ನಗರಸಭೆ ಚುನಾವಣೆ : 133 ಅಭ್ಯರ್ಥಿಗಳ ನಾಮಪತ್ರಗಳನ್ನು ಅಂಗೀಕರಿಸಿದ ಚುನಾವಣಾಧಿಕಾರಿಗಳು

ಚಳ್ಳಕೆರೆ :

  ನಗರಸಭೆಯ 31 ವಾರ್ಡ್‍ಗಳ ಚುನಾವಣೆಗೆ ಒಟ್ಟು 133 ವಿವಿಧ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಸೋಮವಾರ ನಾಮಪತ್ರಗಳ ಪರಿಶೀಲನಾ ಕಾರ್ಯ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರ ತನಕ ನಡೆದಿದ್ದು, ಎಲ್ಲಾ ನಾಮಪತ್ರಗಳು ಸಿಂಧುವಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

    ನಗರಸಭೆಯಲ್ಲಿ ಒಟ್ಟು 31 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಬೇಕಿದ್ದು, ಕಾಂಗ್ರೆಸ್ ಪಕ್ಷ 33 ಅರ್ಜಿ, ಬಿಜೆಪಿ 28 ಹಾಗೂ ಜೆಡಿಎಸ್ 26 ಇನ್ನುಳಿದಂತೆ ಪಕ್ಷೇತರರು, ಸಿಪಿಐ, ಸಿಪಿಎಂ ಪಕ್ಷದ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ಧಾರೆ. ಸೋಮವಾರ ಎಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಉಮೇದುವಾರರು ಖುದ್ದಾಗಿ ಹಾಜರಿದ್ದು, ನಾಮಪತ್ರಗಳ ಪರಿಶೀಲನಾ ಕಾರ್ಯದಲ್ಲಿ ಉಪಸ್ಥಿತರಿದ್ದರು. ಚುನಾವಣಾಧಿಕಾರಿಗಳು ಪ್ರತಿಯೊಂದು ವಾರ್ಡ್‍ನಲ್ಲೂ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ವಿವರಗಳನ್ನು ಅಭ್ಯರ್ಥಿಗಳ ಸಮ್ಮುಖದಲ್ಲೇ ಓದಿ ಎಲ್ಲಾ ಮಾಹಿತಿಗಳು ಸರಿಇದ್ದ ಕಾರಣ ನಾಮಪತ್ರಗಳನ್ನು ಅಂಗೀಕರಿಸಲಾಯಿತು.

   ವಾರ್ಡ್ ನಂ.22ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪುಪ್ಪಸಂಜೀವಮೂರ್ತಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರಿಮಳಶಿವಕುಮಾರ್ ಆಕ್ಷೇಪವೆತ್ತಿದ ಕಾರಣ ಕೆಲವು ಗಂಟೆಗಳ ಕಾಲ ಕೋಲಾಹಲ ಉಂಟಾಯಿತು. ಚುನಾವಣಾಧಿಕಾರಿಗಳು ಮಧ್ಯಾಹ್ನ 3ರ ವರೆಗೆ ತಕರಾರು ಅರ್ಜಿ ಸಲ್ಲಿಸುವಂತೆಯೂ ಸೂಚನೆ ನೀಡಿದ್ದರು. ಸದರಿ ದಾಖಲಾತಿ ವಿವರಗಳು ನ್ಯಾಯಾಲಯದಲ್ಲಿದ್ದು, ಸಕಾಲದಲ್ಲಿ ನೀಡಲು ಸಾಧ್ಯವಾಗದ ಕಾರಣ ಚುನಾವಣಾಧಿಕಾರಿಗಳು ನಾಮಪತ್ರವನ್ನು ಅಂಗೀಕರಿಸಿದರು.

   ನಗರಸಭೆಯ ಕೆಲವು ವಾರ್ಡ್‍ಗಳಲ್ಲಿ ಕೇವಲ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು, ಈ ಬಗ್ಗೆ ಇಬ್ಬರೂ ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸಿ ಅವಿರೋಧ ಆಯ್ಕೆಗೆ ಪ್ರಯತ್ನಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಪ್ರಸ್ತುತ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಮುಂಚೂಣಿಯಲ್ಲಿದ್ದು, ಈ ಬಾರಿ ನಗರಸಭಾ ಆಡಳಿತವನ್ನು ಪಡೆಯುವ ಉತ್ಸಾಹದಲ್ಲಿದೆ. ನಗರಸಭೆ ಚುನಾವಣೆಯ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಶಾಸಕ ಟಿ.ರಘುಮೂರ್ತಿ ಹಾಗೂ ಜಿಲ್ಲಾ ಮುಖಂಡರು ನಿರ್ವಹಿಸುವರು ಎಂದು ಕಾಂಗ್ರೆಸ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ ತಿಳಿಸಿದ್ಧಾರೆ.

   ಮೇ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಭ್ಯರ್ಥಿಯ ದಿಢೀರ್ ನಿರ್ಧಾರದಿಂದ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ನಗರಸಭೆಯ ಚುನಾವಣೆಗೆ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಲು ಸಾಧ್ಯವಾಗಿಲ್ಲ. ಕಾರಣ ಕಳೆದ ಸುಮಾರು 3 ತಿಂಗಳಿನಿಂದ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುವ ವಿಚಾರದಲ್ಲಿ ಇರುವ ತೊಡಕು ಹೆಚ್ಚಿನ ಅಭ್ಯರ್ಥಿಗಳನ್ನು ಸೆಳೆಯಲು ಸಾಧ್ಯವಾಗಿಲ್ಲ.
ಜೆಡಿಎಸ್ ಪಕ್ಷದಲ್ಲೂ ಸಹ ವಿಧಾನಸಭಾ ಚುನಾವಣೆಯಲ್ಲಿ 60 ಸಾವಿರ ಮತಗಳು ಅಭ್ಯರ್ಥಿಗೆ ಲಭಿಸಿದ್ದು, ಇದರ ಆಧಾರದ ಮೇಲೆಯೇ ಕಾರ್ಯಕರ್ತರನ್ನು ಹುರಿದುಂಬಿಸಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಸಜ್ಜಿಗೊಳಿಸಬೇಕಿದ್ದು, ಆದರೆ, ಹೆಚ್ಚಿನ ಪ್ರಯತ್ನ ಪಕ್ಷದಿಂದ ಆಗದ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಬಹುತೇಕ ಕಾರ್ಯಕರ್ತರು ಹಿಂದೇಟು ಹಾಕಿದ್ಧಾರೆ. ಹಾಗಾಗಿ ಬಿಜೆಪಿ ಹಾಗೂ ಜೆಡಿಎಸ್‍ನಲ್ಲಿ ಅಭ್ಯರ್ಥಿಗಳನ್ನು ಗುರುತಿಸಲಾದ ವೈಪಲ್ಯ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ತಂದುಕೊಡುವುದೇ ಕಾದುನೋಡಬೇಕಿದೆ.

Recent Articles

spot_img

Related Stories

Share via
Copy link
Powered by Social Snap