ದಾವಣಗೆರೆ :
ಅ.22 ರಿಂದ ನ.04 ವರೆಗೆ ಸ್ಪರ್ಶ ಕುಷ್ಠರೋಗ ಪತ್ತೆಹಚ್ಚುವ ಆಂದೋಲನ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಕೈಗೊಳ್ಳಲಾಗಿದೆ.
2020ನೇ ಸಾಲಿಗೆ ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪಣತೊಟ್ಟಿದ್ದು, ಈ ಆಂದೋಲನದಲ್ಲಿ ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ಮಾಡಿ ಕುಷ್ಠರೋಗದ ಅರಿವು ಮತ್ತು ಕುಷ್ಠರೋಗಿಗಳನ್ನು ಪತ್ತೆ ಹಚ್ಚುವಂತಹ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಈ ರೋಗವು ಶಾಪದಿಂದ ಮತ್ತು ಪಾಪದಿಂದ ಬರುವಂತಹುದಲ್ಲ. ಮೈಕೋಬ್ಯಾಕ್ಟಿರಿಯಾ ಲೆಪ್ರೆ ಎಂಬ ಬ್ಯಾಕ್ಟಿರಿಯಾದಿಂದ ಬರುವಂತಹ ಕಾಯಿಲೆಯಾಗಿದೆ. ಇದು ಚರ್ಮ ಮತ್ತು ನರಗಳಿಗೆ ಬರುವಂತಹದ್ದು. ತಿಳಿ-ಬಿಳಿ ತಾಮ್ರ ಬಣ್ಣದಲ್ಲಿ ಮುಖ್ಯವಾಗಿ ಇರುತ್ತದೆ. ಅಲ್ಲದೇ ಆ ಭಾಗದಲ್ಲಿ ಸ್ಪರ್ಶ ಜ್ಞಾನವಿರುವುದಿಲ್ಲ, ಕೂದಲು ಇರುವುದಿಲ್ಲ, ಬೆವರು ಬರುವುದಿಲ್ಲ. ಅಂತಹ ಮಚ್ಚೆಗಳು ಮಾತ್ರ ನಾವು ಕುಷ್ಠರೋಗದ ಮಚ್ಚೆಗಳು ಎಂಬುದಾಗಿ ಊಹಿಸಬಹುದು.
ಕುಷ್ಠರೋಗವು ಒಬ್ಬರಿಂದ ಒಬ್ಬರಿಗೆ ಗಾಳಿಯ ಮುಖೇನ, ರೋಗಿಯು ಕೆಮ್ಮುವುದರಿಂದ, ಸೀನುವುದರಿಂದ, ಆರೋಗ್ಯಯುತ ಮನುಷ್ಯನಿಗೆ ನಿಧಾನಗತಿಯಲ್ಲಿ ಹರಡುತ್ತದೆ. ಅಂದರೆ ಸರಿ ಸುಮಾರು 2 ವರ್ಷದಿಂದ 10 ವರ್ಷದೊಳಗೆ ಈ ಚಿನ್ಹೆಗಳು ಒಬ್ಬ ಮನುಷ್ಯನಲ್ಲಿ ಕಾಣಬಹುದು. ಈ ರೋಗವನ್ನು 2 ಭಾಗವಾಗಿ ವಿಂಗಡಿಸಬಹುದು. ಒಂದರಿಂದ 4 ಮಚ್ಚೆ ಮತ್ತು ಒಂದು ನರ ಭಾಗಿಯಾಗಿದ್ದಲ್ಲಿ ಪ್ಯಾಶ್ಯುಬ್ಯಾಸಿಲರಿ (ಪಿಬಿ) ಎನ್ನಲಾಗುವುದು. ಈ ಹಂತಕ್ಕೆ 6 ತಿಂಗಳ ಉಚಿತ ಔಷಧೋಪಚಾರ (ಎಂ.ಡಿ.ಟಿ), 4 ಕ್ಕಿಂತ ಹೆಚ್ಚು ಮಚ್ಚೆಗಳು 1 ಕ್ಕಿಂತ ಹೆಚ್ಚು ನರಗಳು ಭಾಗಿಯಾಗಿದ್ದಲ್ಲಿ, 12 ತಿಂಗಳ ಉಚಿತ ಔಷಧೋೀಪಚಾರ (ಎಂ.ಡಿ.ಟಿ)ವನ್ನು ನೀಡಲಾಗುವುದು.
ರೋಗಿಯು ಕ್ರಮಬದ್ದವಾಗಿ ಔಷದೋಪಚಾರವನ್ನು ತೆಗೆದುಕೊಂಡಲ್ಲಿ ಕುಷ್ಠರೋಗವು ಸಂಪೂರ್ಣವಾಗಿ ಗುಣಮುಖವಾಗುತ್ತದೆ. ಹಾಗೂ ಅಂಗವೈಕಲ್ಯವನ್ನು ತಡೆಗಟ್ಟಬಹುದು. ಒಂದು ವೇಳೆ ಕುಷ್ಠರೋಗದಿಂದ ಅಂಗವೈಕಲ್ಯತೆ ಹೊಂದಿದ್ದರೂ ಸಹ ರಿಕನ್ಸ್ಟ್ರಕ್ಷನ್ ಸರ್ಜರಿ( reconstruction surgery) ಮಾಡಬಹುದು.
ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಕುಷ್ಠರೋಗ ಪತ್ತೆ ಹಚ್ಚುವ ಈ ಆಂದೋಲನದ ಕುರಿತು ಅರಿವು ಮೂಡಿಸಲು ಜಿಲ್ಲೆಯ ನಾಗರೀಕರ ಮನೆಗೆ ಆರೋಗ್ಯ ಸಹಾಯಕರು, ಆಶಾ ಮತ್ತು ಸ್ವಯಂ ಸೇವಕರು ಭೇಟಿ ನೀಡಿದಾಗ ಕಡ್ಡಾಯವಾಗಿ ಪರೀಕ್ಷಿಸಿಕೊಳ್ಳಬೇಕು. ಕುಷ್ಠರೋಗದ ಬಗ್ಗೆ ಸಂಶಯಗಳಿದ್ದಲ್ಲಿ ಹಾಗೂ ಅಗತ್ಯ ಮಾಹಿತಿ ಬೇಕಾದಲ್ಲಿ ಸಹಾಯವಾಣಿ 104ಕ್ಕೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದೆಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಸರೋಜಾ ಬಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ