ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಇಷ್ಟ ಪಡುವಂತಹ ಜನಪ್ರಿಯ ಸಿಹಿ ತಿಂಡಿಯೆಂದರೆ ರಸಗುಲ್ಲಾ. ಒಮ್ಮೆ ಒಂದು ರಸಗುಲ್ಲವನ್ನು ಬಾಯಲ್ಲಿ ಇಟ್ಟುಕೊಂಡರೆ, ಬಾಯಿತುಂಬಾ ಸಿಹಿಯಾದ ರಸವು ತುಂಬಿಕೊಳ್ಳುತ್ತದೆ. ಜೊತೆಗೆ ಮತ್ತೆ ಮತ್ತೆ ತಿನ್ನಬೇಕು ಎನ್ನುವ ಬಯಕೆ ಕಾಡುತ್ತದೆ. ರಸಗುಲ್ಲಾ ಎಂಬುದು ಬೆಂಗಾಲಿಯ ಸಾಂಪ್ರದಾಯಿಕ ಸಿಹಿ ತಿಂಡಿ. ಇದನ್ನು ಭಾರತದಾದ್ಯಂತ ಬಹುತೇಕ ಮನೆಗಳಲ್ಲಿ ಹಾಗೂ ಅಂಗಡಿಗಳಲ್ಲೂ ತಯಾರಿಸುತ್ತಾರೆ. ಇದು ನೋಡಲು ಸಕ್ಕರೆ ಪಾಕದಲ್ಲಿ ಅದ್ದಿರುವ ಸ್ಪಂಜಿನ ಉಂಡೆಯಂತೆ ಕಾಣುತ್ತದೆ. ಮದೃದುವಾದ ಹಾಗೂ ತಿನ್ನಲು ಹೆಚ್ಚು ಖುಷಿಯನ್ನು ನೀಡುವ ಈ ಸಿಹಿ ತಿಂಡಿಯನ್ನು ತಯಾರಿಸುವುದು ಸುಲಭ. ಆದರೆ ಇದರ ಸ್ಥಿರತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು ತಯಾರಿಸಬೇಕಾಗುವುದು. ಇದನ್ನು ತಯಾರಿಸಲು ಸ್ವಲ್ಪ ಪರಿಣಿತಿಯ ಅಗತ್ಯವಿರುತ್ತದೆ ಎಂದು ಹೇಳಬಹುದು.
ಹಾಲು – 1 ಲೀಟರ್ ವಿನೆಗರ್ – 1/4 ಕಪ್ ನೀರು – 8 ಕಪ್ ಐಸ್ ನೀರು – 1 ಕಪ್ ಕಾರ್ನ್ ಹಿಟ್ಟು – 1/4 ಟೀ ಚಮಚ ಸಕ್ಕರೆ – 1 ಕಪ್ ರೋಸ್(ಗುಲಾಬಿ) ನೀರು – 1 ಟೀ ಚಮಚ
ಮಾಡುವ ವಿಧಾನ:
1. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ.
2. ಚೆನ್ನಾಗಿ ಕುದಿಯಲು ಬಿಡಿ.
3. ನಂತರ ಒಂದು ಟೇಬಲ್ ಚಮಚ ವಿನೆಗರ್ ಮತ್ತು ಒಂದು ಟೇಬಲ್ ಚಮಚ ನೀರನ್ನು ಸೇರಿಸಿ.
4. ಹಾಲು ಒಡೆದಂತಾಗುವವರೆಗೂ ವಿನೆಗರ್ ಮತ್ತು ನೀರನ್ನು ಸೇರಿಸುವ ವಿಧಾನವನ್ನು ಮುಂದುವರಿಸಿ.
5. ಒಮ್ಮೆ ಹಾಲು ಒಡೆದು ಮೊಸರಾದಂತೆ ಆದ ತಕ್ಷಣ ಉರಿಯನ್ನು ಆರಿಸಿ, ಐಸ್ ನೀರನ್ನು ಸೇರಿಸಿ.
6. ನಂತರ ಪುನಃ 1,1/2 ಕಪ್ ನೀರನ್ನು ಸೇರಿಸಿ ಅವು ಒಂದೆಡೆ ನಿಲ್ಲುವಂತೆ ಮಾಡಿ.
7. ನೀರನ್ನು ಬೇರ್ಪಡಿಸಿ ಹಾಗೂ ಸಂಪೂರ್ಣವಾಗಿ ನೀರು ಹೋಗಲು ಅರ್ಧ ಗಂಟೆಗಳ ಕಾಲ ಬಿಡಿ.
8. ಸಂಪೂರ್ಣವಾಗಿ ನೀರಿನಿಂದ ಬೇರ್ಪಟ್ಟ ಹೂರಣವನ್ನು ಮಿಕ್ಸರ್ ಪಾತ್ರೆಗೆ ಹಾಕಿ
. 9. ಕಾನ್ ಹಿಟ್ಟನ್ನು ಸೇರಿಸಿ ಕಾಳು ಕಾಳಾಗುವಂತೆ ರುಬ್ಬಿಕೊಳ್ಳಿ.
10. ಇದನ್ನು ಒಂದು ಪ್ಲೇಟಿಗೆ ವರ್ಗಾಯಿಸಿ.
11. ಗಂಟುಗಳಿಲ್ಲದಂತೆ ಕೈಗಳಲ್ಲಿ ಚೆನ್ನಾಗಿ ನಾದಿ.
12. ಇದೊಂದು ಮೃದುವಾದ ಮಿಶ್ರಣವಾಗುವಂತೆ ನಾದಿಕೊಳ್ಳಬೇಕು.
13. ಒಂದೇ ಪ್ರಮಾಣದಲ್ಲಿ ಮಿಶ್ರಣವನ್ನು ತೆಗೆದುಕೊಳ್ಳಿ.
14. ಅವುಗಳನ್ನು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ.
15. ಒಂದು ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ ಬಿಸಿ ಮಾಡಿ.
16. ತಕ್ಷಣವೇ 6 ಕಪ್ ನೀರನ್ನು ಸೇರಿಸಿ.
17. ಸಕ್ಕರೆ ಕರಗಲು ಮುಚ್ಚಳವನ್ನು ಮುಚ್ಚಿ, ದೊಡ್ಡ ಉರಿಯಲ್ಲಿ ಇಡಿ.
18. ಕುದಿಯಲು ಆರಂಭಿಸಿದ ಸಕ್ಕರೆ ಪಾಕಕ್ಕೆ ಮಿಶ್ರಣದ ಉಂಡೆಯನ್ನು ಸೇರಿಸಿ.
19. ಪುನಃ ಮುಚ್ಚಳವನ್ನು ಮುಚ್ಚಿ 10-15 ನಿಮಿಷಗಳ ಕಾಲ ಕುದಿಯಲು ಬಿಡಿ.
20. ಮುಚ್ಚಳವನ್ನು ತೆಗೆದು, ಉರಿಯನ್ನು ಆರಿಸಿ.
21. ಗುಲಾಬಿ/ರೋಸ್ ವಾಟರ್‍ಅನ್ನು ಸೇರಿಸಿ ಮುಚ್ಚಳವನ್ನು ಮುಚ್ಚಿ, ಆರಲು ಬಿಡಿ.
22. ಫ್ರಿಜ್‍ನಲ್ಲಿ 3-4 ಗಂಟೆಗಳ ಕಾಲ ಇಟ್ಟು ತಣ್ಣಗಾಗಿಸಿ ನಂತರ ಸವಿಯಲು ನೀಡಿ.
ಸೂಚನೆಗಳು:
1. ನಿಂಬೆ ರಸ, ಮೊಸರು ಅಥವಾ ಸಿಟ್ರಿಕ್ ಆಸಿಟ್ ಸ್ಫಟಿಕದೊಂದಿಗೆ ಹಾಲನ್ನು ಒಡೆಯುವಂತೆ ಮಾಡಬಹುದು. ಹಾಲು ಒಡೆದ ತಕ್ಷಣ ಉರಿಯನ್ನು ಆರಿಸಬೇಕು.
2. ರಸಗುಲ್ಲಾದ ಉಂಡೆ ಮಾಡುವಾಗ ಯಾವುದೇ ಬಿರುಕುಗಳಿಲ್ಲದಂತೆ ನೋಡಿಕೊಳ್ಳಬೇಕು. ಅವು ಒಡೆಯುವ ಸಾಧ್ಯತೆ ಇರುತ್ತದೆ.
3. ಅಗಲವಾದ ಹಾಗೂ ದೊಡ್ಡ ಪಾತ್ರೆಯಲ್ಲಿ ಸಕ್ಕರೆ ಪಾಕವನ್ನು ಮಾಡಿಕೊಳ್ಳಿ. ಅದರಲ್ಲಿ ರಸಗುಲ್ಲಾ ಉಂಡೆಯನ್ನು ಹಾಕಿ ಬೇಯಿಸಲು ಸುಲಭವಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ