ದಾವಣಗೆರೆ:
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಬೀದಿ ಪಾಲಾಗಿರುವ ಕೊಡಗಿನ ನೆರೆ ಸಂತ್ರಸ್ಥರಿಗಾಗಿ ನಗರದ ಪೊಲೀಸ್ ಪೇದೆಯೊಬ್ಬರ ಮಕ್ಕಳಿಬ್ಬರು ಸಾರ್ವಜನಿಕವಾಗಿ ಸುಮಾರು 25 ಸಾವಿರಕ್ಕೂ ಅಧಿಕ ನೆರೆ ಸಂತ್ರಸ್ಥರ ನಿಧಿ ಸಂಗ್ರಹಿಸುವ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಮಾನವೀಯತೆ ಮೆರೆದಿದ್ದಾರೆ.

ನಗರದ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೆಬಲ್ ಎಸ್. ಹೇಮಣನವರ ಮಕ್ಕಳಾದ ನಿಟ್ಟುವಳ್ಳಿ ಆರ್ವಿಕೆ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಹರ್ಷ ಹಾಗೂ ತ್ರಿಶೂಲ್ ಕಾನ್ವೆಂಟ್ 2ನೇ ತರಗತಿ ವಿದ್ಯಾರ್ಥಿ ವೈಭವ್ ಈ ಇಬ್ಬರು ಸ್ವಯಂ ಪ್ರೇರಣೆಯಿಂದ ನಗರದಲ್ಲಿ ನೇರವಾಗಿ ಜನರ ಬಳಿ ತೆರಳಿ ನೆರೆ ಪೀಡಿತರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶಿದಂದ ಸಂತ್ರಸ್ಥರ ನಿಧಿ ಸಂಗ್ರಹಿಸಿದ್ದಾರೆ. ಸಂಗ್ರಹವಾದ ಒಟ್ಟು 25,400 ರೂ. ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಡಿಡಿ ಮೂಲಕ ಪಾವತಿಸಿದ್ದಾರೆ.
ಈ ಮಕ್ಕಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್. ಚೇತನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ. ಉದೇಶ ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೇ, ಅಭಿನಂದಿಸಿದ್ದಾರೆ.








