ಚಿಕ್ಕನಾಯಕನಹಳ್ಳಿ:
ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನುಡಿನಮನ ಕಾರ್ಯಕ್ರಮ ನಡೆಯಿತು.
ಪುನೀತ್ ರಾಜ್ಕುಮಾರ್ ಅವರ ನುಡಿನಮನ ಕಾರ್ಯಕ್ರಮದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ 120ಕ್ಕೂ ಹೆಚ್ಚು ಜನರು ಮರಣಾನಂತರ ನೇತ್ರದಾನ ಮಾಡಲು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದರು. 80ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕನ್ನಡ ಸಂಘ, ಡಾ.ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿಗಳು, ತಾಲ್ಲೂಕು ಈಡಿಗರ ಸಂಘದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ರೆಡ್ಕ್ರಾಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ತಾಲ್ಲೂಕು ಈಡಿಗರ ಸಂಘದ ಅಧ್ಯಕ್ಷ ಎನ್.ಜಿ.ನಾಗರಾಜು ಕಾರ್ಯಕ್ರಮ ಉದ್ಘಾಟಿಸಿದರು. ಸಂಘ ಸಂಸ್ಥೆಗಳು ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರವನ್ನು ಹೊತ್ತ ವಾಹನವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು.
ಈ ಸಂದರ್ಭದಲ್ಲಿ ಡಾ.ಪರಮೇಶ್ವರಯ್ಯ ಮಾತನಾಡಿ, ಪುನೀತ್ ರಾಜ್ಕುಮಾರ್ ಅನಾಥಾಶ್ರಮ, ವೃದ್ದಾಶ್ರಮ ಹಾಗೂ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಿದ್ದು, ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಂದೆಯಂತೆ ಸ್ವತಃ ತಮ್ಮ ಕಣ್ಣುಗಳನ್ನು ದಾನ ಮಾಡಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದು, ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.
ತಾಲ್ಲೂಕು ರೆಡ್ಕ್ರಾಸ್ ಚೇರ್ಮನ್ ಸಿ.ಎಸ್.ಪ್ರದೀಪ್ಕುಮಾರ್ ಮಾತನಾಡಿ, ಚಿಕ್ಕನಾಯಕನಹಳ್ಳಿಯಲ್ಲಿ ಪ್ರಥಮ ಬಾರಿಗೆ ಇಂಡಿಯನ್ ರೆಡ್ಕ್ರಾಸ್ ಸಂಸ್ಥೆ ವತಿಯಿಂದ, ರೋಟರಿ ಸಂಸ್ಥೆ ಹಾಗೂ ಕನ್ನಡ ಸಂಘದ ವೇದಿಕೆ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು ಈ ದಿನ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 80 ದಾನಿಗಳು ರಕ್ತದಾನ ಮಾಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಯಾ.ಸೋಮಶೇಖರ್, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಕಾರ್ಯದರ್ಶಿ ಕೆ.ಜಿ.ಕೃಷ್ಣೆಗೌಡ, ಶ್ರೀನಿವಾಸಮೂರ್ತಿ, ವೆಂಕಟೇಶಮೂರ್ತಿ, ಪುರಸಭಾ ಸದಸ್ಯ ಸಿ.ಡಿ.ಸುರೇಶ್, ಉಮಾಪರಮೇಶ್, ಮಿಲಿಟರಿ ಶಿವಣ್ಣ, ಚಿ.ನಾ.ಹಳ್ಳಿ ರೆಡ್ ಸಂಸ್ಥೆ ಛೇರ್ಮನ್ ಪ್ರದೀಪ್ಕುಮಾರ್, ಮಾಜಿ ಪುರಸಭಾಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಅವರ ಸಿನಿಮಾ ಹಾಡುಗಳನ್ನು ಗಂಗಾಧರ್ ತಂಡ ಹಾಡಿತು. ಈಡಿಗರ ಸಂಘದ ವತಿಯಿಂದ ಬಾಡೂಟ ಹಾಗೂ ಸಿಹಿ ಊಟ ಏರ್ಪಡಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
