ದಾವಣಗೆರೆ:
ದೇಶದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿರುವ ಹಾಗೂ ಸ್ವಾತಂತ್ರ್ಯ ಚಳವಳಿಗೆ ತ್ಯಾಗ ಬಲಿದಾನ ಮಾಡಿರುವ ನೆಹರು ಮನೆತನದ ಇತಿಹಾಸ ತಿರುಚುವ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ನಿರತರಾಗಿದ್ದಾರೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಆರೋಪಿಸಿದರು.
ನಗರದ ಎಂ.ಸಿ.ಸಿ. ‘ಎ’ ಬ್ಲಾಕ್‍ನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪಂಡಿತ್ ಜವಹಾರ್‍ಲಾಲ್ ನೆಹರು ಅವರ 55ನೇ ಪುಣ್ಯತಿಥಿ ಸಮಾರಂಭದಲ್ಲಿ ಭಾಗವಹಿಸಿ, ನೆಹರುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ದೇಶದಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿದ ದಿನದಿಂದಲೂ ನರೇಂದ್ರ ಮೋದಿಯವರು, ದೇಶದ ಅಭಿವೃದ್ಧಿಗೆ ಶ್ರಮಿಸಿದ, ತ್ಯಾಗ ಬಲಿದಾನ ಮಾಡಿದ ನೆಹರು ಕುಟುಂಬದ ಇತಿಹಾಸ ತಿರುಚುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಇದರ ಪರಿಣಾಮವಾಗಿ ಮೊನ್ನೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‍ಗೆ ಹಿನ್ನೆಡೆ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮೋದಿ ಮತ್ತು ಬಿಜೆಪಿಯವರು ಹರಡುತ್ತಿರುವ ಸುಳ್ಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಸತ್ಯವನ್ನು ತಿಳಿಸಿಕೊಡಬೇಕೆಂದು ಕಿವಿಮಾತು ಹೇಳಿದರು.
ಬಿಜೆಪಿಯವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯನ್ನು ದೇಶಪ್ರೇಮಿ ಎಂಬುದಾಗಿ ಕರೆಯುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನೆಹರು ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪರಮಶಿಷ್ಯರಾಗಿ, ಅವರ ಮಾರ್ಗದರ್ಶನದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ನಲವತ್ತು ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆಸಿ ಒಂಭತ್ತು ವರ್ಷಗಳ ಕಾಲ ಜೈಲು ವಾಸ ಅನುಭವಿಸಿ ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಬಲಿದಾನ ಮಾಡಿ, ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದು, ಹದಿನೇಳು ವರ್ಷಗಳ ಕಾಲ ದೇಶವನ್ನು ಮುನ್ನೆಡೆಸಿದ ಸಮರ್ಥ ಆಡಳಿತಗಾರ, ಆಧುನಿಕ ಭಾರತದ ಶಿಲ್ಪಿಯಾಗಿದ್ದಾರೆಂದು ಬಣ್ಣಿಸಿದರು.
ಜವಹಾರಲಾಲ್ ನೆಹರುರವರು ಭಾರತದ ಕೃಷಿ ಮತ್ತು ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲು, ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದಿದ್ದರು. ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಇದಕ್ಕಾಗಿ ಭಾಕ್ರಾನಂಗಲ್, ಹಿರಾಕುಡ್ ಜಲಾಶಯಗಳನ್ನು ನಿರ್ಮಿಸಿದರು.
ಕೈಗಾರಿಕೆಗಳ ಅಭಿವೃದ್ಧಿಗಾಗಿ ಭಿಲಾಯ್ ಮತ್ತು ರೂರ್‍ಖೇಲಾ ಉಕ್ಕಿನ ಕಾರ್ಖಾನೆಗಳನ್ನು ಸ್ಥಾಪಿಸಿದರು. ಭಾರತವು ಅಭಿವೃದ್ಧಿಯಲ್ಲಿ ಇತರ ರಾಷ್ಟ್ರಗಳಿಗೆ ಸರಿಸಾಟಿಯಾಗಿ ನಿಲ್ಲಬೇಕೆಂದು ಬಯಸಿ ಅಣುಶಕ್ತಿ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಶ್ರಮಿಸಿದ್ದರು ಎಂದು ಸ್ಮರಿಸಿದರು.
ದೇಶದ ವಿದ್ಯಾರ್ಥಿಗಳಿಗೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಹಲವಾರು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ಹಾಗೂ ಪರಸ್ಪರ ಸ್ನೇಹಕ್ಕೆ ಅಲಿಪ್ತ ನೀತಿ ರೂಪಿಸಿದ್ದರು. ದೇಶಕಂಡ ಅಪ್ರತಿಮ ಸಮರ್ಥ ಆಡಳಿತಗಾರರಾದ ನೆಹರುರವರು ಸಮಾಜವಾದ, ಜ್ಯಾತ್ಯಾತೀತ ಆಡಳಿತವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೂಪಿಸಿ ದೇಶಕ್ಕೆ ಭದ್ರ ಅಡಿಪಾಯವನ್ನು ಹಾಕಿದ್ದಾರೆಂದು ನೆಹರು ಸಾಧನೆಯನ್ನು ಪಟ್ಟಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಯಪ್ರಕಾಶ್, ಎಸ್.ವಿ. ಸಿದ್ದಲಿಂಗೇಶ್, ಕೆ.ಜಿ. ರಹಮತ್‍ವುಲ್ಲಾ, ಹರೀಶ್ ಈರಣ್ಣ, ಜಿ.ಸೂರಜ್, ಲಿಯಾಖತ್ ಅಲಿ, ಅಯಾಜ್, ಎಲ್. ಭೀಮಪ್ಪ, ಮಂಜುನಾಥ್, ಸಂದೀಪ್, ಉಮಾ ತೋಟಪ್ಪ, ಖಲೀಲ್ ಮತ್ತಿತರರಿದ್ದರು.