ಅಧಿಕಾರ ವಿಕೇಂದ್ರಿಕರಣದ ವಿರುದ್ಧ ಸದಸ್ಯರ ಒಕ್ಕೂಟದ ಗಂಭೀರ ಆರೋಪ

ಬೆಂಗಳೂರು

              ಪಂಚಾಯತ್ ರಾಜ್ ವ್ಯವಸ್ಥೆಯ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ದುರ್ಬಲಗೊಳಿಸಲು ಹೊರಟಿದ್ದು, ಗ್ರಾಮೀಣ ರಸ್ತೆ ಅಭಿವೃದ್ದಿ, ಗ್ರಾಮೀಣ ಕುಡಿಯುವ ನೀರಿನ ಪೂರೈಕೆ ಸೇರಿ ಬಹುತೇಕ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಅನುದಾನ ಮತ್ತು ಕಾರ್ಯವ್ಯಾಪ್ತಿಯನ್ನು ರಾಜ್ಯ ಸರ್ಕಾರ ಕಡಿತಗೊಳಿಸಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಜಿಲ್ಲಾ ಪಂಚಾಯತ್ ಸದಸ್ಯರ ಒಕ್ಕೂಟ ಗಂಭೀರ ಆರೋಪ ಮಾಡಿದೆ.

           ಒಕ್ಕೂಟದ ರಾಜ್ಯಾಧ್ಯಕ್ಷ ಕೆರೆಹಳ್ಳಿ ನವೀನ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ. ಮುನಿರಾಜು ಒಳಗೊಂಡಂತೆ ಹಲವು ಜಿ.ಪಂ. ಅಧ್ಯಕ್ಷರು ಸಾಮೂಹಿಕವಾಗಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದಿಂದ ಸಮರ್ಪಕವಾಗಿ ಅನುದಾನ ನಿಗದಿಮಾಡದಿದ್ದರೆ ಹಾಗೂ ಪಂಚಾಯತ್‍ನ ಕಾರ್ಯವ್ಯಾಪ್ತಿಯನ್ನು ಮರು ನಿಗದಿಗೊಳಿಸದಿದ್ದರೆ ರಾಜ್ಯದ ಎಲ್ಲಾ ಜಿಲ್ಲೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಇದೇ ತಿಂಗಳಲ್ಲಿ ಅನಿರ್ಧಿಷ್ಟ ಕಾಲ ಮುಷ್ಕರ ನಡೆಸುವ ಜತೆಗೆ ಪಂಚಾಯತ್ ವ್ಯವಸ್ಥೆ ಸಬಲೀಕರಣಕ್ಕಾಗಿ ಎಲ್ಲಾ ಜಿಲ್ಲೆಗಳ ಪಂಚಾಯತ್ ಸದಸ್ಯರುಗಳು ಒಟ್ಟುಗೂಡಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

           ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ. ಮುನಿರಾಜು ಮಾತನಾಡಿ, ಮಾಜಿ ಸಚಿವ ರಮೇಶ್ ಕುಮಾರ್ ಅಧ್ಯಕ್ಷತೆಯ ಸಮಿತಿ ನೀಡಿರುವ ವರದಿಯನ್ನು ಸರ್ಕಾರ ನಿರ್ಲಕ್ಷಿಸಿದೆ. ಸಮಿತಿ ವರದಿಯಂತೆ ಕರ್ನಾಟಕ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ತಿದ್ದುಪಡಿಯನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಸದಸ್ಯರುಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಅನುದಾನ ಮಂಜೂರು ಮಾಡಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

           ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಕಚೇರಿ ತೆರೆದು ಕ್ಷೇತ್ರದ ಅಭಿವೃದ್ಧಿಗೆ ಕನಿಷ್ಠ 1 ಕೋಟಿ ರೂ. ಅನುದಾನ ನಿಗದಿಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯ ಫಲಾನುಭವಿಗಳ ಆಯ್ಕೆ ಸಮಿತಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು ಸಹ ಸದಸ್ಯರಾಗಿ ನೇಮಿಸಬೇಕು. ರಾಜ್ಯದ ಕೇಂದ್ರ ಸ್ಥಾನದಲ್ಲಿ ಪಂಚಾಯತ್ ರಾಜ್ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

             ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡುವ ಜತೆಗೆ ಕೇಂದ್ರ ಸರ್ಕಾರದಿಂದ ಬರುತ್ತಿದ್ದ 14ನೇ ಹಣಕಾಸು ಆಯೋಗದ ಅನುದಾನವನ್ನು ಗ್ರಾಮಾಂತರ ಪ್ರದೇಶಗಳ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ಪಂಚಾಯಿತಿಗಳಿಗೂ ನೀಡಬೇಕು ಎಂದು ಸಿ. ಮುನಿರಾಜು ಹೇಳಿದರು.

            ಒಕ್ಕೂಟದ ರಾಜ್ಯಾಧ್ಯಕ್ಷ ಕೆರೆಹಳ್ಳಿ ನವೀನ್, ಜಿಲ್ಲಾ, ತಾಲೂಕು ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಕಸಿದು ಕೊಳ್ಳುವ ಹುನ್ನಾರ ನಡೆಯುತ್ತಿದೆ. ಅಧಿಕಾರ ವಿಕೇಂದ್ರೀಕರಣದ ಬದಲು ಅಧಿಕಾರ ಕೇಂದ್ರಿಕೃತವಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಆರೋಪಿಸಿದರು.

            ಇದರ ವಿರುದ್ದ ಜಾಗೃತಿ ಮೂಡಿಸಲು ರಾಜ್ಯದ 30 ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ಪಂಚಾಯತ್ ಪ್ರತಿನಿಧಿಗಳನ್ನು ಸಂಘಟಿಸಲು ನಿರ್ಧರಿಸಲಾಗಿದೆ. ರಮೇಶ್‍ಕುಮಾರ್ ಅವರ ವರದಿಯನ್ನು ಯಥಾವತ್ ಜಾರಿಗೆ ತರಬೇಕು. ರಾಜ್ಯ ಸರ್ಕಾರದಿಂದ ಬರುತ್ತಿರುವ 3054 ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಜಿಲ್ಲಾ ಪಂಚಾಯತ್‍ಗೆ ನೀಡಬೇಕು. ಗ್ರಾಮೀಣಾಭಿವೃದ್ದಿಗೆ ಒತ್ತು ಕೊಡುವ 29 ಇಲಾಖೆಯ ಸಂಪೂರ್ಣ ನಿರ್ವಹಣೆ ಮತ್ತು ಜವಾಬ್ದಾರಿ ನೀಡಬೇಕು. ಅಭಿವೃದ್ದಿಗಾಗಿ ಹೆಚ್ಚಿನ ಅನುದಾನ ನೀಡಬೇಕು ಎಂದರು.

              ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಹಾಗೂ ಸದಸ್ಯರುಗಳ ಗೌರವ ಧನ ಹೆಚ್ಚಿಸಬೇಕು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಇಲಾಖೆಗಳ ಅನುದಾನ ಬಳಕೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ (ಐಎಎಸ್) ಅಧಿಕಾರಿಗೆ ನೀಡಬೇಕು. ಜಿಲ್ಲಾ ಪಂಚಾಯತ್ ಅನುದಾನದಿಂದ ವೇತನ ಪಡೆಯುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸುವ ಹಾಗೂ ವರ್ಗಾವಣೆ ಮಾಡುವ ಅಧಿಕಾರ ಜಿಲ್ಲಾ ಪಂಚಾಯತ್‍ಗೆ ವಹಿಸಬೇಕು ಎಂದು ಕೆರೆ ಹಳ್ಳಿ ನಿವೀನ್ ಒತ್ತಾಯಿಸಿದರು.

Recent Articles

spot_img

Related Stories

Share via
Copy link