್ದರಾಗಿ ಎಂದು ತಿಳಿಸಿದರು.
ಎರಡು ಲಕ್ಷ 22 ಸಾವಿರ ಕೋಟಿ ರೂ.ಬೆಳೆವಿಮೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿಕೊಂಡು ಲೂಟಿ ಹೊಡೆದಿರುವುದನ್ನು ಕೇಳಲು ಯಾರು ಇಲ್ಲದಂತಾಗಿದ್ದಾರೆ. ಈ ನಿಟ್ಟಿನಲ್ಲಿ ರೈತರು ನಿರ್ಲಕ್ಷೆ ಮಾಡದೆ ಹೋರಾಟಕ್ಕೆ ಇಳಿಯಬೇಕು ಎಂದರು.
ರೈತ ಮುಖಂಡರುಗಳಾದ ಸಿ.ಆರ್.ತಿಮ್ಮಣ್ಣ, ಆರನಕಟ್ಟೆ ಶಿವಕುಮಾರ್, ಕೆಂಚಯಲ್ಲಪ್ಪ, ರೇವಣ್ಣ ಸಜ್ಜನಕೆರೆ, ಆರ್.ಸಿ.ಮಂಜಪ್ಪ, ಪ್ರವೀಣ್‍ಕುಮಾರ್, ಧನಂಜಯ, ಸಿದ್ದೇಶ್, ಜಿ.ಪರಮೇಶ್ವರಪ್ಪ, ಕರಿಯಪ್ಪ ಸೇರಿದಂತೆ ನೂರಾರು ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.