ನಗರಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳು ಕಾಂಗ್ರೆಸ್ ಪಾಲು : ದ್ವಿತೀಯ ಸ್ಥಾನ ಜೆಡಿಎಸ್‍ಗೆ

ಚಳ್ಳಕೆರೆ

          ನಗರಸಭೆ ಚುನಾವಣೆಯ ಏಣಿಕೆ ಕಾರ್ಯ ಅಂತ್ಯಗೊಂಡಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ನಗರದ ಮತದಾರರ ಒಲವನ್ನು ಹೆಚ್ಚುಗಳಿಸಿದ್ದು, 16 ಸ್ಥಾನಗಳಿಸಿ ಅಗ್ರಪಟ್ಟ ಗಿಟ್ಟಿಸಿಕೊಂಡಿದೆ. ನಗರದ ಮತದಾರರು ಈ ಭಾರಿಯ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಅಭಿವೃದ್ಧಿಯನ್ನು ಬೆಂಬಲಿಸಿದ್ಧಾರೆ ಎನ್ನಲಾಗಿದೆ.
           ನಗರಸಭೆ ಮತಗಳ ಏಣಿಕೆ ಕಾರ್ಯ ಸೆ.3ರಂದು ಮುಕ್ತಾಯಗೊಂಡಿದ್ದು, ನಗರದ ಒಟ್ಟು 30 ವಾರ್ಡ್‍ಗಳಲ್ಲಿ ಮತಗಳು ಚಲಾವಣೆಯಾಗಿದ್ದು, ಒಟ್ಟು 41349 ಮತದಾರರ ಪೈಕಿ 31300 ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ಧಾರೆ. ನಗರದ 19ನೇ ವಾರ್ಡ್‍ನಲ್ಲಿ ಮಾತ್ರ ಅವಿರೋಧ ಆಯ್ಕೆ ನಡೆದಿದ್ದು, ಅ ವಾರ್ಡ್‍ನ ಮತದಾರರು ಮತ ಚಲಾವಣೆಗೆ ಅವಕಾಶ ಇಲ್ಲದಂತಾಗಿದೆ.
          ನಗರಸಭೆಯ ಚುನಾವಣೆಯ ಮತಗಳು ಯಾವ ಯಾವ ಪಕ್ಷಕ್ಕೆ ಲಭ್ಯವಾದವು ಎಂಬ ¨ಗ್ಗೆ ಮಾಹಿತಿಯನ್ನು ನೀಡಲಾಗುತ್ತಿದ್ದು, ಒಟ್ಟು 30 ಸ್ಥಾನಗಳಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಪಕ್ಷ 14440 ಮತಗಳನ್ನು ಪಡೆದು 16 ಸ್ಥಾನಗಳಲ್ಲಿ ತನ್ನ ವಿಜಯ ಪತಾಕೆಯನ್ನು ಹಾರಿಸಿದೆ. ರಾಜ್ಯ ಮೈತ್ರಿ ಸರ್ಕಾರ ಅಂಗ ಪಕ್ಷವಾದ ಜೆಡಿಎಸ್ ಒಟ್ಟು 25 ಸ್ಥಾನಗಳಲ್ಲಿ ಸ್ಪರ್ಧಿಸಿ 10 ಸ್ಥಾನಗಳನ್ನು ಪಡೆದು 9215 ಮತಗಳನ್ನು ಪಡೆದಿದೆ. ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷ 23 ಸ್ಥಾನಗಳಲ್ಲಿ ಸ್ಪರ್ಧಿಸಿ 5347 ಮತಗಳನ್ನು ಪಡೆದು ನಾಲ್ಕು ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಉಳಿದಂತೆ ಒಟ್ಟು 13 ಪಕ್ಷೇತರರು ಕಣದಲ್ಲಿ ಉಳಿದಿದ್ದು ಅ ಪೈಕಿ ಓರ್ವ ಪಕ್ಷೇತರ ಅಭ್ಯರ್ಥಿ ಮಾತ್ರ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ಧಾರೆ. ಉಳಿದಂತೆ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚು ಸ್ಥಾನ ಗಳಿಸದೇ ಇದ್ದರೂ ಸಹ ವಾರ್ಡ್ ನಂ.24 ಮತ್ತು 20ರಲ್ಲಿ ಭಾರಿ ಪೈಪೋಟಿಯನ್ನು ನೀಡಿರುತ್ತಾರೆ.
         ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದ ಕಾಂಗ್ರೆಸ್ ಪಕ್ಷ ವಿಜಯಸಾಧಿಸಿದ ಸಂತಸದಲ್ಲಿದ್ದು, ನಗರಸಭೆಯ ಆಡಳಿತವನ್ನು ಪಡೆಯುವ ನಿಟ್ಟಿನಲ್ಲಿ ಅತ್ಯಂತ ಯಶಸ್ಸಿ ಹೆಜ್ಜೆ ಇಟ್ಟಿದೆ. ಈಗಾಗಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಮೀಸಲಾತಿಗಳು ಪ್ರಕಟವಾಗಿದ್ದು, ಇಲ್ಲಿನ ನಗರಸಭೆಯ ಅಧ್ಯಕ್ಷರಾಗಿ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷರಾಗಿ ಪರಿಶಿಷ್ಟ ವರ್ಗದ ಮಹಿಳೆ ಆಯ್ಕೆಯಾಗಬೇಕಿದೆ. ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರು ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ.
         ಚಳ್ಳಕೆರೆ ನಗರಸಭೆಗೆ ಕಳೆದ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಮಹಿಳಾ ವರ್ಗಕ್ಕೆ ಮೀಸಲಿದ್ದು ಈ ಬಾರಿಯೂ ಅದೇ ಪುನರಾವರ್ತನೆಯಾಗಿದ್ದು, ನಗರಸಭೆ ಅಧ್ಯಕ್ಷರಾಗಬೇಕು ಎಂಬ ಆಶಾಭಾವನೆಯನ್ನು ಹೊಂದಿದ ಕೆಲವು ಸದಸ್ಯರಿಗೆ ಬೇಸರ ಉಂಟು ಮಾಡಿದೆ. ನಗರಸಭೆಯ ಚುನಾವಣೆಯಲ್ಲಿ ಒಟ್ಟು 13 ಜನ ಕಳೆದ ಅವಧಿಯ ಸದಸ್ಯರು ಸೋತಿದ್ದು, ಎರಡನೇ ಬಾರಿಗೆ ಮತ್ತೊಮ್ಮೆ ಸದಸ್ಯರಾಗಿ ಜೆಡಿಎಸ್‍ನ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್, ಕಾಂಗ್ರೆಸ್‍ನ ರಮೇಶ್‍ಗೌಡ ಮಾತ್ರ ಮರು ಆಯ್ಕೆಯಾಗಿರುತ್ತಾರೆ. ಬಹುತೇಕ ಇನ್ನೆಲ್ಲಾ ಸದಸ್ಯರು ಸೋಲನ್ನು ಒಪ್ಪಿಕೊಂಡು ಸೋಲಿನ ಬಗ್ಗೆ ಚಿಂತನೆ ನಡೆಸುವಲ್ಲಿ ಮುಂದಾಗಿದ್ಧಾರೆ.
         ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ಬಹುತೇಕ ಹೊಸ ಮುಖಗಳಿಗೆ ಮತದಾರ ಮನ್ನಣೆ ನೀಡಿದ್ದು, ಅನೇಕ ಹಿರಿಯ ಸದಸ್ಯರಿಗೆ ಸೋಲಿನ ಹಾದಿ ತೋರಿಸಿದ್ದಾರೆ. ಚುನಾಯಿತರಾದ ನೂತನ ಸದಸ್ಯರು ನಗರಸಭೆ ಕಾನೂನು ಮತ್ತು ಇನ್ನಿತರ ಹಲವಾರು ವಿಚಾರಗಳ ಬಗ್ಗೆ ಚಿಂತನೆ ನಡೆಸಬೇಕಿದೆ. ಚಳ್ಳಕೆರೆ ನಗರಸಭೆ ಜಿಲ್ಲೆಯ ಅಭಿವೃದ್ಧಿ ಹೊಂದಿದ ನಗರಸಭೆಯಾಗಿದ್ದು, ನೂತನ ಸದಸ್ಯರೂ ¸ಹ ಈ ಪರಂಪರೆಯನ್ನೇ ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರಾಮಾಣಿ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕಿದೆ. ಬಹುತೇಕ ಸದಸ್ಯರಿಗೆ ಹಿರಿಯ ಸದಸ್ಯರ ಮಾರ್ಗದರ್ಶನದ ಅವಶ್ಯಕತೆ ಇದೆ.

Recent Articles

spot_img

Related Stories

Share via
Copy link
Powered by Social Snap