ದಾವಣಗೆರೆ :
ವರುಣನ ಆರ್ಭಟದಿಂದ ತತ್ತರಿಸಿ ಹೋಗಿರುವ ಕರ್ನಾಟಕದ ಕೊಡಗು ಜಿಲ್ಲೆಯ ಹಾಗೂ ಕೇರಳದ ನೆರೆ ಸಂತ್ರಸ್ಥರಿಗೆ ದಾವಣಗೆರೆ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟದಿಂದ 1 ಕೋಟಿ ರೂ. ನೆರವು ನೀಡಲು ಭಾನುವಾರ ನಡೆದ ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಒಕ್ಕೂಟದ ಗೌರವಾಧ್ಯಕ್ಷ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ನಿವಾಸದಲ್ಲಿ ಭಾನುವಾರ ಒಕ್ಕೂಟದ ಸದಸ್ಯ ಬ್ಯಾಂಕ್‍ಗಳಾದ ಬಾಪೂಜಿ ಬ್ಯಾಂಕ್, ದಾವಣಗೆರೆ ಅರ್ಬನ್ ಕೋ- ಆಪ್‍ರೇಟಿವ್ ಬ್ಯಾಂಕ್, ದಾವಣಗೆರೆ ಅರ್ಬನ್ ಕೋ- ಆಪ್‍ರೇಟಿವ್ ಬ್ಯಾಂಕ್, ಶಿವ ಕೋ- ಆಪ್‍ರೇಟಿವ್ ಬ್ಯಾಂಕ್, ಕನ್ನಿಕಾ ಪರಮೇಶ್ವರಿ ಕೋ- ಆಪ್‍ರೇಟಿವ್ ಬ್ಯಾಂಕ್, ಕನಕ ಕೋ- ಆಪ್‍ರೇಟಿವ್ ಬ್ಯಾಂಕ್, ಸಿಟಿ ಕೋ- ಆಪ್‍ರೇಟಿವ್ ಬ್ಯಾಂಕ್. ಅಂಬಾಭವಾನಿ ಕೋ- ಆಪ್‍ರೇಟಿವ್ ಬ್ಯಾಂಕ್, ಮುರುಘರಾಜೇಂದ್ರ ಕೋ- ಆಪ್‍ರೇಟಿವ್ ಬ್ಯಾಂಕ್, ಮಿಲ್ಲತ್ ಕೋ- ಆಪ್‍ರೇಟಿವ್ ಬ್ಯಾಂಕ್‍ಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು ಸಭೆ ಸೇರಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಮನೆ-ಮಠ ಕಳೆದುಕೊಂಡು ಬೀದಿಪಾಲಾಗಿರುವ ನೆರೆ ಸಂತ್ರಸ್ಥರಿಗೆ ನೆರವಾಗುವ ಉದ್ದೇಶದಿಂದ ಒಕ್ಕೂಟ ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಗೌರವಾಧ್ಯಕ್ಷ, ಶಾಸಕ ಡಾ|| ಶಾಮನೂರು ಶಿವಶಂಕರಪ್ಪ, ಕೇರಳ ಹಾಗೂ ಕರ್ನಾಟಕದ ಕೊಡಗು ಸೇರಿದಂತೆ ಇತರೆ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ನಷ್ಟವುಂಟಾಗಿ, ಸಾವಿರಾರು ಜನ ಬೀದಿ ಪಾಲಾಗಿದ್ದಾರೆ. ಆದ್ದರಿಂದ ಈ ನೆರೆ ಸಂತ್ರಸ್ಥರಿಗೆ ನೆರವಾಗುವ ಉದ್ದೇಶದಿಂದ ಒಂದು ಕೋಟಿ ರೂಪಾಯಿಗಳನ್ನು ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಸಾವು-ನೋವುಗಳಾಗಿವೆ. ಅಲ್ಲದೆ, ಹಲವರು ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಈ ನೆರೆ ಸಂತ್ರಸ್ಥರಿಗೆ ಈಗಾಗಲೇ ಸಾಕಷ್ಟು ಜನತೆ ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಒಕ್ಕೂಟದಿಂದಲೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಲಾ 50 ಲಕ್ಷ ರೂ.ಗಳಂತೆ ಒಟ್ಟು ಒಂದು ಕೋಟಿ ರೂ. ನೆರವು ನೀಡುವ ಮೂಲಕ ಸಂತ್ರಸ್ಥರ ಕಣ್ಣೀರು ಒರೆಸುವ ಪ್ರಯತ್ನ ಮಾಡುತ್ತಿದೆ ಎಂದರು.
ಈ ಹಿಂದೆಯೂ ಸಹ ಒಕ್ಕೂಟದಿಂದ ಭೂಕಂಪ, ಕಾರ್ಗೀಲ್ ಯುದ್ಧ, ಸುನಾಮಿ ಸೇರಿದಂತೆ ಇತರೆ ಪ್ರಕೃತಿ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ನೆರವು ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದೆ ಎಂದು ಹೇಳಿದರು.
ಒಕ್ಕೂಟದ ಗೌರವ ಕಾರ್ಯದರ್ಶಿಗಳಾಗಿದ್ದ ಎನ್‍ಎಂಜೆಬಿ ಆರಾಧ್ಯ ಅವರ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಆದ್ದರಿಂದ ಇದೇ ವೇಳೆ ಒಕ್ಕೂಟದ ಗೌರವ ಕಾರ್ಯದರ್ಶಿಗಳನ್ನಾಗಿ ಎನ್‍ಎಂಜೆಬಿ ಮುರುಗೇಶ್ ಅವರನ್ನು ಅವಿರೋಧವಾಗಿ ನೇಮಿಸಲಾಯಿತು.
ಸಭೆಯಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಸಿ.ಉಮಾಪತಿ, ನೂತನ ಗೌರವ ಕಾರ್ಯದರ್ಶಿ ಎನ್‍ಎಂಜೆಬಿ ಮುರುಗೇಶ್, ಸದಸ್ಯರುಗಳಾದ ಎಸ್.ಎಸ್.ಮಲ್ಲಿಕಾರ್ಜುನ್, ಕೋಗುಂಡಿ ಬಕ್ಕೇಶಪ್ಪ, ಕಿರುವಾಡಿ ಸೋಮಶೇಖರ್, ಎನ್.ಜೆ.ಗುರುಸಿದ್ದಯ್ಯ, ಆರ್.ಎಲ್.ಪ್ರಭಾಕರ್, ಕುರ್ಕಿ ಕುಬೇರಪ್ಪ, ರಮಣ್ ಲಾಲ್, ಆರ್.ಜಿ.ಶ್ರೀನಿವಾಸ ಮೂರ್ತಿ, ಸಿ.ಚಂದ್ರಶೇಖರ್, ಬಿ.ಎಲ್.ಗೌಡ, ನಿರಂಜನ್ ನಿಶಾನಿಮಠ, ಜ್ಯೋತಿ ಪ್ರಕಾಶ್, ಡಿ.ವಿ.ಆರಾಧ್ಯಮಠ, ಅಶೋಕ್ ರಾಯಬಾಗಿ, ಶಿವಶಂಕರ್, ಮಂಜುನಾಥ್, ಎಂ.ಬಸವರಾಜ್ ಸೇರಿದಂತೆ ಹಲವರು ಪಾಲೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ