ಬೆಂಗಳೂರು:
ರಾಜ್ಯದಲ್ಲಿ ನವೆಂಬರ್ 20ರಂದು ಮದ್ಯಪ್ರಿಯರಿಗೆ ಆಲ್ಕೋಹಾಲ್ ಸಿಗದು. ಇಡೀ ರಾಜ್ಯಾದ್ಯಂತ ʼಎಣ್ಣೆʼ ಮಾರಾಟವನ್ನು ಮದ್ಯ ಮಾರಾಟಗಾರರೇ ಅಂದು ಸ್ಥಗಿತ ಮಾಡಲು ತೀರ್ಮಾನಿಸಿದ್ದಾರೆ.
ರಾಜ್ಯದಲ್ಲಿ ಮದ್ಯ ಮಾರಾಟಗಾರರಿಂದ ಹಣ ವಸೂಲಿ ಹಾಗೂ ಅಬಕಾರಿ ಇಲಾಖೆಯಲ್ಲಿನ ಮಿತಿ ಮೀರಿದ ಭ್ರಷ್ಟಾಚಾರವನ್ನು ಸರಿಪಡಿಸಬೇಕೆಂದು ಆಗ್ರಹಿಸಿ ರಾಜ್ಯ ಮದ್ಯ ಮಾರಾಟಗಾರರರು ನ.20ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನವೆಂಬರ್ 20ರ ಬುಧವಾರ ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಲಾಗುತ್ತಿದೆ ಎಂದು ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹೇಳಿದ್ದಾರೆ.
ಈ ಕುರಿತು ಗುರುವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 20ರಂದು ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಸಿಎಂ, ಅಬಕಾರಿ ಸಚಿವರು, ಮತ್ತು ಪೊಲೀಸರ ಜೊತೆ ನಮ್ಮ ಸಭೆ ಆಗಬೇಕು. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ, ಇದನ್ನು ಸರಿಪಡಿಸಬೇಕೆಂಬುದು ನಮ್ಮ ಬೇಡಿಕೆ. ಅಕ್ಟೋಬರ್ 25 ರಂದು ನಡೆದ ಸಭೆಯಲ್ಲಿ ಲಂಚದ ಕಿರುಕುಳದ ವಿಚಾರ ಪ್ರಸ್ತಾಪ ಆಗಿತ್ತು. ಆ ಸಭೆಯಲ್ಲಿ ಲಂಚ ಸ್ವೀಕಾರದ ವಿಚಾರವನ್ನು ಬಹಿರಂಗ ಪಡಿಸಿದ್ದೇವೆ ಎಂದರು.
ಅಬಕಾರಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಅಬಕಾರಿ ಇಲಾಖೆಯ ಉಸ್ತುವಾರಿಯನ್ನು ಆರ್ಥಿಕ ಸಚಿವರೇ ವಹಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ನಾವು 500-900 ಕೋಟಿ ಲಂಚದ ಬಗ್ಗೆ ಎಂದೂ ಮಾತಾಡಿಲ್ಲ. ಈ ರೀತಿಯ ತಪ್ಪು ಮಾಹಿತಿಯನ್ನು ಪ್ರಧಾನಿ ಅವರಿಗೆ ಯಾರು ತಿಳಿಸಿದ್ದಾರೆ ಎಂದು ನಮಗೆ ಗೊತ್ತಿಲ್ಲ. ಸತೀಶ್ ಜಾರಕಿ ಹೊಳಿ ಹೊರತುಪಡಿಸಿ ಎಲ್ಲಾ ಹಿಂದಿನ ಸಚಿವರು ಲಂಚ, ವಸೂಲಿ ಮಾಡಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹೇಳಿದರು.
