ನೋಡ ನೋಡುತ್ತಿದ್ದಂತೆ ವೇದಿಕೆ ಮೇಲೆ ಉರುಳಿದ ಲೈಟಿಂಗ್ ಟ್ರೇಸ್: ಈರಣ್ಣ ಕಡಾಡಿ ಪಾರು

ಬೆಳಗಾವಿ:

ರಸಮಂಜರಿ ಕಾರ್ಯಕ್ರಮ ನಡೆಯುತ್ತಿರುವಾಗ ನೋಡ ನೋಡುತ್ತಿದ್ದಂತೆ ವೇದಿಕೆ ಮೇಲೆ ಲೈಟಿಂಗ್ ಟ್ರೇಸ್ ಉರುಳಿ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆಯಿತು. ವೇದಿಕೆ ಮೇಲಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅದೃಷ್ಟವಶಾತ್ ಅವಘಡದಿಂದ ಪಾರಾಗಿದ್ದಾರೆ.

ವಿವರ: ರಾಜಾಪುರ ಗ್ರಾಮದಲ್ಲಿ ಚೂನಮ್ಮ ದೇವಿ ಜಾತ್ರೆಯ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆಗೊಳ್ಳುತ್ತಿದ್ದಾಗಲೇ ಲೈಟಿಂಗ್ ಟ್ರೇಸ್ ಮುರಿದುಬಿತ್ತು. ಸುಮಾರು 20 ಮಂದಿ ಗಣ್ಯರು ವೇದಿಕೆಯ ಮೇಲೆ ಕುಳಿತಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ.
ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಲೈಟಿಂಗ್ ಅಳವಡಿಸಿದ್ದ ಕಂಬ ವೇದಿಕೆ ಮೇಲೆ ಉರುಳಿ ಆಕಸ್ಮಿಕ ಅವಘಡ ಸಂಭವಿಸಿತು. ಮೂವರಿಗೆ ಗಾಯಗಳಾಗಿದ್ದು, ನಾವೆಲ್ಲರೂ ಬಚಾವ್ ಆಗಿದ್ದೇವೆ. ಗ್ರಾಮದ ಜಮೀನಿನಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದಕ್ಕೆ ಅವಘಡ ಸಂಭವಿಸಿದೆ.

ಸ್ವಲ್ಪ ಆಯ ತಪ್ಪಿದ್ರೂ ವೇದಿಕೆ ಮೇಲಿದ್ದ ಗಣ್ಯರ ಪ್ರಾಣಹಾನಿ ಆಗುತ್ತಿತ್ತು. ವಿದ್ಯುತ್ ಅವಘಡ ಕೂಡ ಸಂಭವಿಸುವ ಸಾಧ್ಯತೆ ಇತ್ತು. ದೇವಿಯ ಆಶೀರ್ವಾದದಿಂದ ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ’ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link