ತುಮಕೂರು :
ನೇತ್ರದಾನವು ನಮ್ಮಗಳಿಗೆ ನಮ್ಮ ಮರಣೋತ್ತರ ಕಾಲದಲ್ಲೂ ದಾನಿಯಾಗಿ ಉಳಿಸಿಕೊಂಡು ಹೋಗುತ್ತದೆ. ನೇತ್ರದಾನ ಮರಣೋತ್ತರ ಕಾಲದಲ್ಲೂ ನಮ್ಮನ್ನು ದಾನಿಯಾಗಿಸುತ್ತದೆ. ನೇತ್ರದಾನದಿಂದ ನಾವು ಕಳೆದು- ಕೊಳ್ಳುವುದೇನಿಲ್ಲ. ನೇತ್ರದಾನದಿಂದ ನಾವು ಪಡೆದುಕೊಳ್ಳುವುದೇ ಹೆಚ್ಚು. ಸತ್ತನಂತರ ಮಣ್ಣಲ್ಲಿ ಮಣ್ಣಾಗಿಹೋಗುವ ಕಣ್ಣುಗಳನ್ನು, ಸುಟ್ಟು ಬೂದಿಯಾಗಿಹೋಗುವ ಕಣ್ಣುಗಳನ್ನು ನಾವು ಸಾಯುವುದಕ್ಕೆ ಮೊದಲೇ ಮರಣಾನಂತರ ತೆಗೆದುಕೊಳ್ಳುವುದಕ್ಕೆ ಹೇಳಿದರೆ ನಮ್ಮ ಕಣ್ಣುಗಳು ಇನ್ನೊಬ್ಬರ ಬಾಳಿಗೆ ಕಣ್ಣಾಗುತ್ತವೆ ಎಂದು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನುಡಿದರು.
ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ನೇತ್ರತಜ್ಞರ ಸಂಘ ತುಮಕೂರು ಮತ್ತು ಲಯನ್ಸ್ ಅಂತಾರ್ರಾಷ್ಟ್ರೀಯ ನೇತ್ರ ಭಂಡಾರ, ಬೆಂಗಳೂರು, ಎನ್. ಎಸ್. ಐ. ಫೌಂಡೇಶನ್, ತುಮಕೂರು, ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ, ಮತ್ತು ವಾಣಿಜ್ಯ ಕಾಲೇಜು, ಎನ್. ಎಸ್. ಎಸ್. ಮತ್ತು ಎನ್. ಸಿ. ಸಿ. ವಿಭಾಗ) ತುಮಕೂರು ಈ ಎಲ್ಲ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ 33ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಾಚರಣೆ 2018-2019, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಆಶೀರ್ವಚನವನ್ನು ನೀಡುತ್ತಾ ಅವರು ಮಾತನಾಡುತ್ತಿದ್ದರು.
ಕುರುಡು ಜೀವನವದು ಅದೆಷ್ಟು ದುರ್ಗಮ ಎಂಬುವುದು ಅನುಭವಿಸುವವರಿಗೆ ಮಾತ್ರ ಗೊತ್ತು. ಕಣ್ಣಿಲ್ಲದ ಕುರುಡು ಜೀವನ ಅದೊಂದು ಬಹುದೊಡ್ಡ ಚಾಲೇಂಜ್. ನಿಮ್ಮ ಕಣ್ಣುಗಳನ್ನು ಮರಣೋತ್ತರವಾಗಿ ದಾನಮಾಡುವ ಮೂಲಕ ಕುರುಡರ ಬಾಳಿಗೆ ಕಣ್ಣಾಗಿ. ಇರುವಾಗ ಬರೀ ಕಣ್ಣನ್ನಷ್ಟೇ ಅಲ್ಲ, ಏನನ್ನಾದರೂ ಸರಿ, ದಾನಮಾಡುವುದು ತುಂಬ ತುಂಬಾನೇ ಕಷ್ಟ.
ಕಣ್ಣುಗಳು ಸತ್ತ ಮೇಲಾದರೂ ನಮ್ಮನ್ನು ದಾನ ಮಾಡಿ. ಆಗಲೂ ನಮ್ಮನ್ನು ದಾನಮಾಡಿದರೆ ನಾವು ನಿಮಗೆ ಪುಣ್ಯಾತ್ಮ ಎಂಬ ಪಟ್ಟ ಕಟ್ಟುತ್ತೇವೆ. ಹಾಗೆ ಮಾಡಿ ಪುಣ್ಯ ಕಟ್ಟಿಕೊಳ್ಳಿ. ಇರೋವಾಗ ಭಾರತರತ್ನರಾಗದಿದ್ದರೂ ಪರವಾ ಇಲ್ಲ, ಸತ್ತ ನಂತರವಾದರೂ ಸರಿ, ನಿಮ್ಮ ಕಣ್ಣುಗಳಾಗಿರುವ ನಮ್ಮನ್ನು ದಾನಮಾಡುವ ಮೂಲಕ ನೇತ್ರರತ್ನರಾಗಿ ಎಂದು ಹೇಳುತ್ತವೆ. ನಾವು-ನೀವುಗಳು ಚಿರಂಜೀವಿಗಳಾಗದಿದ್ದರೂ ಪರವಾ ಇಲ್ಲ, ಮರಣಾನಂತರ ನಮ್ಮ ಕಣ್ಣುಗಳನ್ನು ದಾನಮಾಡುವ ಮೂಲಕ ನಮ್ಮ, ನಿಮ್ಮ ಕಣ್ಣುಗಳನ್ನು ಚಿರಂಜೀವಿಯಾಗಿಸುವಾ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ದಿನೇಶಕಮಾರ್ ಮಾತನಾಡುತ್ತ, ನೀವು ದಾನಮಾಡಿದ ನೇತ್ರಗಳು ಆರು ಜನಗಳ ಬಾಳಿನ ಕುರುಡನ್ನು ಕಳೆದುಹಾಕುತ್ತವೆ. ನಿಮ್ಮ ಮರಣಾನಂತರ ಕಣ್ಣುಗಳನ್ನು ಸಾಯಿಸುವುದು ಮತ್ತು ಜೀವಂತವಾಗಿಡುವುದು ನಿಮ್ಮ ಕೈಯಲ್ಲಿಯೇ ಇದೆ. ನೀವು ನೇತ್ರದಾನ ಮಾಡಿದರೆ ನೀವು ಸತ್ತನಂತರವೂ ನಿಮ್ಮ ಕಣ್ಣುಗಳು ಜೀವಂತವಾಗಿರುತ್ತದೆ” ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಬಿ.ಆರ್. ಚಂದ್ರಿಕಾರವರು ಮಾತನಾಡುತ್ತ, ಕಣ್ಣುಗಳು ಆಸ್ತಿ ಇದ್ದ ಹಾಗೆ. ಅವುಗಳನ್ನು ನೀವುಗಳು ಇರುವಾಗ ದಾನಮಾಡುವ ಅವಶ್ಯಕತೆ ಇಲ್ಲ. ನೀವು ಸತ್ತುಹೋದ ಮೇಲೆ ನಿಮ್ಮೊಂದಿಗೇನೇ ನಿಮ್ಮ ನೇತ್ರವೆಂಬ ಆಸ್ತಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಸತ್ತುಹೋಗಬಾರದು. ನಿಮ್ಮ ಮರಣಾನಂತರದ ಕಾಲದಲ್ಲೂ ನಿಮ್ಮ ಆಸ್ತಿ ಈ ಪ್ರಪಂಚದಲ್ಲಿ ಉಳಿದುಕೊಂಡಿರಬೇಕು ಎಂದರೆ ನೀವುಗಳು ನಿಮ್ಮ ಕಣ್ಣುಗಳನ್ನು ನಿಮ್ಮ ಮರಣಾನಂತರದ ಕಾಲದಲ್ಲಿ ದಾನಮಾಡಿ” ಎಂದು ಹೇಳಿದರು.
ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ವೀರಭದ್ರಯ್ಯ ಮಾತನಾಡುತ್ತ, “ತುಮಕೂರು ಜಿಲ್ಲಾ ಆಸ್ಪತ್ರೆಯು ಎಲ್ಲ ವಿಧವಾದ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಅದರಲ್ಲೂ ಕಣ್ಣಿನ ವಿಷಯದಲ್ಲಿ ನಾವು ಬೆಂಗಳೂರಿನ ಯಾವುದೇ ಖಾಸಗೀ ಆಸ್ಪತ್ರೆಗಿಂತ ಹೆಚ್ಚು ಸಕ್ಷಮರಾಗಿದ್ದೇವೆ. ನಿಮ್ಮ ಮರಣಾನಂತರ ನೇತ್ರದಾನಕ್ಕೆ ನಾವು ನ್ಯಾಯ ಒದಗಿಸುತ್ತೇವೆ” ಎಂದು ಹೇಳಿದರು.
ಹಿರಿಯ ನೇತ್ರತಜ್ಞ ಡಾ. ಕೆ. ಪಿ. ಕಲ್ಲೇಶ್ವರ ಮಾತನಾಡುತ್ತ, “ಸತ್ತ ನಂತರ ನಮ್ಮ ಜೊತೆ ಯಾವ ಭೌತಿಕ ಆಸ್ತಿಯೂ ಬರುವುದಿಲ್ಲ. ಭೌತಿಕ ಆಸ್ತಿಯನ್ನೊಂದು ಮರಣಾನಂತರ ತೆಗೆದುಕೊಂಡು ಹೋಗಬೇಕೆಂದರೆ ನೇತ್ರದಾನ ಮಾಡಿ. ನೀವು ದಾನಮಾಡಿದ ನೇತ್ರಗಳು ನಿಮ್ಮ ಮರಣಾನಂತರ ಕಾಲದಲ್ಲೂ ನಿಮ್ಮ ಆಸ್ತಿಯಾಗಿ ಇನ್ನೊಬ್ಬರನ್ನು ರಕ್ಷಿಸಿಕೊಂಡಿರುತ್ತವೆ” ಎಂದು ಹೇಳಿದರು.
ಶ್ರೀ ಸಿದ್ಧಗಂಗಾ ಬಾಲಕರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಆನಂದಕುಮಾರಿಯವರು ಮಾತನಾಡುತ್ತ, “ಉಸಿರು ಜೀವವಿರುವ ತನಕ ಮಾತ್ರ ನಮ್ಮ ಜೊತೆ ಇರುತ್ತದೆ.ಕಣ್ಣುಗಳು ನಮ್ಮ ಉಸಿರುಹೋದ ನಂತರವೂ ಜೀವಂತವಾಗಿರುತ್ತವೆ. ಬರೀ ಹನುಮಂತ, ಅಶ್ವತ್ಥಾಮ…..ಇತ್ಯಾದಿ ಈ ಏಳು ಜನ ಚಿರಂಜೀವಿಗಳ ಕುರಿತು ಇದುವರೆಗೆ ಮಾತನಾಡಿಕೊಂಡಿದ್ದೆವು. ಈಗ ನಮ್ಮ ಕಣ್ಣುಗಳನ್ನು ಕೂಡ ಚಿರಂಜೀವಿಯಾಗಿಸುವ ಅವಕಾಶವನ್ನು ನೇತ್ರತಜ್ಞರು ಮತ್ತು ವಿಜ್ಞಾನ ನಮಗೆ ಒದಗಿಸಿಕೊಟ್ಟಿದೆ. ನಿಜಕ್ಕೂ ಇದು ಹೆಮ್ಮೆಪಡಬೇಕಾದ ಸಂಗತಿ. ನೇತ್ರದಾನದ ಕುರಿತು ಅರಿವು ಮೂಡಿಸುವುದಕ್ಕೆ ನಮ್ಮ ಕಾಲೇಜು ಒಂದು ವೇದಿಕೆಯಾಗುತ್ತಿರುವುದು ನಮಗೊಂದು ಹೆಮ್ಮೆಯ ವಿಷಯ. ನಮ್ಮ ವಿದ್ಯಾರ್ಥಿಗಳು ನೇತ್ರದಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ’ ಎಂದು ಹೇಳಿದರು.
ಜಿಲ್ಲಾ ಕುಷ್ಠರೋಗ, ಅಂಧತ್ವ, ಮಾಣಸಿಕ ರೋಗ ನಿವಾರಣಾಧಿಕಾರಿಗಳಾದ ಡಾ. ಎಮ್. ಚೇತನ್‍ರವರು ಸ್ವಾಗತ ಮಾಡುತ್ತ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಎನ್. ಎಸ್. ಎಸ್. ಮತ್ತು ಎನ್. ಸಿ. ಸಿ. ವಿಭಾಗದ ನೂರಾರು ಜನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೇತ್ರದಾನಮಾಡುವ ಫಾರ್ಮುಗಳಿಗೆ ರುಜುಹಾಕುವ ಮೂಲಕ ಸಮಾರಂಭವನ್ನು ಯಶಸ್ವಿಯಾಗಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ