ನಾಮಪತ್ರ ಸಲ್ಲಿಕೆಗೆ ಇಂದು ಕಡೇಯ ದಿನ : ಪಕ್ಷದ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಎಲ್ಲಾ ಪಕ್ಷಗಳ ಮುಖಂಡರ ಮೀನಾವೇಷ : ಎಲ್ಲಾ ಪಕ್ಷಗಳಿಗೂ ಬಂಡಾಯದ ಬಿಸಿ

 ಚಳ್ಳಕೆರೆ:

      ನಗರಸಭೆಯ ಚುನಾವಣೆ ನಿಧಾನಗತಿಯಲ್ಲಿ ಕಾವೇರುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಕೇವಲ ಒಂದೇ ಒಂದು ದಿನ ಬಾಕಿ ಇದ್ದರೂ ಸಹ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಇನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ. ಹಲವಾರು ಅಭ್ಯರ್ಥಿಗಳು ಸ್ಪರ್ಧೆ ಬಯಸಿ ಪಕ್ಷಕ್ಕೆ ಅರ್ಜಿಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಅಭ್ಯರ್ಥಿಗಳಿಗೂ ಸಹ ಭರವಸೆ ನೀಡಿಲ್ಲ. ಹೀಗಾಗಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳಲ್ಲೂ ಒಂದು ರೀತಿಯ ಆತಂಕ ಮನೆ ಮಾಡಿದೆ.

      ಗುರುವಾರ ನಗರದ 31 ವಾರ್ಡ್‍ಗಳ ವ್ಯಾಪ್ತಿಯಲ್ಲಿ ಒಟ್ಟು 9 ಜನ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯಿಂದ 2, ಜೆಡಿಎಸ್‍ನಿಂದ 1 ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ 6 ಜನ ಒಟ್ಟು 9 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕೆಲವು ಅಭ್ಯರ್ಥಿಗಳು ಯಾವುದೇ ಪಕ್ಷದಿಂದ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

      ನಗರದ 3ನೇ ವಾರ್ಡ್‍ನ ಅನುಸೂಚಿತ ಪಂಗಡದ ಮೀಸಲಾತಿ ಇದ್ದು, ಪಕ್ಷೇತರ ಅಭ್ಯರ್ಥಿಯಾಗಿ ಆರ್.ರುದ್ರಾನಾಯಕ ಮತ್ತು ಎಂ.ಸುಧಾಕರ ನಾಮಪತ್ರ ಸಲ್ಲಿಸಿದ್ಧಾರೆ. ವಾರ್ಡ್ ನಂ. 9 ರಲ್ಲಿ ಸಾಮಾನ್ಯ ಸ್ಥಾನಕ್ಕೆ ಮೀಸಲಿಟ್ಟಿದ್ದು, ಬಿಜೆಪಿ ವತಿಯಿಂದ ಹನುಮಂತರಾಯ ನಾಮಪತ್ರ ಸಲ್ಲಿಸಿದ್ಧಾರೆ. ನಗರದ 17ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಜೆ.ಅನಿತಾಲಕ್ಷ್ಮಿ ನಾಮಪತ್ರ ಸಲ್ಲಿಸಿದ್ಧಾರೆ. ನಗರ 19ನೇ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಿದ್ದು, ಬಿಜೆಪಿಯಿಂದ ಓ.ಲಕ್ಷ್ಮಣ ನಾಮಪತ್ರ ಸಲ್ಲಿಸಿದ್ಧಾರೆ. ನಗರದ 21ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸಹಜಾಬಿ ನಾಮಪತ್ರ ಸಲ್ಲಿಸಿದ್ದಾರೆ.

      ನಗರದ 22ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ತಿಪ್ಪಮ್ಮ ನಾಮಪತ್ರ ಸಲ್ಲಿಸಿದ್ದಾರೆ. ನಗರದ 29ನೇ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಟಿ.ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ನಗರದ 31 ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸಣ್ಣಬೋರಮ್ಮ ನಾಮಪತ್ರ ಸಲ್ಲಿಸಿರುತ್ತಾರೆ.

      ಇಲ್ಲಿನ ತಾಲ್ಲೂಕು ಪಂಚಾಯಿತಿಯ ಕಚೇರಿ ಆವರಣದ ಒಳಭಾಗದಲ್ಲಿ ನಾಲ್ಕು ಚುನಾವಣಾಧಿಕಾರಿ ಕಚೇರಿ ತೆರೆದು ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಪ್ರವೇಶ ದ್ವಾರದಲ್ಲಿ ಬಿಗಿಯಾದ ಪೊಲೀಸ್ ಕಾವಲು ಇದ್ದು, ಕೇವಲ ನಾಮಪತ್ರ ಸಲ್ಲಿಸುವ ಅಭ್ಯರ್ಥಿ ಮತ್ತು ಸೂಚಕರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಗುರುವಾರವೂ ಸಹ ಹೆಚ್ಚಿನ ಸಂಖ್ಯೆಯ ಜನರು ನಾಮಪತ್ರ ಸಲ್ಲಿಸಲು ಅರ್ಜಿ ನಮೂನೆಗಳನ್ನು ಪಡೆದುಕೊಂಡಿದ್ಧಾರೆ. ನಾಮಪತ್ರಸಲ್ಲಿಕೆಗೆ ಶುಕ್ರವಾರ ಕಡೆಯ ದಿನವಾಗಿದ್ದು, ಬಹುತೇಕ ಎಲ್ಲಾ ವಾರ್ಡ್‍ಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಾಗುವ ಸಂಭವಿದೆ.

      ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಆಗಸ್ಟ್ 10 ರಿಂದಲೇ ಆರಂಭವಾಗಿದ್ದರೂ ಆಗಸ್ಟ್ 12 ಮತ್ತು 15 ಎರಡೂ ದಿನಗಳ ಕಾಲ ರಜೆ ಇದ್ದರೂ ಸಹ ನಾಮಪತ್ರ ಸಲ್ಲಿಕೆ ಮಂದಗತಿಯಲ್ಲಿ ಸಾಗಿದೆ. ವಿಶೇಷವೆಂದರೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಹೆಚ್ಚಿನ ಉಮೇದೂವಾರರು ಕಂಡು ಬಂದಿದ್ದು, ಪಕ್ಷ ಇದುವರೆಗೂ ಬಿ ಫಾರಂ ನೀಡದ ಕಾರಣ ಅಭ್ಯರ್ಥಿಗಳು ಬಿ ಫಾರಂಗಾಗಿ ಕಾತುರದಿಂದ ಕಾಯುತ್ತಿದ್ಧಾರೆ. ಎಲ್ಲಾ ರಾಜಕೀಯ ಪಕ್ಷಗಳು ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಆಗಸ್ಟ್ 17ರ ಶುಕ್ರವಾರ ಬೆಳಗ್ಗೆ ಬಿಡುಗಡೆಗೊಳಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

      ಕಳೆದ ಬಾರಿಯ ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳಿಸಲು ಸಾಧ್ಯವಾಗಿರಲಿಲ್ಲ. ಕಾರಣ ಆಗಿನ್ನೂ ಕ್ಷೇತ್ರದ ಶಾಸಕರಾಗಿ ಟಿ.ರಘುಮೂರ್ತಿ ಅಗಷ್ಟೇ ಆಯ್ಕೆಯಾಗಿದ್ದರು. ಆದರೆ, ಈಗ 5 ವರ್ಷಗಳ ಸೇವೆ ನಂತರ ರಘುಮೂರ್ತಿ ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದು, ಟಿಕೆಟ್ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಇವರ ನಿರ್ಧಾರದ ಮೇಲೆ ಅವಲಂಬಿತರಾಗಿದ್ಧಾರೆ. ಈಗಾಗಲೇ ಟಿಕೆಟ್ ವಂಚಿತ ಕೆಲವು ಅಭ್ಯರ್ಥಿಗಳು ಬಂಡಾಯ ಹೇಳುವ ಸ್ವಷ್ಟ ಸೂಚನೆಯನ್ನು ನೀಡಿದ್ಧಾರೆ. ಪಕ್ಷದಿಂದ ಪಕ್ಷಕ್ಕೆ ಪಕ್ಷಾಂತರ ವಾಗುವ ನಿರೀಕ್ಷೆಯೂ ಹೆಚ್ಚಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link