ತುಮಕೂರು
ನಗರದ ಅಭಿವೃದ್ಧಿಗೆ ರಾಜ್ಯ ಸರ್ಕಾರವು ವಿಶೇಷ ಪ್ಯಾಕೇಜ್‍ನ್ನು ನೀಡಬೇಕು ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ಶಿವಮೊಗ್ಗವನ್ನು ಮತ್ತು ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರು ಹಾಸನವನ್ನು ಅಭಿವೃದ್ಧಿಪಡಿಸಿದ ರೀತಿಯಲ್ಲಿಯೇ ಮಾನ್ಯ ಉಪ ಮುಖ್ಯ ಮಂತ್ರಿಗಳಾದ ಡಾ; ಜಿ.ಪರಮೇಶ್ವರ್ ರವರು ತುಮಕೂರು ನಗರಕ್ಕೆ ವಿಶೇಷ ಪ್ಯಾಕೇಜ್‍ನ್ನು ನೀಡಿ ತುಮಕೂರು ನಗರದ ಅಭಿವೃದ್ಧಿಗೆ ನಾಂದಿಯಾಗಬೇಕೆಂದು ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.
ಅವರು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ತುಮಕೂರು ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ನೀಲ ನಕ್ಷೆ ರೂಪಿಸುವ ಕುರಿತಾಗಿ ವಿವಿಧ ಇಲಾಖೆಗಳನ್ನು ಒಳಗೊಂಡಂತೆ ಸಭೆಯನ್ನು ನಡೆಸಿದರು.
ಈ ಸಭೆಯಲ್ಲಿ ಮಾತನಾಡುತ್ತಾ ತುಮಕೂರು ನಗರದಲ್ಲಿ ಎಷ್ಟು ಕಿ.ಮೀ. ರಸ್ತೆ ವಿಸ್ತೀರ್ಣ ಇದೆ ಎಂಬ ಮಾಹಿತಿ ಯಾರ ಬಳಿಯೂ ನಿಖರತೆ ಇಲ್ಲ. ರಸ್ತೆ ವಿಸ್ತೀರ್ಣದ ಬಗ್ಗೆ ಮಹಾನಗರಪಾಲಿಕೆ ನಗರ ನೀರು ಮತ್ತು ಒಳಚರಂಡಿ ಹಾಗೂ ಸ್ಮಾರ್ಟ್ ಸಿಟಿ ರವರ ಬಳಿ ಇರುವ ಮಾಹಿತಿ ಒಂದಕ್ಕೊಂದು ತಾಳೆಯಾಗುವುದಿಲ್ಲ. ಯಾವ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತದೆಯೋ ಅದೇ ರಸ್ತೆಯನ್ನು ಒಳಚರಂಡಿಗಾಗಲೀ ನೀರಿನ ಪೈಪ್ ಗಾಗಲೀ ಮತ್ತೆ ಕಾಮಗಾರಿ ಮಾಡಲು ಬಳಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ಹಣ ಪೋಲಾಗುವುದರ ಜೊತೆಗೆ ನಗರದ ಸಮಗ್ರ ಅಭಿವೃದ್ಧಿಗೆ ಅನುದಾನದ ಕೊರತೆಯಾಗುತ್ತಿದೆ. ಇಂತಹ ಸಮಸ್ಯೆಯನ್ನು ತಪ್ಪಿಸಲು ಯಾವುದೇ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಮುಂಚೆ ಬೆಸ್ಕಾಂ, ನೀರು ಮತ್ತು ಒಳಚರಂಡಿ ಮಂಡಳಿ ಅರಣ್ಯ ಇಲಾಖೆಗಳು ಒಂದೇ ಬಾರಿ ನಗರದ ಅಭಿವೃದ್ಧಿಗೆ ಮುಂದಾದರೆ ಜನಸಾಮಾನ್ಯರ ಹಣ ಪೋಲಾಗುವದಿಲ್ಲ ಎಂದರು.
ದಿನದಿಂದ ದಿನಕ್ಕೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಪೋಲೀಸ್ ಇಲಾಖೆಯವರಿಗೆ ಮಹಾನಗರಪಾಲಿಕೆ ಕೈಜೋಡಿಸಬೇಕು, ಕೆಟ್ಟು ನಿಂತಿರುವ ಸಿಗ್ನಲ್ ಲೈಟ್ ಗಳನ್ನು ಬದಲಾಯಿಸಬೇಕು. ಎಲ್ಲಿ ಹಂಪುಗಳ ಅವಶ್ಯಕತೆ ಇದೆಯೋ ಅಂತಹ ಸ್ಥಳಗಳಲ್ಲಿ ಹಂಪುಗಳನ್ನು ನಿರ್ಮಿಸಬೇಕು. ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಸ್ಥಳವನ್ನು ನಿಗಧಿಪಡಿಸುವಂತೆ ಮಹಾನಗರಪಾಲಿಕೆಯ ಆಯುಕ್ತರಿಗೆ ಸೂಚಿಸಿದರು.ಈ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ