ನಗರಸಭಾ ಚುನಾವಣೆ ಹಿನ್ನೆಲೆ : ಚುನಾವಣಾ ಕಾರ್ಯದ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ

ಚಳ್ಳಕೆರೆ

           ಈ ತಿಂಗಳ 31ರಂದು ನಗರಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಚುನಾವಣಾ ಪ್ರಕ್ರಿಯೆಗಳನ್ನು ವೀಕ್ಷಿಸಲು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಸೋಮವಾರ ಮಧ್ಯಾಹ್ನ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

           ಇಲ್ಲಿನ ತಾಲ್ಲೂಕು ಕಚೇರಿ ಕಾರ್ಯಾಲಯದಲ್ಲಿ ನಗರಸಭೆಗೆ ಚುನಾವಣೆಗೆ ಸಂಬಂಧಪಟ್ಟ ವಿವಿಧ ವಾರ್ಡ್‍ಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿ ಹಾಗೂ ಚುನಾವಣಾ ಸಿಬ್ಬಂದಿ ಗೆ ಕೆಲವು ಸೂಚನೆಗಳನ್ನು ನೀಡಿದರು. ಈ ಸಂಧರ್ಭದಲ್ಲಿ 31ರ ಚುನಾವಣೆಯ ಮತಗಟ್ಟೆಗಳಿಗೆ ಮತ ಯಂತ್ರಗಳನ್ನು ಬ್ಯಾಲೇಟ್ ಸಹಿತ ಸಿದ್ದಪಡಿಸಲಾಗುತ್ತಿದ್ದು, ಈ ಕಾರ್ಯವನ್ನು ಸಹ ಜಿಲ್ಲಾಧಿಕಾರಿಗಳು ವೀಕ್ಷಿಸಿದರು.

             ನಂತರ ತಹಶೀಲ್ದಾರ್ ಟಿ.ಸಿ.ಕಾಂತರಾಜುರವರೊಂದಿಗೆ ಚುನಾವಣೆಯ ಭದ್ರತಾ ಕೊಠಡಿಗೆ ತೆರಳಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಕೆಲವು ಅಗತ್ಯ ಸೂಚನೆಯನ್ನು ತಹಶೀಲ್ದಾಗೆ ನೀಡಿದರು. ಆಗಸ್ಟ್ 31ರ ಮತದಾನಕ್ಕೆ ಸಂಬಂಧಪಟ್ಟಂತೆ ತಾಲ್ಲೂಕು ಆಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ತಹಶೀಲ್ದಾರ್ ಟಿ.ಸಿ.ಕಾಂತರಾಜು ಜಿಲ್ಲಾಧಿಕಾರಿಗಳಿಗೆ ದಾಖಲೆ ಸಹಿತ ಹಲವಾರು ವಿವರಣೆಗಳನ್ನು ನೀಡಿದರು. ಮತಟ್ಟೆ ಯಂತ್ರಗಳಿಗೆ ವಿವಿಧ ವಾರ್ಡ್‍ಗಳ ಅಭ್ಯರ್ಥಿಗಳ ಬ್ಯಾಲೇಟ್ ನಮೂನೆಗಳನ್ನು ಅಳವಡಿಸುವಾಗ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಯಾವುದೇ ಲೋಪವಿಲ್ಲದೆ ಎಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಚುನಾವಣಾ ಕಾರ್ಯಕ್ಕೆ ನೇಮಿಸಿದ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗ ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದರು. ಚುನಾವಣಾ ಕಾರ್ಯವನ್ನು ನಿಮ್ಮೆಲ್ಲರ ಅನುಭವದ ಹಿನ್ನೆಲೆಯಲ್ಲಿ ಶಾಂತಿಯುತ ಚುನಾವಣೆ ನಡೆಯುವ ನಿಟ್ಟಿನಲ್ಲಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

               ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾಹಿತಿ ನೀಡಿ, ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್‍ಗಳಿದ್ದು, 39 ಮತಗಟ್ಟೆ ಕೇಂದ್ರಗಳು ಹಾಗೂ ಹೆಚ್ಚುವರಿ ಮತಗಳ ಮತಗಟ್ಟೆ ಕೇಂದ್ರಗಳೂ ಸೇರಿ ಒಟ್ಟು 45 ಮತಗಟ್ಟೆಗಳಿವೆ. ಈ ಪೈಕಿ ವಾರ್ಡ್ ನಂ.19ರಲ್ಲಿ ಎರಡೂ ಮತಗಟ್ಟೆಗಳಿದ್ದು, ಅಲ್ಲಿಂದ ಕೇವಲ ಒರ್ವ ಮಹಿಳೆ ಮಾತ್ರ ನಾಮಪತ್ರ ಸಲ್ಲಿಸಿದ್ದು, ಆ ವಾರ್ಡ್‍ನಲ್ಲಿ ಚುನಾವಣೆ ಇರುವುದಿಲ್ಲ. ಉಳಿದಂತೆ 43 ವಾರ್ಡ್‍ಗಳಲ್ಲೂ ಮತದಾನ ನಡೆಯಲಿದ್ದು, ತಾಲ್ಲೂಕು ಆಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿರುವುದಾಗಿ ತಿಳಿಸಿದರು.

              ಜಿಲ್ಲಾಧಿಕಾರಿಗಳ ಆಗಮನದಿಂದ ತಾಲ್ಲೂಕು ಕಚೇರಿಯ ಚುನಾವಣಾ ಸಿಬ್ಬಂದಿ ಗಲಿಬಿಲಿಗೊಂಡರು. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಗರದ ಎಲ್ಲಾ ವಾರ್ಡ್‍ಗಳ ಮತಗಟ್ಟೆ ಕೇಂದ್ರಗಳಿಗೆ ತೆಗೆದುಕೊಂಡು ಹೋಗಬೇಕಾದ ಎಲೆಕ್ಟ್ರಾನಿಕ್ ಮಿಷನ್‍ಗಳನ್ನು ಅವರ ಸಮಕ್ಷಮದಲ್ಲೇ ವ್ಯವಸ್ಥಿತವಾಗಿ ಪರಿಶೀಲನೆ ನಡೆಸಿ ನಿಗದಿ ಪಡಿಸಿದ ಟ್ರಂಕ್‍ಗಳಲ್ಲಿ ಭದ್ರವಾಗಿ ಅಳವಡಿಸಲಾಯಿತು. ಸಂಬಂಧಪಟ್ಟ ಎಲ್ಲಾ ಚುನಾವಣಾಧಿಕಾರಿಗಳೂ ಸಹ ಉಪಸ್ಥಿತರಿದ್ದು, ತಮ್ಮ ತಮ್ಮ ವ್ಯಾಪ್ತಿಯ ವಾರ್ಡ್‍ಗಳ ಚುನಾವಣೆಯ ಮತಗಟ್ಟೆ ಕೇಂದ್ರಗಳ ಬಗ್ಗೆ ಮಾಹಿತಿ ಜೊತೆಗೆ ಮತದಾನದಂದು ಮತಗಟ್ಟೆಗೆ ತೆಗೆದುಕೊಂಡು ಹೋಗುವ ಸಲಕರಣೆಗಳ ಬಗ್ಗೆಯೂ ಸಹ ಪರಿಶೀಲನೆ ನಡೆಸಲಾಯಿತು.
ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ತಾಲ್ಲೂಕು ಕಚೇರಿಯಲ್ಲಿನ ಭದ್ರತಾ ಕೊಠಡಿಗೆ ಭೇಟಿ ನೀಡಿದಾಗ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವಂತೆ ತಹಶೀಲ್ದಾರ್‍ಗೆ ಸೂಚಿಸಿದರಲ್ಲೆ ಯಾವಾಗಲೂ ಭದ್ರತಾ ಕೊಠಡಿಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆ ತಿಳಿಸಿದರು. ಯಾವುದೇ ಹಂತದಲ್ಲೂ ಭದ್ರತಾ ಕೊಠಡಿಯ ಹೊರಭಾಗದಲ್ಲಿ ಯಾವುದೇ ಅನ್ಯಶಕ್ತಿಗಳು ಸಂಚರಿಸದಂತೆ ಜಾಗ್ರತೆ ವಹಿಸಬೇಕು ಎಂದರು.
ಈ ಸಂಧರ್ಭದಲ್ಲಿ ಪೌರಾಯುಕ್ತ ಜೆ.ಟಿ.ಹನುಮಂತರಾಜು, ಚುನಾವಣಾ ಸಿಬ್ಬಂದಿಗಳಾದ ಪ್ರಕಾಶ್, ವರುಣ್, ಓಬಳೇಶ್, ಶ್ರೀಧರ, ಶರಣಬಸಪ್ಪ, ರಾಜೇಶ್ ನಾಗರಾಜು ಮುಂತಾದವರು ಉಪಸ್ಥಿತರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link