ಚಳ್ಳಕೆರೆ
ಕಳೆದ ಐದು ವರ್ಷಗಳ ಅವಧಿಯಲ್ಲಿ ಚಳ್ಳಕೆರೆ ನಗರದ ಅಭಿವೃದ್ಧಿಗಾಗಿ ನೂರಾರು ಕೋಟಿ ಮೌಲ್ಯದ ಯೋಜನೆಯನ್ನು ಜಾರಿಗೆ ತರಲಾಗಿದೆ. ನಗರದ ನಾಗರೀಕರಿಗೆ ಸಾಧ್ಯವಾದಷ್ಟು ಮಟ್ಟಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗಿದೆ. ನಗರದಲ್ಲಿ ಈಗಾಗಲೇ 6.5ಕೋಟಿ ವೆಚ್ಚದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗಿದೆ. 2.75 ಕೋಟಿ ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಚಾಲನೆ ನೀಡಲಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಾಂಗ್ರೆಸ್ ಪಕ್ಷ ಎಂದೂ ಹಿನ್ನೆಡೆ ಅನುಭವಿಸಿಲ್ಲ. ಅದ್ದರಿಂದ ಈ ತಿಂಗಳ 31ರಂದು ನಡೆಯುವ ನಗರಸಭಾ ಚುನಾವಣೆಗೆ ಚಳ್ಳಕೆರೆ ನಗರದ ಒಂದನೇ ಬ್ಲಾಕ್ ಅಭ್ಯರ್ಥಿ ನಾಗವೇಣಮ್ಮ, ಎರಡು ಬ್ಲಾಕ್ ಅಭ್ಯರ್ಥಿ ವೈ.ಪ್ರಕಾಶ್ ಇವರಿಗೆ ಮತ ನೀಡುವಂತೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ವಿನಂತಿಸಿದರು.
ಅವರು, ಶುಕ್ರವಾರ ಮಧ್ಯಾಹ್ನ ನಗರದ 1 ಮತ್ತು 2ನೇ ವಾರ್ಡ್‍ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರದ ಜನತೆಗೆ ಕಳೆದ ಐದು ವರ್ಷಗಳ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಸೌಲಭ್ಯವನ್ನು ಒದಗಿಸಲು ಸಾಧ್ಯವಾಗಿದೆ. ನಗರದ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಆದ್ಯತೆ ನೀಡಿದ್ಧಾರೆ. ನಗರದ ಮತದಾರರ ಸಹಕಾರದಿಂದ ನಾನು ಮತ್ತೊಮ್ಮೆ ಎರಡನೇ ಬಾರಿಗೆ ಈ ಕ್ಷೇತ್ರದ ಶಾಸಕನಾಗಿ ಸೇವೆ ಮಾಡಲು ಅವಕಾಶ ದೊರಕಿದೆ. ಈ ಬಾರಿಯ ಚುನಾವಣೆಯಲ್ಲಿ ನಗರಸಭಾ ಆಡಳಿತ ಕಾಂಗ್ರೆಸ್ ಪಕ್ಷ ವಹಿಸಿಕೊಂಡಲ್ಲಿ ಯುಜಿಡಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಮತದಾರರ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ನಮ್ಮ ಪಕ್ಷದ ಅಭ್ಯರ್ಥಿಗಳು ಸಿದ್ದರಿದ್ದಾರೆ. ದಯಮಾಡಿ ಪ್ರಸ್ತುತ ಈ ತಿಂಗಳ ಅಂತ್ಯದಲ್ಲಿ ನಡೆಯುವ ನಗರಸಭಾ ಚುನಾವಣೆಯಲ್ಲಿ ನಿಮ್ಮ ಮತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ನೀಡುವಂತೆ ಮನವಿ ಮಾಡಿದರು.
ಎರಡನೇ ಬ್ಲಾಕ್ ಅಭ್ಯರ್ಥಿ ವೈ.ಪ್ರಕಾಶ್ ಮಾತನಾಡಿ, ನಾನು ಕಳೆದ ಕೆಲವಾರು ವರ್ಷಗಳಿಂದ ಖಾಸಗಿ ವ್ಯವಹಾರದಲ್ಲಿ ತೊಡಗಿದ್ದೇನೆ. ಶಾಸಕ ಟಿ.ರಘುಮೂರ್ತಿಯವರ ಅಭಿವೃದ್ಧಿ, ಪ್ರಗತಿಪರ ಕಾರ್ಯಕ್ರಮಗಳು ನನಗೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವಂತೆ ಮಾಡಿತು. ನಮ್ಮ ವಾರ್ಡ್‍ನ ಎಲ್ಲಾ ಮುಖಂಡ ಅಭಿಪ್ರಾಯವನ್ನು ಪಡೆದು ಶಾಸಕ ಟಿ.ರಘುಮೂರ್ತಿಯವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇನ್ನೂ ಹೆಚ್ಚಿನ ಬೆಂಬಲ ನೀಡುವ ದೃಷ್ಠಿಯಿಂದ ಈ ವಾರ್ಡ್‍ನ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮತದಾರರು ತಮ್ಮ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಿದಲ್ಲಿ ಎರಡನೇ ವಾರ್ಡ್‍ನ ಸಮಸ್ಯೆಗಳನ್ನು ನಿವಾರಿಸಿ ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.
ಪ್ರಚಾರ ಕಾರ್ಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಾಬುರೆಡ್ಡಿ, ಎನ್.ರವಿಕುಮಾರ್, ಪಕ್ಷದ ಮುಖಂಡರಾದ ದಳವಾಯಿಮೂರ್ತಿ, ಡಿ.ಕೆ.ಕಾಟಯ್ಯ, ಸಿ.ಟಿ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ಟಿ.ಗಿರಿಯಪ್ಪ, ಪುರುಷೋತ್ತಮ, ಸಿ.ಟಿ.ರಾಘವೇಂದ್ರ, ರೆಡ್ಡಿಹಳ್ಳಿ ಶಿವಣ್ಣ, ಮಹಲಿಂಗಪ್ಪ, ಬಾಲು ಮುಂತಾದವರು ಉಪಸ್ಥಿತರಿದ್ದರು.
