ಹಿರಿಯೂರು:
ನಗರದ ವಾರ್ಡ್ 23ರಲ್ಲಿ ಹಂದಿ, ಕೋತಿ, ದನಕರುಗಳು ಹಾಗೂ ಬೀದಿ ನಾಯಿಗಳು ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಅವುಗಳ ಹಾವಳಿ ತಪ್ಪಿಸಬೇಕೆಂದು ನಗರಸಭೆ ಸದಸ್ಯ ಜಿ.ಪ್ರೇಮ್‍ಕುಮಾರ್ ಶುಕ್ರವಾರ ಪೌರಾಯುಕ್ತ ರಮೇಶ್ ಸುಣಾಗಾರ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ವ್ಯಾಪ್ತಿಯಲ್ಲಿ ಬರುವ ಬೀದಿಗಳಲ್ಲಿ ಹಂದಿಗಳ ಹಾಗೂ ನಾಯಿಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರಿಗೆ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬೀದಿಗಳಲ್ಲಿ ಹಂದಿನಾಯಿಗಳನ್ನು ತಪ್ಪಿಸಲು ಹೋಗಿ ಅನೇಕ ಜನರು ಬಿದ್ದು ಸಣ್ಣಪುಟ್ಟ ಗಾಯಗಳನ್ನು ಮಾಡಿಕೊಂಡಿದ್ದಾರೆ. ಶಾಲೆಯ ಮಕ್ಕಳು ಹೆದರಿಕೊಂಡು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಪತ್ರಿಕೆಗಳಲ್ಲೂ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಆದ್ದರಿಂದ ಕೂಡಲೇ ಅವುಗಳ ಹಾವಳಿ ತಪ್ಪಿಸಿ, ಊರಿನಿಂದ ಹೊರಗಡೆ ಸಾಗಿಸಬೇಕೆಂದು ತಿಳಿಸಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‍ಪಿಟಿ ದಾದಾಪೀರ್, ಸದಸ್ಯ ರವಿಚಂದ್ರನಬಾಯ್ಕ್ ಇತರರು ಉಪಸ್ಥಿತರಿದ್ದರು.