ಚಳ್ಳಕೆರೆ
ನಗರಸಭೆಯ ಒಟ್ಟು 31 ವಾರ್ಡ್ಗಳಲ್ಲಿ ಆಗಸ್ಟ್ 31ರ ಶುಕ್ರವಾರ ಮತದಾನ ನಡೆಯಲಿದ್ದು, ನಗರದ ಒಟ್ಟು 42987 ಮತದಾರರು 43 ಮತಗಟ್ಟೆಗಳಲ್ಲಿ ತಮ್ಮ ಮತವನ್ನು ಚಲಾಯಿಸುವರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಬುಧವಾರ ವಿವಿಧ ಮತಗಟ್ಟೆಗಳಿಗೆ ತೆರಳಿ ಪೀಠೋಪಕರಣ ಮತ್ತು ಇತರೆ ಸೌಲಭ್ಯಗಳನ್ನು ಪೌರಾಯುಕ್ತ ಜೆ.ಟಿ.ಹನುಮಂತರಾಜು, ಶೌಚಾಲಯ, ವಿದ್ಯುತ್ ಸಂಪರ್ಕ, ಸ್ವಚ್ಚತೆ ಇತರೆ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ, ನಗರದ ಒಟ್ಟು 31 ವಾರ್ಡ್ಗಳ ಪೈಕಿ ಒಂದು ವಾರ್ಡ್ನಲ್ಲಿ ಅವಿರೋಧ ಆಯ್ಕೆ ನಡೆದಿದ್ದು, 30 ವಾರ್ಡ್ಗಳ ಚುನಾವಣೆ ನಡೆಯಲಿದ್ದು, 21158 ಪುರುಷರು, 21828 ಮಹಿಳೆಯರು ಒಟ್ಟು 42987 ಮತದಾರರು ಮತಚಲಾಯಿಸಲಿದ್ದು, ಈ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಮತದಾನಕ್ಕೆ ಅವಶ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಪೂರ್ಣಗೊಳಿಸಿದೆ. ಆಗಸ್ಟ್ 30ರ ಮಧ್ಯಾಹ್ನ ನಗರದ 43 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ತೆರಳಿ ತಮ್ಮ ಕಾರ್ಯವನ್ನು ಪ್ರಾರಂಭಿಸುವರು ಎಂದರು.
ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿದ್ದ ಬಹುತೇಕ ಮತಟ್ಟೆಗಳನ್ನು ಹಾಗೇ ಉಳಿಸಿಕೊಂಡಿದ್ದು ಎರಡ್ಮೂರು ಮತಗಟ್ಟೆಗಳನ್ನು ಮಾತ್ರ ಬದಲಾಯಿಸಲಾಗಿದೆ. ಜಿಲ್ಲಾಧಿಕಾರಿಗಳ ಮತ್ತು ತಹಶೀಲ್ದಾರ್ ಸೂಚನೆ ಮೇರೆಗೆ ಪ್ರತಿಯೊಂದು ಮತಗಟ್ಟೆಗೂ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರತಿ ಮತಗಟ್ಟೆಯ ವ್ಯವಸ್ಥೆಯ ಬಗ್ಗೆ ಗಮನಹರಿಸಲು ನಗರಸಭೆಯ ಸಹಾಯಕ ಇಂಜಿನಿಯರ್ ಮತ್ತು ಸಿಬ್ಬಂದಿ ವರ್ಗಕ್ಕೆ ಸೂಚನೆ ನೀಡಲಾಗಿದೆ. ಪ್ರತಿಯೊಂದು ಮತಗಟ್ಟೆಯ ಆವರಣವನ್ನೂ ಸಹ ಸ್ವಚ್ಚಗೊಳಿಸಲಾಗುತ್ತಿದೆ. ಮತದಾನಕ್ಕೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಈಗಾಗಲೇ ಸಿದ್ದಪಡಿಸಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
