ನೀರಿನ ಪೂರೈಕೆ : ತುರ್ತಾಗಿ ನಿರ್ವಹಿಸಲು ಅನುದಾನ ಬಿಡುಗಡೆ : ಪ್ರಿಯಾಂಕ್‌ ಖರ್ಗೆ

ಕಲಬುರಗಿ:

       ಜಿಲ್ಲೆಯ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಆಗಿರುವ ಸಮಸ್ಯೆ ಸರಿಪಡಿಸಲು 1 ಕೋಟಿ ರೂ.ಅನುದಾನವನ್ನು ತುರ್ತು ನಿರ್ವಹಣೆಗಾಗಿ ಮಂಜೂರು ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಶುಕ್ರವಾರ ಹೇಳಿದರು. 

       ಜಿಲ್ಲೆಯ ಯಡ್ರಾಮಿ ಹಾಗೂ ಜೇವರ್ಗಿ ತಾಲ್ಲೂಕುಗಳ ತಲಾ ಒಂದೊಂದು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂಬರುವ ವಾರಗಳಲ್ಲಿ ಕಡಿಮೆ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಮೌಲ್ಯಮಾಪನ ಮಾಡಲಾಗಿದ್ದು, ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಪ್ರಸ್ತುತ 130 ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂ 260 ಲಕ್ಷಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

       ಚರಂಡಿ ನೀರು ಅಥವಾ ಮಳೆನೀರು ಸೇರುವುದರಿಂದ ಕಲಬುರಗಿ ಜಿಲ್ಲೆಯಲ್ಲಿ 1828 ಕೊಳವೆಬಾವಿಗಳು ಹಾಗೂ ಕೈಪಂಪುಗಳು ಮಾಲಿನ್ಯಕ್ಕೆ ಗುರಿಯಾಗಿವೆ. ಇಂತಹ ಕೊಳವೆ ಬಾವಿಗಳನ್ನು ಮಾಲಿನ್ಯದಿಂದ ರಕ್ಷಿಸುವ ಸಲುವಾಗಿ ಕೊಳವೆಬಾವಿ ಸುತ್ತಲೂ ರಕ್ಷಣಾತ್ಮಕ ಕಾಂಕ್ರೀಟ್ ರಿಂಗ್ ಅಳವಡಿಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ 135.20 ಲಕ್ಷ ರೂ. ವೆಚ್ಚವಾಗಲಿದೆ.

 

      ಜಿಲ್ಲೆಯಲ್ಲಿ 200 ಶುದ್ಧ ನೀರಿನ ಘಟಕಗಳು ದುರಸ್ತಿಗೆ ಒಳಗಾಗಿದ್ದು, ಇವುಗಳನ್ನು ಸರಿಪಡಿಸಿ ನೀರು ಸರಬರಾಜು ಮಾಡಲು ಕಾರ್ಯಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಕೊಳವೆಬಾವಿ ಹಾಗೂ ತೆರೆದ ಬಾವಿಗಳಲ್ಲಿ ಅಂತರ್ಜಲ ಕಲುಷಿತಗೊಳ್ಳದಂತೆ ಸ್ವಚ್ಛತಾ ಅಭಿಯಾನ ಕೈಗೊಂಡು ಸುತ್ತಮುತ್ತಲ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆ.

     ಜಿಇ/ಕಾಲರಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದಿನ ಐದು ವರ್ಷಗಳ ಕಣ್ಗಾವಲು ಮಾಹಿತಿಯನ್ನು ಆಧರಿಸಿ 49 ಗ್ರಾಮಗಳನ್ನು ಗುರುತಿಸಿಲಾಗಿದೆ. ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ರೀತಿಯ ಮಾಲಿನ್ಯವನ್ನು ತಪ್ಪಿಸಲು ನೀರಿನ ಪರೀಕ್ಷೆ, ಸಂಭವನೀಯ ಜಿಇ ಪ್ರಕರಣಗಳನ್ನು ಗುರುತಿಸಲು ಆಶಾ ಕಾರ್ಯಕರ್ತರ ಮೂಲಕ ಸಮೀಕ್ಷೆ, ನೀರಿನ ಜಾಲದ ವಿವರವಾದ ಲೆಕ್ಕಪರಿಶೋಧನೆಗಾಗಿ ಅಭಿಯಾನವನ್ನು ತೀವ್ರಗೊಳಿಸಿದ್ದೇವೆ. ಗ್ರಾಮಪಂಚಾಯತಿಗಳು ಮಾರ್ಗಸೂಚಿಯನ್ವಯ ನೀರಿನ ಕ್ಲೋರಿನೇಷನ್ ಮಾಡುತ್ತಿದ್ದಾರೆ, ಹಾಗೂ ಸಿಬ್ಬಂದಿಗೆ ಇತ್ತೀಚೆಗೆ ತರಬೇತಿ ನೀಡಲಾಗಿದೆ.

     ನೀರು ಸರಬರಾಜು ಹಾಗೂ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೂರು ಪರಿಹಾರ ಕೋಶವನ್ನು ಸ್ಥಾಪಿಸಲಾಗಿದೆ ಎಂದೂ ಸಚಿವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap