ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು : ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವ ಶಾಲಾ ಮಕ್ಕಳ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಮರು ಪರಿಷ್ಕರಣೆಗೊಂಡ ಪಠ್ಯ ಪುಸ್ತಕಗಳನ್ನು ಹಿಂಪಡೆಯುವಂತೆ ಮನವಿ ಮಾಡಿದ್ದು, ಮರು ಪರಿಷ್ಕರಣೆಗೆ ನೇಮಿಸಿದ ಅಧ್ಯಕ್ಷರು ನಾಡಗೀತೆಗೆ ಅವಮಾನ ಮಾಡಿದ್ದಾರೆ. ಇದು ಕುವೆಂಪು ಮತ್ತು ಅಂಬೇಡ್ಕರ್ ಅವಮಾನ ಮಾಡಿದ್ದಾರೆ. ಇಂಥಹ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.

ಪರಿಷ್ಕರಣೆಯಲ್ಲಿ ಅನೇಕ ತಪ್ಪುಗಳಿವೆ ಕುವೆಂಪು ಭಾವಚಿತ್ರ ಕೈ ಬಿಡಲಾಗಿದೆ. ಬಸವಣ್ಣನವರ ಆಶಯವುಳ್ಳ ಭಾಗವನ್ನು ಕೈ ಬಿಡಲಾಗಿದೆ. ಇಂಥಹ ಅನೇಕ ತಪ್ಪುಗಳಿವೆ. ಹಾಗಾಗಿ ಕೂಡಲೇ ಇದನ್ನು ಹಿಂಪಡೆಯಿರಿ. ಹಿಂದಿನ ಪಠ್ಯವನ್ನೇ ಮುಂದುವರೆಸಿರಿ ಎಂದು ದೇವೇಗೌಡರು ಪತ್ರದ ಮೂಲಕ ಸಿಎಂ ಬೊಮ್ಮಾಗೆ ಮನವಿ ಮಾಡಿದ್ದಾರೆ.

ಪತ್ರದ ಪ್ರಮುಖಾಂಶಗಳು :

ಪಠ್ಯಪುಸ್ತಕಗಳ ಮರು ಪರಿಷ್ಕರಣೆಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ 2022ರ ಜೂನ್ 18 ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ನಾನು ಭಾಗವಹಿಸಿದ್ದಾಗ, ನನ್ನ ಮೂಲಕ ತಮಗೆ ಮನವರಿಕೆ ಮಾಡಲು ನೀಡಿದ ಮನವಿ ಪತ್ರವನ್ನು ಇದಕ್ಕೆ ಲಗತ್ತಿಸಿರುತ್ತೇನೆ.

ಪಠ್ಯಪುಸ್ತಕಗಳ ಮರು ಪರಿಷ್ಕರಣೆಗೆ ನೇಮಿಸಿದ ಸಮಿತಿಯ ಅಧ್ಯಕ್ಷರು ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನ ಮಾಡಿರುತ್ತಾರೆ. ನಾಡಗೀತೆಯನ್ನು ಅಸಭ್ಯವಾಗಿ ತಿರುಚಿದವರಿಗೆ ಬಹುಮಾನ ಕುವೆಂಪು ನೀಡುತ್ತೇನೆಂದು ಹೇಳಿದ್ದು ಕೂಡ ಅವರಿಗೆ ಮಾಡಿದ ದೊಡ್ಡ ಅವಮಾನವೇ ಆಗಿದೆ. ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದು, ನಾಡ ಅಸ್ಮಿತೆಗೆ ಮಾಡಿದ ಅವಮಾನವಾಗಿದೆ. ಜೊತೆಗೆ ಡಾ.ಅಂಬೇಡ್ಕರ್ ಅವರನ್ನೂ ಹಂಗಿಸಿದ್ದಾರೆ.

ಇಂಥ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದ್ದೇ ಮೊದಲ ತಪ್ಪು. ಇನ್ನು ಮರು ಪರಿಷ್ಕರಣೆಯಲ್ಲಿ ಮಾಡಿರುವ ತಪ್ಪುಗಳಂತೂ ಅಸಂಖ್ಯಾತ. ಸಮಾಜ ವಿಜ್ಞಾನ ಪಠ್ಯಪುಸ್ತಕದ ಏಕೀಕರಣ ಪಾಠದಿಂದ ಕುವೆಂಪು ಅವರ ಭಾವಚಿತ್ರವನ್ನು ತೆಗೆದು ಹಾಕಲಾಗಿದೆ. ಬಸವಣ್ಣನವರ ಚಳವಳಿಯ ಆಶಯವುಳ್ಳ ಭಾಗಗಳನ್ನು ಕೈಬಿಡಲಾಗಿದೆ.

ಸಿದ್ಧಗಂಗೆ ಮತ್ತು ಆದಿಚುಂಚನಗಿರಿ ಶ್ರೀಗಳ ಸೇವೆಯ ವಿವರಗಳನ್ನು ತೆಗೆಯಲಾಗಿದೆ. ಅಂಬೇಡ್ಕರ್ ಅವರಿಗೆ ಸಂವಿಧಾನ ಶಿಲ್ಪಿ ಎಂದಿದ್ದ ವಿಶೇಷಣವನ್ನು ತೆಗೆಯಲಾಗಿದೆ. ಅಕ್ಕ, ಕನಕ, ಪುರಂದರ, ಶರೀಫರಂತಹ ಮಹಾನ್ ದಾರ್ಶನಿಕ ಸಂತರ ಪಠ್ಯಗಳನ್ನೇ ತೆಗೆಯಲಾಗಿದೆ. ಕೆಂಪೇಗೌಡ, ಸುರಪುರ ನಾಯಕರ ವಿಷಯಗಳನ್ನು ಕಡಿತಗೊಳಿಸಲಾಗಿದೆ. ಡಾ.ಅಂಬೇಡ್ಕರ್ ಮತ್ತು ಕುವೆಂಪು ಅವರು ಸಾರಿದ ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯತೀತತೆ ಮತ್ತು ವಿಶ್ವಮಾನವತ್ವದ ಪರಿಕಲ್ಪನೆಗಳನ್ನು ಕಡೆಗಣಿಸಿರುವುದು ಪುನರ್ ಪರಿಷ್ಕರಣೆಯಲ್ಲಿ ಎದ್ದು ಕಾಣುತ್ತದೆ.

ಪಠ್ಯಪುಸ್ತಕಗಳಲ್ಲಿನ ಅಸಂಖ್ಯಾತ ದೋಷ ಮತ್ತು ಅನ್ಯಾಯಗಳನ್ನು ಕೇವಲ ಪ್ರತ್ಯೇಕ ಪಟಗಳ ಮುದ್ರಣದಿಂದ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪುನರ್ ಪರಿಷ್ಕರಣೆಯ ಪಠ್ಯಪುಸ್ತಕಗಳನ್ನು ವಾಪಸ್ ಪಡೆದು, ಹಿಂದೆ ಇದ್ದ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ 27 ಸಮಿತಿಗಳು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೇ ಈ ವರ್ಷ ಮುಂದುವರೆಸುವುದು ಸೂಕ್ತವೆಂದು ನಾನು ಕೂಡ ಅಭಿಪ್ರಾಯ ಪಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈಗ ತಮಗೆ ಕಳುಹಿಸುತ್ತಿರುವ ವಿಶ್ವಮಾನವ ಕುವೆಂಪು ಹೋರಾಟ ಸಮಿತಿಯ ಹಕ್ಕೊತ್ತಾಯ ಪತ್ರದ ಅಂಶಗಳನ್ನು ನಾನು ಕೂಡ ಬೆಂಬಲಿಸುತ್ತಾ, ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಶಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

Recent Articles

spot_img

Related Stories

Share via
Copy link
Powered by Social Snap