ಚಳ್ಳಕೆರೆ
ನಗರಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಚಾರವನ್ನು ಬಿರುಸುಗೊಳಿಸಿದೆ. ಈಗಾಗಲೇ ನಗರದ ಬಹುತೇಕ ವಾರ್ಡ್‍ಗಳಲ್ಲಿ ಶಾಸಕ ಟಿ.ರಘುಮೂರ್ತಿ ಮನೆ ಮನೆಗೂ ತೆರಳಿ ಮತಯಾಚನೆ ಮಾಡಿದ್ಧಾರೆ.
ಸೋಮವಾರ ಶಾಸಕ ಟಿ.ರಘುಮೂರ್ತಿ ಪಕ್ಷದ ಹಿರಿಯ ಮುಖಂಡರಾದ ಟಿ.ರವಿಕುಮಾರ್, ಬಾಬುರೆಡ್ಡಿ, ಹನುಮಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಕಿರಣ್‍ಶಂಕರ್, ಸೌಭಾಗ್ಯ, ಸಿ.ಟಿ.ರಾಘವೇಂದ್ರ, ದಳವಾಯಿಮೂರ್ತಿ, ಸೂರನಹಳ್ಳಿ ಜಗದೀಶ್ ಮುಂತಾದವರು ಬಿರುಸಿನ ಪ್ರಚಾರ ಕೈಗೊಂಡರು. ನಗರದ 13ನೇ ವಾರ್ಡ್ ಅಭ್ಯರ್ಥಿ ಕವಿತಾ ಪಿ.ಮೂರ್ತಿ, 14ನೇ ವಾರ್ಡ್ ಅಭ್ಯರ್ಥಿ ಜಿ.ಟಿ.ಗೋವಿಂದರಾಜು, 15ನೇ ವಾರ್ಡ್ ಅಭ್ಯರ್ಥಿ ಸಿ.ಬಿ.ಜಯಲಕ್ಷ್ಮಿ, 16ನೇ ವಾರ್ಡ್ ಅಭ್ಯರ್ಥಿ ಜಿ.ಸುಜಾತ, 17ನೇ ವಾರ್ಡ್ ಅಭ್ಯರ್ಥಿ ಸುಮಕ್ಕ, 18ನೇ ವಾರ್ಡ್ ಅಭ್ಯರ್ಥಿ ಎಂ.ಜೆ.ರಾಘವೇಂದ್ರ ಪರ ಮತಯಾಚನೆ ಮಾಡಿದರು.
ಈಸಂದರ್ಭದಲ್ಲಿ ನಗರದ ಮತದಾರರೊಂದಿಗೆ ವಿಶೇಷ ಮನವಿ ಮಾಡಿದ ಶಾಸಕ ಟಿ.ರಘುಮೂರ್ತಿ ಕಳೆದ 5 ವರ್ಷಗಳ ಅವಧಿಯಲ್ಲಿ ನಗರದ ಅಭಿವೃದ್ಧಿಗಾಗಿ ನೂರಾರು ಕೋಟಿಗಳ ಯೋಜನೆಯನ್ನು ರೂಪಿಸಲಾಗಿದೆ. ಪ್ರಸ್ತುತ ನಗರದ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗೂ ಸಹ ಚಾಲ್ತಿಯಲ್ಲಿವೆ. ನಗರದ ಮತದಾರರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದಲ್ಲಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಉಪಯುಕ್ತವಾಗುತ್ತದೆ. ದಯಮಾಡಿ ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ತಮ್ಮ ಮೊದಲ ಆದ್ಯತೆ ಕಾಂಗ್ರೆಸ್ ಪಕ್ಷವಾಗಲಿ ಎಂದರು.
ಅಭ್ಯರ್ಥಿಗಳ ಪರವಾಗಿ ಮಾತನಾಡಿದ ಜಿ.ಟಿ.ಗೋವಿಂದರಾಜು, ನಾನು ಎರಡನೇ ಬಾರಿಗೆ ನಗರಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಮತ್ತೊಮ್ಮೆ ನನ್ನನ್ನು ಪುನರಾಯ್ಕೆ ಮಾಡುವ ಮೂಲಕ ಜನಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ಮೊದಲ ಅವಧಿಯಲ್ಲೇ ನಗರಸಭೆಯ ಹಲವಾರು ವ್ಯವಹಾರಗಳ ಬಗ್ಗೆ ಗಮನ ಸೆಳೆದಿದ್ದೇನೆ. ನಗರದ ಹಿತದೃಷ್ಠಿಯಿಂದ ಇನ್ನೂ ಉತ್ತಮ ಕಾರ್ಯಗಳು ಆಗಬೇಕಿದ್ದು, ತಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ