ಹುಬ್ಬಳ್ಳಿ:
ಬಿವಿಬಿ ಕಾಲೇಜಿನ ಆವರಣದಲ್ಲಿ ನಡೆದಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ಕೊಂಡುನಾಯ್ಕನ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರ ವಿಚಾರಣೆ ನಡೆಸಿದ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶವನ್ನು ಆ. 4ಕ್ಕೆ ಕಾಯ್ದಿರಿಸಿದೆ.
ನೇಹಾ ಹಿರೇಮಠ ಅವರ ತಾಯಿ ಗೀತಾ ನಿರಂಜನ ಹಿರೇಮಠ ಫಿರ್ಯಾದಿದಾರರು ಆಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಸೆಕ್ಷನ್‌ಗಳ ಪ್ರಕಾರ ಫಿರ್ಯಾದಿದಾರರ ಪರ ವಕೀಲರಾದ ರಾಘವೇಂದ್ರ ಮುತಗೀಕರ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಈಗ ವಾದವನ್ನೂ ಮಂಡಿಸಿದ್ದಾರೆ. ವಾದ-ವಿವಾದಗಳನ್ನು ಪರಿಶೀಲನೆ ನಡೆಸಿದ ನ್ಯಾಯಾಧೀಶರು ಆಗಸ್ಟ್ 4ಕ್ಕೆ ಆದೇಶವನ್ನು ಕಾಯ್ದಿರಿಸಿದೆ.
ಎಪ್ರಿಲ್ 18, 2024ರಂದು ಸಂಜೆ 4.30ರ ಸುಮಾರಿಗೆ ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕ್ಯಾಂಪಸ್ ಆವರಣದಲ್ಲಿ ಕಾಲೇಜಿಗೆ ಬಂದಿದ್ದ ನೇಹಾ ಹಿರೇಮಠಳನ್ನು ಫಯಾಜ್ ಭೀಕರವಾಗಿ ಕೊಲೆ ಮಾಡಿದ್ದ.
ಪ್ರೀತಿ ನಿರಾಕರಿಸಿದ್ದಕ್ಕೆ ಕೋಪಗೊಂಡು ಯುವಕ, ಯುವತಿ ಕಾಲೇಜಿಗೆ ಬಂದಿರುವ ಸುಳಿವರಿತು ಕಾಲೇಜಿಗೆ ಆಗಮಿಸಿ, ಮರಳಿ ಮನೆಗೆ ತೆರಳುವ ವೇಳೆ ಕಾಲೇಜು ಆವರಣದಲ್ಲೇ ಚಾಕುವಿನಿಂದ ಸುಮಾರು 9 ಬಾರಿ ಇರಿದು ಕೊಲೆ ಮಾಡಿದ್ದ. ಕುತ್ತಿಗೆ ಭಾಗದಲ್ಲಿ ತೀವ್ರವಾಗಿ ಇರಿದಿರುವುದರಿಂದ ಯುವತಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಕೊನೆ ಉಸಿರು ಎಳೆದಿದ್ದಳು.
