ಚಿತ್ರದುರ್ಗ:
ಗಣೇಶ ಹಬ್ಬದ ಪ್ರಯುಕ್ತ ನಗರದ ವಿವಿಧ ಬಡಾವಣೆಗಳಲ್ಲಿ ವಿಘ್ನಗಳ ನಿವಾರಕ ವಿನಾಯಕನನ್ನು ವಿವಿಧ ಭಂಗಿಯಲ್ಲಿ ಪ್ರತಿಷ್ಟಾಪಿಸಲಾಗಿದೆ.
ಇಡೀ ರಾಜ್ಯದ ಗಮನ ಸೆಳೆಯುತ್ತಿರುವ ಹಿಂದೂ ಮಹಾಗಣಪತಿಯ ಪೆಂಡಾಲ್‍ನತ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ. ಸ್ಟೇಡಿಯಂ ರಸ್ತೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗುರುವಾರ ಬೆಳಿಗ್ಗೆಯಿಂದ ಸಂಜೆಯ ವರೆಗೂ ನಗರ ಮತ್ತು ಇತರೆ ಕಡೆಯಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಹಿಂದೂ ಮಹಾಗಣಪತಿ ಯುವಕರನ್ನು ಹೆಚ್ಚು ಆಕರ್ಷಿಸುತ್ತಿದೆ.
ವಿವಿಧಡೆ ಪ್ರತಿಷ್ಠಾಪನೆಮೋದಕಪ್ರಿಯ, ವಿಘ್ನಗಳ ನಿವಾರಕ, ಏಕದಂತ, ಕರಿಮುಖ ಗಣಪ, ಮೂಷಿಕವಾಹನ, ವಕ್ರತುಂಡ ಹೀಗೆ ಬಗೆ ಬಗೆಯ ಹೆಸರುಗಳಿಂದ ಪೂಜಿಸುವ ವಿನಾಯಕನಿಗೆ ಕಡುಬು, ಉಂಡೆ, ನಾನಾ ರೀತಿಯ ಹಣ್ಣು ಹಂಪಲು, ಗುಗ್ಗರಿ, ಹೀಗೆ ತರಹೆವಾರಿ ತಿಂಡಿ ತಿನಿಸುಗಳನ್ನಿಟ್ಟು ಸಕಾಲಕ್ಕೆ ಮಳೆ ಬೆಳೆ ಕರುಣಿಸಿ ಸಕಲ ಜೀವರಾಶಿಗಳನ್ನು ಸಲಹುವಂತೆ ಪ್ರಾರ್ಥಿಸಲಾಗುತ್ತಿದೆ. ಸಂಜೆಯ ನಂತರ ಅಲ್ಲಲ್ಲಿ ರಸಮಂಜರಿಗಳ ಮೂಲಕ ಚೌತಿ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತಿದೆ.
ಜೋಗಿಮಟ್ಟಿ ರಸ್ತೆಯಲ್ಲಿ ವಿಷ್ಣು ಅಂಡ್ ನ್ಯೂಸ್ಟಾರ್ ಬಾಯ್ಸ್‍ನವರು ಸಿಂಹದ ಮೇಲೆ ಗಣೇಶನನ್ನು ಪ್ರತಿಷ್ಟಾಪಿಸಿ ಶ್ರದ್ದಾ ಭಕ್ತಿಯಿಂದ ಪೂಜೆ ನೆರವೇರಿಸುತ್ತಿದ್ದಾರೆ,ಫ್ರೆಂಡ್ಸ್ ಗಣಪತಿ ಯುಕವರ ಬಳಗದವರು ಲಿಂಗದ ಮೇಲೆ ಪ್ರತಿಷ್ಟಾಪಿಸಲಾಗಿರುವ ಗಣೇಶ ಅತ್ಯಂತ ಆಕರ್ಷಣೀಯವಾಗಿದ್ದು, ಸುತ್ತಮುತ್ತಲಿನ ನೂರಾರು ಭಕ್ತರು ಧಾವಿಸಿ ದರ್ಶನ ಪಡೆಯುತ್ತಿದ್ದಾರೆ.
ಹೊಳಲ್ಕೆರೆ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಫ್ರೆಂಡ್ಸ್ ಯುವಕರ ಸಂಘದವರು ಮೀನಿನ ಮೇಲೆ ಗಣೇಶನನ್ನು ಪ್ರತಿಷ್ಟಾಪಿಸಿದ್ದಾರೆ.
ಜೆಸಿಆರ್.ಬಡಾವಣೆಯಲ್ಲಿ ಜೆಸಿಆರ್.ಬಾಯ್ಸ್‍ನವರು ನವಿಲಿನ ಮೇಲೆ ವಿನಾಯಕನನ್ನು ಪ್ರತಿಷ್ಟಾಪಿಸಿರುವುದು ಕೂಡ ನೋಡುಗರ ಕುತೂಹಲ ಕೆರಳಿಸುವಂತಿದೆ.
ಗೋಪಾಲಪುರ ರಸ್ತೆಯಲ್ಲಿ ಸ್ಪೂರ್ತಿ ಗೆಳೆಯರ ಬಳಗದವರು ಪ್ರತಿಷ್ಟಾಪಿಸಿರುವ ಗಣೇಶ ಎಡಗೈಯಲ್ಲಿ ಚಿಕ್ಕ ತ್ರಿಶೂಲವನ್ನು ಹಿಡಿದಿದೆ.
ಕೆಳಗೋಟೆಯಲ್ಲಿ ಆರ್.ಜಿ.ವೈ.ವಿಷ್ಣು ಬಾಯ್ಸ್ ತಂಡದವರು ಮಲಗಿರುವ ಆಂಜನೇಯನ ಮೇಲೆ ಕುಳಿತಿರುವ ಗಣೇಶನನ್ನು ಪ್ರತಿಷ್ಟಾಪಿಸಿರುವುದಂತು ಮನಮೋಹಕವಾಗಿದೆ. ಶ್ರೀರಾಮ ಭಕ್ತ ಆಂಜನೇಯನ ಮೇಲೆ ಕುಳಿತಿರುವ ಗಣಪ ಸಿಂಹಕ್ಕೆ ಬಾಣ ಬಿಡುತ್ತಿರುವುದನ್ನು ನೋಡಿದರೆ ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸುವಂತಿದೆ. ಒಟ್ಟಾರೆ ನಗರದ ನಾಲ್ಕು ದಿಕ್ಕುಗಳಲ್ಲಿ ಎತ್ತ ಸಾಗಿದರೂ ಗಣೇಶಮೂರ್ತಿಗಳ ಪ್ರತಿಷ್ಟಾಪನೆಯೆ ಕಣ್ಣಿಗೆ ರಾಚುತ್ತದೆ. ಕೆಲವೆಡೆ ಡೆಕ್‍ಹಾಕಿಕೊಂಡು ಯುವಕರು ಕುಣಿದು ಕುಪ್ಪಳಿಸುತ್ತಿದ್ದರೆ ಇನ್ನು ಕೆಲವು ಸ್ಥಳಗಳಲ್ಲಿ ಶ್ರದ್ದಾಭಕ್ತಿಯಿಂದ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಕೆಲವು ಕಡೆ ಗಣೇಶನನ್ನು ಪ್ರತಿಷ್ಟಾಪಿಸಿರುವ ಜಾಗದ ಸುತ್ತಮುತ್ತ ಕೇಸರಿಮಯವಾಗಿರುವುದನ್ನು ನೋಡಿದರೆ ದೇಶಭಕ್ತಿಯನ್ನು ಸಾರುವಂತಿದೆ. ಅಲ್ಲಲ್ಲಿ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗಿಸಲಾಗುತ್ತಿದೆ. ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ.