ನಗರಸಭೆಯಲ್ಲಿ ಜೆಡಿಎಸ್,ಕಾಂಗ್ರೆಸ್‍ನಿಂದ ಭ್ರಷ್ಟಾಚಾರ :ಶಾಸಕ ತಿಪ್ಪಾರೆಡ್ಡಿ ಗಂಭೀರ ಆರೋಪ

ಚಿತ್ರದುರ್ಗ;

               ಕಳೆದ ಹತ್ತು ವರ್ಷಗಳ ಚಿತ್ರದುರ್ಗ ನಗರಸಭೆಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

              ಭಾನುವಾರ ಸ್ಟೇಡಿಯಂ ಸರ್ಕಲ್‍ನಲ್ಲಿ 34ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ಶ್ರೀನಿವಾಸ್ ಅವರ ಪರ ಪ್ರಚಾರಕ್ಕೆ ಚಾಲನೆ ನೀಡಿದ ಶಾಸಕರು, ಇಂತಹ ಭ್ರಷ್ಟರಿಗೆ ತಕ್ಕ ಪಾಠ ಕಲಿಸಲು ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು

                ನಗರಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‍ನವರು ಹೊಂದಾಣಿಕೆ ಮಾಡಿಕೊಂಡು ಸುದೀರ್ಘ ಆಡಳಿತ ನಡೆಸಿದ್ದಾರೆ. ಆದರೆ ನಗರದಲ್ಲಿ ಈ ಅವಧಿಯಲ್ಲಿ ಯಾವುದೇ ಅಭಿವೃದ್ದಿ ಸಾಧ್ಯವಾಗಿಲ್ಲ. ಬದಲಾಗಿ ಇಬ್ಬರೂ ಪಕ್ಷದವರು ಸೇರಿಕೊಂಡು ಕೋಟ್ಯಾಂತರ ರೂಪಾಯಿ ಲೋಟಿ ಮಾಡಿದ್ದಾರೆಂದು ಟೀಕಿಸಿದರು

                ನಗರಸಭೆಯಲ್ಲಿ ಸಾಕಷ್ಟು ಅನುದಾನವಿದೆ. ಪ್ರತಿ ವರ್ಷವೂ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಕೋಟಿಗಟ್ಟಲೆ ಅನುದಾನವೂ ಬರುತ್ತದೆ. ಈ ಅನುದಾನವನ್ನು ಜನೋಪಯೋಗಿ ಕಾರ್ಯಗಳಿಗೆ ಬಳಕೆ ಮಾಡದೆ ತಮ್ಮವರಿಗೆ ಅನುಕೂಲವಾಗುವ ಕಾಮಗಾರಿಗಳಿಗೆ ಹೆಚ್ಚು ಬಳಕೆ ಮಾಡಿದ್ದಾರೆ. ಇಂತಹವರಿಗೆ ಸೂಕ್ತ ಪಾಠ ಕಲಿಸಬೇಕಾಗಿದೆ. ಹಾಗಾಗಿ ಜನರು ಬಿಜೆಪಿಯ ಅಭ್ಯರ್ಥಿಗಳಿಗೆ ಆಯ್ಕೆ ಮಾಡಬೇಕು ಎಂದರು

               ಈ ಚುನಾವಣೆಯಲ್ಲಿ ನಾವು ಅಧಿಕ ಸ್ಥಾನಗಳಿಸುವ ವಿಶ್ವಾಸವಿದೆ. ಜನರು ಸಹಕರಿಸಿದರೆ ಅಧಿಕಾರ ನಮ್ಮ ಕೈಗೆ ಸಿಗಲಿದ್ದು, ಮುಂದಿನ ದಿನಗಳಲ್ಲಿ ನಗರದ ಸಮಗ್ರ ಅಭಿವೃದ್ದಿಗೆ ವಿಶೇಷ ಒತ್ತುಕೊಟ್ಟು ಕೆಲಸ ಮಾಡುತ್ತೇವೆ. ನಾನೂ ಸಹ ಈ ವಿಚಾರದಲ್ಲಿ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ನುಡಿದರು
ಭಾರತೀಯ ಜನತಾ ಪಾರ್ಟಿ ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅರ್ಹರಿಗೆ ಮಾತ್ರ ಟಿಕೆಟ್ ಕೊಟ್ಟಿದೆ. 34ನೇ ವಾರ್ಡಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಹೆಚ್.ಶ್ರೀನಿವಾಸ್ ಅವರಿಗೆ ಮತದಾರರು ಬೆಂಬಲಿಸಬೇಕು. ಹಾಗೆಯೇ ಎಲ್ಲಾ ವಾರ್ಡಿನಲ್ಲೂ ಬಿಜೆಪಿ ಗೆದ್ದರೆ ನನಗೂ ಬಲ ಬರುತ್ತದೆ.

            ಇದರಿಂದ ಮುಂದಿನ ದಿನಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲಿಕ್ಕೂ ಸಾಧ್ಯವಾಗುತ್ತದೆ ಎಂದು ತಿಪ್ಪಾರೆಡ್ಡಿ ಹೇಳಿದರು.ನಮ್ಮ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಅವರು ಜನರ ಜೊತೆಗೆ ಬರೆಯುವ ಉತ್ತಮ ವ್ಯಕ್ತಿತ್ವದವರಾಗಿದ್ದು, ಅನೇಕ ಬಡವರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಅವರು ಗೆದ್ದರೆ ಇದೇ ವಾರ್ಡಿನಲ್ಲಿ ಜನಸಂಪರ್ಕ ಕಚೇರಿ ತೆರೆದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಹೇಳಿದರು

                 ಕೇಂದ್ರದಲ್ಲಿ ಮೋದಿ ಅವರ ಸರ್ಕಾರ ಚಿತ್ರದುರ್ಗ ನಗರಕ್ಕೂ ಸುಮಾರು 140 ಕೋಟಿ ರೂಪಾಯಿಗಳ ಅಮೃತ್ ಸಿಟಿ ಯೋಜನೆ ಕೊಟ್ಟಿದೆ. ಈ ಯೋಜನೆಯಡಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯನ್ನೂ ಅನುಷ್ಟಾನಗೊಳಿಸಲಾಗುವುದು ಎಂದರುಈಗಾಗಲೇ ಕೇಂದ್ರ ಸರ್ಕಾರ ಬಡವರಿಗೆ ಸುಮಾರು 30 ಕೋಟಿ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಿಲೆಂಡರ್ ವಿತರಿಸಿದೆ. ಇದು ಹೆಣ್ಣು ಮಕ್ಕಳ ಆರೋಗ್ಯ ದೃಷ್ಟಿಯಿಂದ ಜಾರಿಗೆ ತಂದಿರುವ ಯೋಜನೆಯಾಗಿದೆ. ಅದರ ಜೊತೆಗೆ ಬಡವರಿಗೆ ಯಾವುದೇ ದೊಡ್ಡ ಖಾಯಿಲೆ ಬಂದರೂ ಅವರಿಗೆ ಚಿಕಿತ್ಸೆಯ ವ್ಯವಸ್ಥೆಯನ್ನೂ ಮಾಡಿದೆ ಎಂದರು
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಹೆಚ್.ಶ್ರೀನಿವಾಸ್ ಅವರು, ಚುನಾವಣೆಯಲ್ಲಿ ನಾನು ಗೆದ್ದರೆ ಶಾಸಕರ ಮಾರ್ಗದರ್ಶನದಲ್ಲಿ ವಾರ್ಡಿನ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು
ಬಿಜೆಪಿ ಮುಖಂಡರಾದ ಜಿ.ಎಂ.ಸುರೇಶ್, ಸಿದ್ದೇಶ್‍ಯಾದವ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ನಗರಸಭೆ ಮಾಜಿ ಸದಸ್ಯ ಮಹೇಶ್, ಓಂಕಾರ್, ಪ್ರಭು, ಲಕ್ಷ್ಮಣ್ ಇನ್ನಿತರರು ಹಾಜರಿದ್ದರು
ರಾಖಿ ಕಟ್ಟಲು ನೂಕುನುಗ್ಗಲು;
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ಇಲ್ಲಿ ನೆರೆದಿದ್ದ ನೂರಾರು ಮಂದಿ ಮಹಿಳೆಯರು ರಾಖಿ ಕಟ್ಟಿದರು. ಶಾಸಕರು ವಾಹನದಿಂದ ಇಳಿಯುತ್ತಿದ್ದಂತೆಯೇ ಸುತ್ತುವರೆದ ಮಹಿಳೆಯರು ರಾಖಿ ಕಟ್ಟಲು ಮುಂದಾದರು. ಈ ವೇಳೆ ನೂಕುನುಗ್ಗಲು ಉಂಟಾಯಿತು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link