ಚಳ್ಳಕೆರೆ
ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ನೀಡಿದ ನಗರದ ಮತದಾರರನ್ನು ಅಭಿನಂದಿಸುದಾಗಿ ತಿಳಿಸಿದ ಶಾಸಕ ಟಿ.ರಘುಮೂರ್ತಿ ನಗರ ಎಲ್ಲಾ ಸಮುದಾಯದ ಮುಖಂಡರು ಅಭಿವೃದ್ಧಿ ಪರ ಚಿಂತಕರಾಗಿದ್ದು, ನಗರ ಮತ್ತಷ್ಟು ಉತ್ತಮ ಅಭಿವೃದ್ಧಿಯತ್ತ ಸಾಗಲಿ ಎಂಬ ಸದ್ದುದ್ದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿದ್ದು, ಎಲ್ಲಾ ಮತದಾರರನ್ನು ಪಕ್ಷದ ಪರವಾಗಿ ಮತ್ತು ವಿಜೇತ ಎಲ್ಲಾ ಅಭ್ಯರ್ಥಿಗಳ ಪರವಾಗಿ ಅಭಿನಂದಿಸುವುದಾಗಿಯೂ ನಗರದ ಮತದಾರರ ಆಶೋತ್ತರಗಳಿಗೆ ಸ್ಪಂದಿಸಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಗತಿಪರ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಶಾಸಕ ಟಿ.ರಘುಮೂರ್ತಿ ತಿಳಿಸಿದ್ದಾರೆ.
ಅವರು, ತಮ್ಮ ಸ್ವಗೃಹದಲ್ಲಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸುವ ಸಂದರ್ಭದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ 2013ರ ಪುರಸಭಾ ಚುನಾವಣೆಯಲ್ಲಿ ನಾನು ಆಗಷ್ಟೇ ಶಾಸಕನಾಗಿದ್ದು, ಕೇವಲ 9 ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಜಯಗಳಿಸಿತ್ತು. ಆದರೆ, ಈ ಬಾರಿ ಇಲ್ಲಿನ ಅಭಿವೃದ್ಧಿ ಸಾಧನೆಗಳನ್ನು ಒಪ್ಪಿದ ನಗರದ ಮತದಾರರು 16 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯವನ್ನು ತಂದುಕೊಟ್ಟು ನಗರಸಭೆಯ ಆಡಳಿತ ಚುಕ್ಕಾಣಿಯನ್ನು ನೀಡಿದ್ದಾರೆ. ಕೇವಲ 40 ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷ 3 ಸ್ಥಾನಗಳನ್ನು ಕಳೆದುಕೊಂಡಿದೆ. ವಾರ್ಡ್ 26, 30 ಮತ್ತು 12 ವಾರ್ಡ್‍ಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಅತಿ ಕಡಿಮೆ ಮತಗಳ ಅಂತರದಿಂದ ಸೋಲು ಒಪ್ಪಿದ್ದಾರೆ. ಆದರೆ, ಮತದಾರರ ತೀರ್ಪನ್ನು ನಾನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇನೆ.
ನಗರದ ಸಾವಿರಾರು ಬಡ ಜನತೆಗೆ ನಿವೇಶನ ಹಾಗೂ ವಸತಿ ಸೌಕರ್ಯ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಮನೆಗಳನ್ನು ವಿವಿಧ ನಿಗಮಗಳ ಸಹಯೋಗದಲ್ಲಿ ಮಂಜೂರು ಮಾಡಿಸಿ ನಗರದ ಬಡ ಜನರಿಗೆ ವಿತರಣೆ ಮಾಡುವ ಯೋಜನೆ ಇದೆ. ಈಗಾಗಲೇ ನಗರಕ್ಕೆ ಅವಶ್ಯವಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ತುಂಗಾ ಹಿನ್ನೀರು ಯೋಜನೆಗೆ ಸರ್ಕಾರದ ಮಂಜೂರಾತಿ ದೊರಕಿದೆ. ಸುಮಾರು 120 ಕೋಟಿ ವೆಚ್ಚದ ಯುಜಿಡಿ ಕಾಮಗಾರಿ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಚುನಾಯಿತರಾದ ಎಲ್ಲಾ ಸದಸ್ಯರು ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯಬೇಕಾಗಿದೆ. ಮತದಾರರು ನಂಬಿಕೆ ಇಟ್ಟು ಆಯ್ಕೆ ಮಾಡಿದ್ದು, ಅವರ ನಂಬಿಕೆಯನ್ನು ಹುಸಿಗೊಳಿಸದಂತೆ ಕಾರ್ಯನಿರ್ವಹಿಸಬೇಕೆಂದು ಮನವಿ ಮಾಡಿದರು. ಚುನಾವಣೆಯಲ್ಲಿ ಸೋಲ ಪಕ್ಷದ ಅಭ್ಯರ್ಥಿಗಳು ಎದೆಗುಂದದೆ ಪಕ್ಷದ ಸಂಘಟನೆಯಲ್ಲಿ ತೊಡಗುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿಜೇತ ಅಭ್ಯರ್ಥಿಗಳಾದ ವೈ.ಪ್ರಕಾಶ್, ಬಿ.ಟಿ.ರಮೇಶ್‍ಗೌಡ, ಟಿ.ಮಲ್ಲಿಕಾರ್ಜುನ, ಸಿ.ಕವಿತಾ, ಸಿ.ಸುಜಾತ, ಸುಮಾ, ಸಾವಿತ್ರಿ, ಸಿ.ಬಿ.ಜಯಲಕ್ಷ್ಮಿ, ಸುಮ್ಮಕ್ಕ, ಎಂ.ಜೆ.ರಾಘವೇಂದ್ರ, ಕವಿತಾ, ಆರ್.ಮಂಜುಳಾ, ಟಿ.ಚಳ್ಳಕೇರಪ್ಪ, ಎಚ್.ಪಿ.ವಿರೂಪಾಕ, ಕೆ.ವೀರಭದ್ರಯ್ಯ, ಜೈತುಂಬಿರವರನ್ನು ಅಭಿನಂದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಹಿರಿಯ ಮುಖಂಡ ಟಿ.ಪ್ರಭುದೇವ್, ಜಯವೀರಚಾರ್, ಅನ್ವರ್ ಮಾಸ್ಟರ್, ಸಿ.ವೀರಭದ್ರಬಾಬು, ಎಂ.ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ, ನಗರ ಘಟಕದ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ