ದಾವಣಗೆರೆ:
ಜಲ ಪ್ರಳಯಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ನೆರೆ ಸಂತ್ರಸ್ಥರಿಗೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಉದಾರ ನೆರವು ನೀಡಿದ್ದು, ಇನ್ನೂ ಕೆಲ ಸಂಘಟನೆಗಳು ಸಂತ್ರಸ್ಥರ ನಿಧಿ ಹಾಗೂ ಅವರಿಗೆ ಅವಶ್ಯವಾಗಿ ಬೇಕಾಗಿರುವ ಅಗತ್ಯ ವಸ್ತುಗಳ ಸಂಗ್ರಹಕ್ಕೆ ಮುಂದಾಗಿವೆ.
ಜಯದೇವ ಯೋಗ ಕೇಂದ್ರ:
ಜಯದೇವ ಯೋಗ ಕೇಂದ್ರದಿಂದ ನಗರದ ಶಿವಯೋಗಾಶ್ರಮದಲ್ಲಿ ಮಂಗಳವಾರ ಕೊಡಗಿನ ನಿರಾಶ್ರಿತರಿಗಾಗಿ ಸಂಗ್ರಹಿಸಲಾದ ಸುಮಾರು 1 ಲಕ್ಷ ರೂ. ಮೊತ್ತದ ಅಗತ್ಯ ವಸ್ತುಗಳನ್ನು ಸಮರ್ಪಿಸುವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ, ಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಜಲ ಪ್ರಳಯಕ್ಕೆ ತುತ್ತಾಗಿರುವ ಕೊಡಗಿಗೂ ನಮಗೂ ಏನೂ ಸಂಬಂಧವಿಲ್ಲ ಎಂಬಂತೆ, ಸುಮ್ಮನಿರದೇ, ಅಲ್ಲಿ ಸಂಕಷ್ಟಕ್ಕೆ ತುತ್ತಾಗಿರುವವರ ಸಮಸ್ಯೆಗಳಿಗೆ ಸ್ಪಂದಿಸಿ, ಸಂತ್ರಸ್ಥರಿಗೆ ಪ್ರಸ್ತುತ ಅಗತ್ಯವಾಗಿ ಬೇಕಾಗಿರುವ ಹೊಸ ಬಟ್ಟೆ, ಆಹಾರ ಸಾಮಾಗ್ರಿಗಳನ್ನು ಕಳುಹಿಸುತ್ತಿರುವ ಜಯದೇವ ಯೋಗ ಕೇಂದ್ರದ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಸರ್ಗವೇ ನಮಗೆ ದೇವರು. ತಾಯಿ ಇದ್ದ ಹಾಗೆ. ಆದರೆ ಪ್ರಕೃತಿ ಮಾತೆ ಇಂದು ನಮ್ಮ ವಿರುದ್ಧ ಮುನಿಸಿಕೊಂಡಿದ್ದಾಳೆ. ನಮ್ಮಲ್ಲಿರುವ ದುರಾಸೆಯಿಂದ ಪ್ರಕೃತಿಯ ಶೋಷಣೆ ನಡೆದಿದೆ. ಕಾಡು ನಾಶವಾಗುತ್ತಿದ್ದು, ಇದ್ದ ಮರ-ಗಿಡಗಳನ್ನು ಕಡಿದು ಹಾಕಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಲಕ್ಕೆ ತಕ್ಕಂತೆ ಮಳೆ, ಬೆಳೆ ಬರದೆ ಅತಿವೃಷ್ಠಿ ಅನಾವೃಷ್ಠಿ ಸಂಭವಿಸುತ್ತಿದೆ. ಇನ್ನೂ ಮುಂದಾದರೂ ನಾವೆಲ್ಲ ಎಚ್ಚೆತ್ತುಕೊಂಡು ಪ್ರಕೃತಿಯ ಸಮತೋಲನ ಕಾಪಾಡಲು ಮುಂದಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯೋಗ ಒಕ್ಕೂಟದ ಪ್ರಕಾಶ ಉತ್ತಂಗಿ, ಶಾಂತಕುಮಾರ ಸೋಗಿ, ಬಕ್ಕಣ್ಣ, ಮಂಜಣ್ಣ, ವೀರಣ್ಣ, ಉಮಾಶಂಕರ್, ಈರಣ್ಣ, ಪುಟ್ಟರಾಜ, ಮೇಘರಾಜ್, ಸಿದ್ದೇಶ್ವರ, ಮಹಾಂತೇಶ್, ಅನಿಲ್ ರಾಯ್ಕರ್ ಮತ್ತಿತರರು ಹಾಜರಿದ್ದರು.