ನಗರ ಸ್ಥಳೀಯ ಸಂಸ್ಥೆ: ಶಾಂತಿಯುತ ಮತದಾನ

 ತುಮಕೂರು:

      ಜಿಲ್ಲೆಯ ಒಂದು ಮಹಾನಗರ ಪಾಲಿಕೆ, ಎರಡು ಪುರಸಭೆ, ಎರಡು ಪಟ್ಟಣ ಪಂಚಾಯತಿಗಳಿಗೆ ಶುಕ್ರವಾರ ನಡೆದ ಚುನಾವಣೆಗೆ ಶುಕ್ರವಾರ ಶಾಂತಿಯುತ ಮತದಾನವಾಗಿದೆ. ಚಿ.ನಾ.ಹಳ್ಳಿ ಸೇರಿದಂತೆ ಕೆಲವು ಕಡೆ ಸಣ್ಣಪುಟ್ಟ ಪ್ರಸಂಗಗಳನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

      ಮಧುಗಿರಿ ಪುರಸಭೆ ಶೇ. 81.04, ಚಿಕ್ಕನಾಯಕನಹಳ್ಳಿ ಪುರಸಭೆ ಶೇ. 79.80, ಗುಬ್ಬಿ ಪಟ್ಟಣ ಪಂಚಾಯತಿ ಶೇ. 79.10 ಹಾಗೂ ಕೊರಟಗೆರೆ ಪಟ್ಟಣ ಪಂಚಾಯತಿ ಶೇ. 81.41 ರಷ್ಟು ಮತದಾನವಾಗಿದೆ.

      ತುಮಕೂರು ಮಹಾ ನಗರ ಪಾಲಿಕೆಯ 35 ವಾರ್ಡ್‍ಗಳಿಗೆ ಚುನಾವಣಾ ಮತದಾನವು ನಡೆದಿದ್ದು, 215 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಚಿಕ್ಕನಾಯಕನಹಳ್ಳಿ ಪುರಸಭೆ -73, ಮಧುಗಿರಿ ಪುರಸಭೆ-68, ಗುಬ್ಬಿ ಪಟ್ಟಣ ಪಂಚಾಯತಿ-68, ಕೊರಟಗೆರೆ ಪಟ್ಟಣ ಪಂಚಾಯತಿ-60 ಸೇರಿ ಒಟ್ಟು 484 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದರು.

      ಬೆಳಿಗ್ಗೆ ನಿಧಾನ ಗತಿಯಲ್ಲಿ ಆರಂಭವಾದ ಚುನಾವಣಾ ಮತದಾನವು ಮಧ್ಯಾಹ್ನದ ಹೊತ್ತಿಗೆ ಬಿರುಸಿನಿಂದ ನಡೆಯಿತು. ಮರಳೂರು ದಿಣ್ಣೆ, ಕೋತಿತೋಪು, ಹೊನ್ನೇನಹಳ್ಳಿ ಸೇರಿದಂತೆ ತುಮಕೂರು ನಗರ ವಿವಿಧ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ಮತದಾರರು ನಿಂತು ತಮ್ಮ ಮತದಾನ ಮಾಡಿದರು.

      ಮರಳೂರು ದಿಣ್ಣೆ ಸರ್ಕಾರಿ ಉರ್ದು ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ಮತದಾರರು ಉದ್ದದ ಸರತಿ ಸಾಲಿನಲ್ಲಿ ಶಾಂತವಾಗಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ್ದ ದೃಶ್ಯ ಕಂಡು ಬಂತು.

      ತುಮಕೂರು ಜಿಲ್ಲಾಡಳಿತ ಹಾಗೂ ತುಮಕೂರು ಮಹಾ ನಗರ ಪಾಲಿಕೆ ಮತದಾರರಿಗೆ ಯಾವ ಮತಗಟ್ಟೆ ವ್ಯಾಪ್ತಿಯಲ್ಲಿ ತಮ್ಮ ಹೆಸರು ಇದೆ ಎಂಬುದರ ಬಗ್ಗೆ ಮೊದಲೇ ವ್ಯಾಪಕ ಪ್ರಚಾರ ನೀಡಿದ್ದಲ್ಲದೆ, ಮನೆ ಮನೆಗೆ ಬಿಎಲ್‍ಓಗಳ ಮೂಲಕ ಮತದಾರರ ಚೀಟಿಗಳನ್ನು ವಿತರಿಸಿದ್ದ ಹಿನ್ನಲೆಯಲ್ಲಿ ಮತದಾರರಿಗೆ ಯಾವುದೇ ಗೊಂದಲವಿಲ್ಲದೆ ಸಂಬಂಧಿಸಿದ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ದೃಶ್ಯಗಳು ಕಂಡು ಬಂದವು.

      ಮಧುಗಿರಿ ಮತ್ತು ಚಿಕ್ಕನಾಯಕನಹಳ್ಳಿ ಪುರಸಭೆ ಹಾಗೂ ಗುಬ್ಬಿ ಮತ್ತು ಕೊರಟಗೆರೆ ಪಟ್ಟಣ ಪಂಚಾಯತಿ ಚುನಾವಣಾ ಮತದಾನವು ಬೆಳಿಗ್ಗೆಯಿಂದಲೇ ಬಿರುಸಿನಿಂದ ಆರಂಭವಾಗಿದ್ದು, ಕಂಡು ಬಂತು. ವೃದ್ಧರು, ಮಹಿಳೆಯರು, ಯುವ ಮತದಾರರು ಎಲ್ಲರೂ ಉತ್ಸಾಹದಿಂದ ಮತದಾನ ಮಾಡಿದರು.

      ಮರಳೂರು ದಿಣ್ಣೆ ಸರ್ಕಾರಿ ಉರ್ದು ಶಾಲೆಯಲ್ಲಿ ಮತಗಟ್ಟೆಗೆ ವಿಕಲ ಚೇತನ ಈರಣ್ಣ ಅವರು ತ್ರಿಚಕ್ರ ವಾಹನದಲ್ಲಿ ಬಂದು ಮತ ಚಲಾಯಿಸಿ ಎಲ್ಲರ ಗಮನ ಸೆಳೆದರು. ಪ್ರತಿ ಚುನಾವಣೆಯಲ್ಲೂ ತಪ್ಪದೆ ಮತದಾನ ಮಾಡುತ್ತೇನೆ. ಮತದಾನ ನಮ್ಮ ಹಕ್ಕು. ಅದನ್ನು ಚಲಾಯಿಸಬೇಕು ಎಂದು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.

ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ :-

 

      ತುಮಕೂರು ನಗರದ ಕೋತಿ ತೋಪಿನ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಗೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ. ಅವರು ಭೇಟಿ ನೀಡಿ ಪರಿಶೀಲಿಸಿದರು.

ಬಿಗಿ ಬಂದೋಬಸ್ತ್ :-

      ತುಮಕೂರು ಮಹಾನಗರಪಾಲಿಕೆ, ಗುಬ್ಬಿ, ಕೊರಟಗೆರೆ ಪಟ್ಟಣ ಪಂಚಾಯತಿ ಹಾಗೂ ಮಧುಗಿರಿ ಮತ್ತು ಚಿಕ್ಕನಾಯಕನಹಳ್ಳಿ ಪುರಸಭೆ ಚುನಾವಣಾ ಮತದಾನಕ್ಕೆ ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

  ಸೆ.3ರಂದು ಮತ ಎಣಿಕೆ :-

      ತುಮಕೂರು ಮಹಾ ನಗರ ಪಾಲಿಕೆ, ಮಧುಗಿರಿ ಮತ್ತು ಚಿಕ್ಕನಾಯಕನಹಳ್ಳಿ ಪುರಸಭೆ ಹಾಗೂ ಕೊರಟಗೆರೆ ಮತ್ತು ಗುಬ್ಬಿ ಪಟ್ಟಣ ಪಂಚಾಯತಿಯ ಮತ ಎಣಿಕೆಯು ಸೆ. 3ರಂದು ನಡೆಯಲಿದೆ.

      ತುಮಕೂರು ಮಹಾನಗರ ಪಾಲಿಕೆ-ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಚಿಕ್ಕನಾಯಕನಹಳ್ಳಿ ಪುರಸಭೆ- ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಚಿಕ್ಕನಾಯಕನಹಳ್ಳಿ; ಮಧುಗಿರಿ ಪುರಸಭೆ- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ; ಗುಬ್ಬಿ ಪಟ್ಟಣ ಪಂಚಾಯತಿ – ತಾಲ್ಲೂಕು ಕಛೇರಿ, ಗುಬ್ಬಿ; ಕೊರಟಗರೆ ಪಟ್ಟಣ ಪಂಚಾಯತಿ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆ ಇಲ್ಲಿ ಮತ ತುಂಬಿದ ವಿದ್ಯುನ್ಮಾನ ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.

ಮಹಾನಗರ ಪಾಲಿಕೆ:

      ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್‍ಗಳಿಗೆ ಚುನಾವಣೆ ನಡೆಯಿತು. 246621 ಮತದಾರರ ಪೈಕಿ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಒಟ್ಟು ಶೇ.20.02 ರಷ್ಟು ಮಾತ್ರವೇ ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ 33.28 ರಷ್ಟು ಮತದಾನವಾಯಿತು. ಕೆಲವು ಪ್ರದೇಶದಲ್ಲಿ ಚುರುಕು ಕಂಡುಬಂದರೆ, ಮತ್ತೆ ಕೆಲವು ವಾರ್ಡ್‍ಗಳಲ್ಲಿ ಮತದಾನ ಅಷ್ಟು ಕಳೆಗಟ್ಟಲಿಲ್ಲ. ಮಧ್ಯಾಹ್ನ 1 ಗಂಟೆ ವರೆಗಿನ ಚಿತ್ರಣದಂತೆ 42296 ಪುರುಷರು, 39785 ಮಹಿಳೆಯರು ಸೇರಿ 82081 ಮತದಾರರು ಮಾತ್ರವೇ ಮತ ಚಲಾಯಿಸಿದ್ದರು.

ಚಿ.ನಾ.ಹಳ್ಳಿ ಪುರಸಭೆ:

      23 ವಾರ್ಡ್‍ಗಳಿಗೆ ಚುನಾವಣೆ ನಡೆಯಿತು. 18639 ಒಟ್ಟು ಮತದಾರರ ಪೈಕಿ ಬೆಳಗ್ಗೆ 7ರಿಂದ 11 ಗಂಟೆಯವರೆಗೆ 4890 ಮಂದಿ ಮತ ಚಲಾಯಿಸಿದ್ದರು. ಶೇ.26.24 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ 48.21 ರಷ್ಟು ಮತದಾನ ನಡೆಯಿತು.

ಮಧುಗಿರಿ ಪುರಸಭೆ:

      23 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ.19.38 ರಷ್ಟು ಮತದಾನ ನಡೆಯಿತು. ಮಧುಗಿರಿಯಲ್ಲಿ ಬೆಳಗಿನ ವೇಳೆ ಮತದಾನ ಚುರುಕು ಕಾಣಲಿಲ್ಲ. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.33.48 ರಷ್ಟು ಮತದಾನವಾಯಿತು.

ಗುಬ್ಬಿ ಪಟ್ಟಣ ಪಂಚಾಯತಿ:

      19 ವಾರ್ಡ್‍ಗಳನ್ನು ಒಳಗೊಂಡಿರುವ ಗುಬ್ಬಿ ಪಟ್ಟಣ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ.29.23 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ 49.78 ರಷ್ಟು ಮತದಾನವಾಯಿತು.

ಕೊರಟಗೆರೆ ಪಟ್ಟಣ ಪಂಚಾಯತಿ:

      15 ವಾರ್ಡ್‍ಗಳನ್ನೊಳಗೊಂಡಿರುವ ಕೊರಟಗೆರೆ ಪಟ್ಟಣ ಪಂಚಾಯತಿ ಯಲ್ಲಿ ಒಟ್ಟು 12598 ಮತದಾರರಿದ್ದಾರೆ. ಬೆಳಗ್ಗೆ 11 ಗಂಟೆಯ ವೇಳೆಗೆ 25.33 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಮತದಾನ ಚುರುಕು ಪಡೆದು ಶೇ.46.02 ರಷ್ಟು ಮತದಾನವಾಯಿತು.

      ಮಧ್ಯಾಹ್ನ 1 ಗಂಟೆಯ ಸಮಯದ ಚಿತ್ರಣದಂತೆ 5 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 317106 ಮತದಾರರಿದ್ದು, 112571 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ವೇಳೆಗೆ ಶೇ.35.50 ರಷ್ಟು ಮತದಾನವಾಗಿತ್ತು. ಚಿ.ನಾ.ಹಳ್ಳಿ ಪುರಸಭೆ ಮತ್ತು ಗುಬ್ಬಿ ಪಟ್ಟಣ ಪಂಚಾಯತಿಯಲ್ಲಿ ಈ ವೇಳಗೆ ಮತದಾನದಲ್ಲಿ ಸ್ವಲ್ಪ ಚೇತರಿಗೆ ಕಂಡುಬಂದಿದ್ದರೆ, ತುಮಕೂರು ನಗರ ಹಾಗೂ ಮಧುಗಿರಿಯಲ್ಲಿ ಮಾತ್ರ ನಿಧಾನ ಗತಿಯ ಮತದಾನವೇ ಮುಂದುವರೆದಿತ್ತು.

ಹೆಸರು

ಒಟ್ಟುಮತ

ಚಲಾವಣೆ

ಶೇಕಡ

ತುಮಕೂರು ಪಾಲಿಕೆ

   2,46,679

 

        1,46,168

59.25%

 

ಗುಬ್ಬಿ .ಪಂ

15,740

 

12,450

79.10%

ಚಿ.ನಾ.ಹಳ್ಳಿ ಪುರಸಭೆ

18,639

14,871

 

79.78%

 

ಕೊರಟಗೆರೆ .ಪಂ

12,598

 

10,256

 

81.41%

ಮಧುಗಿರಿ ಪುರಸಭೆ

235158

19058

81.04%

 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link