ನೀರು ಬಿಡದೆ ಇದ್ದರೆ ಮತದಾನ ಬಹಿಷ್ಕಾರ..!!!

ಚಿಕ್ಕನಾಯಕನಹಳ್ಳಿ

      ತಾಲ್ಲೂಕಿನ ತಿಮ್ಮನಹಳ್ಳಿ, ರಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ನೀರು ಹರಿಸದಿದ್ದರೆ ಈ ಭಾಗದ ಮತದಾರರು ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

       ಗುರುವಾರ ತಾಲ್ಲೂಕಿನ ತಿಮ್ಮನಹಳ್ಳಿಯಲ್ಲಿ ಆಂಜನೇಯ ದೇವಾಲಯದ ಬಳಿ ತಿಮ್ಮನಹಳ್ಳಿ, ರಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತರು ಭದ್ರಾ ಮೇಲ್ದಂಡೆ ಯೋಜನೆ ನೀರಾವರಿ ಅನುಷ್ಠಾನಕ್ಕೆ ಒತ್ತಾಯಿಸಿ ಹಾಗೂ ಚುನಾವಣಾಯಲ್ಲಿ ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಸಭೆ ನಡೆಸಿದರು.

        ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ, ಕಾರ್ಖಾನೆಗಳು ಆಹಾರವನ್ನು ಉತ್ಪಾದನೆ ಮಾಡುವುದಿಲ್ಲ, ರೈತರೆ ಆಹಾರವನ್ನು ಬೆಳೆಯಬೇಕು, ರೈತರನ್ನು ರಾಜಕಾರಣಿಗಳು ಕುರಿಗಳು ಎಂದು ತಿಳಿದಿದ್ದಾರೆ ಎಂದ ಅವರು, ತಿಮ್ಮನಹಳ್ಳಿ ಬಳಿ ಹಾದು ಹೋಗುವ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ 1 ಕಿ.ಮೀ ದೂರದಲ್ಲಿ ಹರಿಯುವುದರಿಂದ ಈ ಭಾಗದ ನೂರಾರು ಎಕರೆ ಭೂಮಿ ಭದ್ರಾ ಮೇಲ್ದಂಡೆ ಯೋಜನೆಗೆ ವಶಪಡಿಸಿಕೊಳ್ಳುತ್ತಿದ್ದು, ಪರಿಹಾರ ಸೇರಿದಂತೆ ಈ ಭಾಗಕ್ಕೆ ನೀರು ನೀಡುವಂತೆ ಆಗ್ರಹಿಸಿದರು.

        ಈ ಭಾಗದ ಮತದಾರರು ಚುನಾವಣೆಯಲ್ಲಿ ಮತದಾನವನ್ನು ಸ್ವಯಂ ಪ್ರೇರಿತವಾಗಿ ಮಾಡದೇ ಗಟ್ಟಿ ತೀರ್ಮಾನ ತೆಗೆದುಕೊಳ್ಳುವ ಮುನ್ನ ಸರ್ಕಾರ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ಅವರು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಆಶ್ವಾಸನೆ ನೀಡಿದ ನಂತರ ಮತದಾನ ಮಾಡಬೇಕೋ ಅಥವಾ ಮತದಾನದಿಂದ ಹೊರ ಉಳಿಯಬೇಕೋ ಎಂದು ತೀರ್ಮಾನ ತೆಗೆದುಕೊಳ್ಳೋಣ ಎಂದರು.

        ರೈತ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ಕೃಷಿಯನ್ನು ನಂಬಿ ಬದುಕುತ್ತಿರುವ ರೈತ ಇಂದು ಮಳೆ, ಬೆಳೆ ಇಲ್ಲದೆ ಗುಳೆ ಹೋಗುವ ಪರಿಸ್ಥಿತಿ ಉಂಟಾಗಿದೆ. ತಿಮ್ಮನಹಳ್ಳಿ ಒಂದು ಕಾಲದಲ್ಲಿ ರಾಜ್ಯಾದ್ಯಂತ ಕಾಯಿ ತಿಮ್ಮನಹಳ್ಳಿ ಎಂದು ಹೆಸರುವಾಸಿಯಾಗಿತ್ತು. ಇಂದು ಇಲ್ಲಿನ ತೆಂಗು ಅಡಿಕೆ ಮರಗಳು ನೀರಿಲ್ಲದೆ ಒಣಗಿ ಹೋಗಿ ರೈತ ಬೀದಿ ಪಾಲಾಗುತ್ತಿದ್ದಾನೆ ಎಂದರಲ್ಲದೆ, ತಿಮ್ಮನಹಳ್ಳಿ ಬಳಿ ಹಾದು ಹೋಗುವ ಭದ್ರಾ ಮೇಲ್ದಂಡೆ ಯೋಜನೆಯಿಂದ ಈ ಭಾಗದ ಗಂಟೇನಹಳ್ಳಿ, ರಾಮನಹಳ್ಳಿ, ಚಿಕ್ಕಬಿದರೆ ಕೆರೆಗಳಿಗೆ ನೀರು ಹರಿಸಿದರೆ ಮಾತ್ರ ರೈತ ಉಳಿಯಲು ಸಾಧ್ಯ.

         ಏಪ್ರಿಲ್ 18ರ ಒಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಚುನಾವಣೆಯಲ್ಲಿ ಮತದಾನ ಮಾಡಬೇಕೆ ಬೇಡವೆ ಎಂದು ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ಹೋರಾಟ ನಿರಂತರವಾಗಿದ್ದು, ತಿಮ್ಮನಹಳ್ಳಿ, ರಾಮನಹಳ್ಳಿ ಭಾಗದ ಜನರು ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಹಾಗೂ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ಆಶ್ವಾಸನೆ ನೀಡುವ ತನಕ ಪ್ರತಿಭಟನೆ ಮಾಡಲಾಗುವುದು ಎಂದರು.

        ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಜಯರಾಂ, ಚುನಾವಣಾಧಿಕಾರಿ ಪ್ರಸಾದ್.ವಿ. ಕುಲಕರ್ಣಿ, ಇ.ಓ ನಾರಾಯಣಸ್ವಾಮಿ, ಸಿ.ಪಿ.ಐ. ಸುರೇಶ್, ಜಿ.ಪಂ ಸದಸ್ಯೆ ಮಂಜುಳಮ್ಮ, ತಾ.ಪಂ ಸದಸ್ಯೆ ಇಂದಿರಾಕುಮಾರಿ, ಗ್ರಾ.ಪಂ ಅಧ್ಯಕ್ಷೆ ಉಮಾದೇವಿ, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap