ಚಳ್ಳಕೆರೆ
ನಮ್ಮ ಜೀವವನ್ನು ಉಳಿಸಿಕೊಳ್ಳಲು ನಮಗೆ ಪ್ರತಿನಿತ್ಯ ದೈವದತ್ತವಾದ ಕೊಡುಗೆಗಳಾದ ನೀರು, ಗಾಳಿ ಹಾಗೂ ಬೆಳಕನ್ನು ನಾವು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಂಡಲ್ಲಿ ಮಾತ್ರ ನಾವು ಬದುಕಲು ಆರ್ಹರಾಗುತ್ತೇವೆ. ನೈಸರ್ಗಿಕವಾಗಿ ದೊರೆತ ಯಾವುದೇ ವಸ್ತುಗಳನ್ನು ದುರಪಯೋಗ ಪಡಿಸಿಕೊಂಡಲ್ಲಿ ಮುಂದಿನ ಪೀಳಿಗೆ ಹೆಚ್ಚು ತೊಂದರೆ ಅನುಭವಿಸುತ್ತದೆ. ಅದ್ದರಿಂದ ನಮಗೆ ನಿತ್ಯವೂ ಬೇಕಾದ ನೀರಿನ ಮಿತ ಬಳಕೆಗಾಗಿ ಎಲ್ಲರೂ ಜಾಗೃತೆ ವಹಿಸಬೇಕೆಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.
ಅವರು, ಮಂಗಳವಾರ ಇಲ್ಲಿನ ನಗರಸಭಾ ಕಾರ್ಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಮತ್ತು ನಗರಸಭೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ನಮಗೆಲ್ಲರಿಗೂ ತಿಳಿದಂತೆ ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದಾಗಿ ನಮ್ಮಲ್ಲಿನ ಜೀವ ಜಲ ಬತ್ತಿಹೋಗಿದ್ದು, ಕುಡಿಯುವ ನೀರು ಸಹ ಸಿಗದಂತಹ ಸಂದಿಗ್ದ ಸ್ಥಿತಿಯಲ್ಲಿದ್ದೇವೆ.
ಉತ್ತಮ ಮಳೆಯಾದಲ್ಲಿ ಮಾತ್ರ ನಾವು ನೀರು ಕಾಣಲು ಸಾಧ್ಯ. ಮಳೆಯಾಗಬೇಕಾದಲ್ಲಿ ಮರಗಿಡಗಳನ್ನು ಬೆಳೆಸಬೇಕಿದೆ. ಮರಗಿಡಗಳು ಬೆಳೆದರೆ ನಮ್ಮ ಉಸಿರಾಟಕ್ಕೆ ಅವಶ್ಯವಿರುವ ಆಮ್ಲಜನಕ ದೊರೆಯುತ್ತದೆ. ಹಾಗಾಗಿ ದೇವರ ಕೊಡುಗೆಗಳಾದ ನೀರು ಮತ್ತು ಗಾಳಿ ನಮ್ಮೆಲ್ಲರ ಜೀವನಕ್ಕೆ ಅತಿಮುಖ್ಯವಾಗಿದ್ದು, ನೀರಿನ ಬಳಕೆಯ ಬಗ್ಗೆ ಎಲ್ಲರೂ ಜಾಗೃತೆ ವಹಿಸುವಂತೆ ಮನವಿ ಮಾಡಿದರು.
ಪ್ರಧಾನ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ನಮ್ಮಪೂರ್ವಿಕರು ಉತ್ತಮ ಜಲ ದೊರೆಯುವ ಬಾವಿ ಕೆರೆಗಳನ್ನು ನಿರ್ಮಿಸುವುದರಲ್ಲಿ ಮುಂದಾಗಿದ್ದರು. ಅವರ ಮುಂದಾಲೋಚನೆ ಫಲವಾಗಿ ನಾವು ಇಂದೂ ಸಹ ಕುಡಿಯುವ ನೀರನ್ನು ಪಡೆಯುತ್ತಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ನೀರಿನ ಪ್ರಮಾಣ ಇಳಿಕೆಯಾಗಿದ್ದು, ನೀರಿನ ಬೇಡಿಕೆ ಹೆಚ್ಚುತ್ತಾಗುತ್ತಿದೆ. ನಮಗೆ ಲಭ್ಯವಿರುವ ನೀರನ್ನು ಸಮಾನವಾಗಿ ಉಪಯೋಗಿಸುವ ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕಿದೆ. ಯಾವುದೇ ಹಂತದಲ್ಲೂ ಕುಡಿಯುವ ನೀರಿನ ದುರ್ಬಳಕೆ ಮಾಡುವುದನ್ನು ನಾವು ಖಡಾಕಂಡಿತವಾಗಿ ತಡೆಯಬೇಕೆಂದರು.
ಅಪರ ಸಿವಿಲ್ ನ್ಯಾಯಾಧೀಶ ಮನು ಪಾಟೀಲ್ ಮಾತನಾಡಿ, ಸರ್ಕಾರ ಮಳೆ ಬೀಳದ ಪ್ರದೇಶಗಳಲ್ಲಿ ಮೊಡ ಬಿತ್ತನೆ ಮಾಡುವ ಮೂಲಕ ಆ ಪ್ರದೇಶಗಳ ನೀರಿನ ಸಮಸ್ಯೆಗೆ ಪರಿಹಾರವನ್ನು ನೀಡುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮೊಡಬಿತ್ತನೆಯೂ ಸೇರಿದಂತೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಹೆಚ್ಚು ಪ್ರಯತ್ನಗಳು ಆಗುತ್ತಿಲ್ಲ.
ಕುಡಿಯುವ ನೀರು ನಮಗೆ ಅಮೃತ ಸಮಾನವಾಗಿದ್ದು, ನೀರಿನ ಬಳಕೆಯಲ್ಲಿ ಸರ್ವರೂ ಜಾಗೃತರಾಗಬೇಕಿದೆ. ಪ್ರಸ್ತುತ ನಮಗೆ ಲಭ್ಯವಿರುವ ನೀರನ್ನು ದುರ್ಬಳಕೆ ಮಾಡದಂತೆ ಉಪಯೋಗಿಸಬೇಕು.
ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ಚಳ್ಳಕೆರೆ ನಗರದಲ್ಲಿ ಮಾತ್ರ ನಗರಸಭೆ ಆಡಳಿತ ವಾರಕ್ಕೆ ಎರಡ್ಮೂರು ಬಾರಿಯಾದರೂ ಉತ್ತಮ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುತ್ತಿದೆ. ಬೇರೆ ಪ್ರದೇಶಗಳಂತೆ ಇಲ್ಲಿ ಕುಡಿಯುವ ನೀರಿಹ ಹಾಹಾಕಾರವಿಲ್ಲ. ಸರ್ಕಾರ ರೈತರ ಹಿತದೃಷ್ಠಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಮೊಡಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕೆಂದು ಅಭಿಪ್ರಾಯಪಟ್ಟರು. ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ.ಬೋರಯ್ಯ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ನಗರದ ಪ್ರದೇಶದಲ್ಲಿ ಕುಡಿಯುವ ನೀರಿನ ಬಳಕೆಯ ಬಗ್ಗೆ ಹಲವಾರು ಪ್ರಾಯೋಜಿಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರನ್ನು ಜಾಗೃತಗೊಳಿಸಲಾಗಿದೆ. ನಗರದ ಬಹುತೇಕ ಎಲ್ಲಾ ವಾರ್ಡ್‍ಗಳಲ್ಲೂ ವಾರಕ್ಕೆ ಎರಡು ಬಾರಿಯಾದರೂ ನೀರು ಸಿಗುವಂತೆ ಮಾಡುವಲ್ಲಿ ನಗರಸಭೆ ಆಡಳಿತ ಯಶಸ್ಸಿಯಾಗಿದೆ. ಕುಡಿಯುವ ನೀರು ಸದ್ಬಳಕೆ ಉತ್ತಮವಾಗಿರಬೇಕಿದೆ. ಯಾವುದೇ ಕಾರಣಕ್ಕೂ ಪೋಲಾದಲ್ಲಿ ಅಂತಹವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಂದಾಯಾಧಿಕಾರಿ ವಿ.ಈರಮ್ಮ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್, ಶ್ಯಾಮಲ, ನಗರಸಭಾ ಸಿಬ್ಬಂದಿ ಪಿ.ಪಾಲಯ್ಯ, ಮಂಜುನಾಥ, ತಿಪ್ಫೇಸ್ವಾಮಿ, ವಿಶ್ವನಾಥ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು ಸ್ವಾಗತಿಸಿದರು, ಸಮನ್ವಯಾಧಿಕಾರಿ ಪಿ.ಪಾಲಯ್ಯ ಕಾರ್ಯಕ್ರಮ ನಿರೂಪಿಸಿದರು.