ಹರಿಹರ:
ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ರಾಷ್ಟ್ರ ನಾಯಕರೂ ಹಾಗೂ ಪ್ರಾತಃ ಸ್ಮರಣೀಯರೂ ಆದ ಬಾಬು ಜಗಜೀವನರಾಮ್‍ರಿಗೆ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಅವಮಾನಿಸಿದೆ ಎಂದು ದಸಂಸ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆರೋಪಿಸಿದ್ದಾರೆ.
ತಾಲೂಕು ಆಡಳಿತದಿಂದ ಜಯಂತಿಗಳಿಗೆ ಪೂರ್ವಭಾವಿಯಾಗಿ ಸಂಘ, ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಕಾರ್ಯಕ್ರಮದ ರೂಪುರೇಶೆಗಳನ್ನು ನಿರ್ಧರಿಸಲಾಗುತ್ತಿತ್ತು. ಆದರೆ ಈ ಬಾರಿ ಅಂತಹ ಪೂರ್ವಭಾವಿ ಸಭೆಯನ್ನು ನಡೆಸಿಲ್ಲ.
ಏ.5ರಂದು ನಡೆಸಬೇಕಿದ್ದ ಬಾಬು ಜಗಜೀವನರಾಮ್ ಜಯಂತಿ ತಾಲೂಕು ಆಡಳಿತದಿಂದ ಹಾಗೂ ಸರಕಾರಿ ಕಚೇರಿಗಳಲ್ಲಿ ಆಚರಿಸಲಾಯಿತೋ ಇಲ್ಲವೂ ತಿಳಿದಿಲ್ಲ. ಮುಂದೆ ಏ.14 ರಂದು ಆಚರಿಸಬೇಕಾದ ಡಾ.ಅಂಬೇಡ್ಕರ್‍ರವರ ಜಯಂತಿಗೂ ಇದೆ ಗತಿಯಾಗುವ ಸಾಧ್ಯತೆ ಇದೆ.
ಚುನಾವಣೆಯ ನೀತಿ ಸಂಹಿತೆ ರಾಷ್ಟ್ರನಾಯಕರ ಜಯಂತಿ ಮಾಡಬೇಡಿ, ಆಚರಿಸಬೇಡಿ ಎಂದು ಹೇಳಿಲ್ಲ. ಆದರೆ ಅಂತಹ ಆಚರಣೆಗಳಿಗೆ ಚುನಾವಣೆಗಳಿದ್ದಾಗ ಜನಪ್ರತಿನಿಧಿಗಳು, ರಾಜಕಾರಣಿಗಳನ್ನು ಕರೆಯದಿದ್ದರೆ ಸಾಕು. ಇದನ್ನು ಹೊರತುಪಡಿಸಿ ಜಯಂತಿ ಆಚರಣೆಗೆ ಯಾವ ನೀತಿ ಸಂಹಿತೆಯೂ ಅಡ್ಡಿ ಬಾರದು.
ಚುನಾವಣೆಯ ಹಾಗೂ ನೀತಿ ಸಂಹಿತೆಯ ನೆಪವೊಡ್ಡಿ ಈ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದ ಬಾಬು ಜಗಜೀವನ ರಾಮ್, ಶ್ರೇಷ್ಠ ಸಂವಿಧಾನ ನೀಡಿದ ಡಾ.ಅಂಬೇಡ್ಕರ್‍ರವರಿಗೆ ಅವಮಾನ ಮಾಡಿದ್ದು ಇದನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ.
ಈ ಕುರಿತು ಚುನಾವಣಾ ಆಯೋಗದವರು ಹಾಗೂ ಜಿಲ್ಲಾಡಳಿತ ಸೂಕ್ತ ಪರಿಶೀಲನೆ ನಡೆಸಿ ಏ.14ರ ಡಾ.ಅಂಬೇಡ್ಕರ್ ಜಯಂತಿಯನ್ನಾದರು ಅರ್ಥವತ್ತಾಗಿ ನಡೆಸಲು ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.